ಬಸವಣ್ಣನ ಭಾವಚಿತ್ರ ಅಳವಡಿಕೆಗೆ ಒತ್ತಾಯ
ಮಂಡ್ಯ, ಆ.7: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆದೇಶದಂತೆ ಜಿಲ್ಲೆಯ ಸರಕಾರಿ ಕಚೇರಿಗಳಲ್ಲಿ ಬಸವೇಶ್ವರ ಅವರ ಭಾವಚಿತ್ರ ಅಳವಡಿಸುವಂತೆ ಕ್ರಮವಹಿಸಲು ಒತ್ತಾಯಿಸಿ ಕಾಯಕಯೋಗಿ ಫೌಂಡೇಷನ್ ಅಧ್ಯಕ್ಷ ಎಂ.ಶಿವಕುಮಾರ್ ನೇತೃತ್ವದಲ್ಲಿ ಸೋಮವಾರ ಅಪರ ಜಿಲ್ಲಾಧಿಕಾರಿ ಬಿ.ಆರ್.ಪೂರ್ಣಿಮಾ ಅವರಿಗೆ ಮನವಿ ಸಲ್ಲಿಸಲಾಯಿತು.
ರಾಜ್ಯದ ಎಲ್ಲ ಸರಕಾರಿ ಕಚೇರಿಗಳಲ್ಲಿ ಮಾನವತಾವಾದಿ ಬಸವಣ್ಣನವರ ಭಾವಚಿತ್ರವನ್ನು ಅಳವಡಿಸುವಂತೆ ಮುಖ್ಯಮಂತ್ರಿಗಳು ಆದೇಶ ನೀಡಿದ್ದರೂ ಜಿಲ್ಲೆಯಲ್ಲಿ ಸಮರ್ಪಕವಾಗಿ ಜಾರಿಯಾಗಿಲ್ಲ. ಪೊಲೀಸ್ ಇಲಾಖೆ, ಪಂಚಾಯತ್‌ಗಳು, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್ ಕಚೇರಿಗಳಲ್ಲಿ ಭಾವಚಿತ್ರ ಅಳವಡಿಸಿಲ್ಲ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.
ಬಸವೇಶ್ವರರ ಭಾವಚಿತ್ರ ಅಳವಡಿಸುವಂತೆ ಆದೇಶ ಹೊರಡಿಸಿರುವುದು ಸಿದ್ದರಾಮಯ್ಯ ಅವರ ಬಸವಭಕ್ತಿ ಹಾಗೂ ಸಮಾಜವಾದದ ಮೇರು ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿಯಾಗಿದೆ ಎಂದಿರುವ ಅವರು, ಕೂಡಲೇ ಮುಖ್ಯಮಂತ್ರಿ ಅವರ ಆದೇಶವನ್ನು ಅನುಷ್ಠಾನಕ್ಕೆ ತರಲು ಜಿಲ್ಲಾಡಳಿತ ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.