ಬಂದ ಪುಟ್ಟ ಹೋದ ಪುಟ್ಟ ಮುಖ್ಯಮಂತ್ರಿಗಳು: ಬಿಜೆಪಿ ಲೇವಡಿ
ಚಿಕ್ಕಮಗಳೂರು, ಆ.8: ಸಿಎಂ ಸಿದ್ದರಾಮಯ್ಯ ಕಡೂರಿನಲ್ಲಿ ಖಾಸಗಿ ಕಾರ್ಯಕ್ರಮಕ್ಕೆ ಭೇಟಿ ನೀಡಿ ಬಂದಪುಟ್ಟ, ಹೋದ ಪುಟ್ಟ ಎನ್ನುವಂತೆ ಹಿಂತಿರುಗಿದ್ದಾರೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ವರಸಿದ್ಧಿ ವೇಣುಗೋಪಾಲ್ ಲೇವಡಿ ಮಾಡಿದರು.
ಅವರು ಈ ಕುರಿತು ಬುಧವಾರ ಹೇಳಿಕೆ ನೀಡಿದ್ದು, ಕಡೂರು ತಾಲ್ಲೂಕಿಗೆ ಬರ ಆವರಿಸಿಕೊಂಡಿದ್ದು ಕುಡಿಯಲು ನೀರಿಲ್ಲದೆ ಗೋವುಗಳಿಗೆ ಗೋಶಾಲೆ ಇಲ್ಲದೆ ಜಾನುವಾರುಗಳು ಸಾಯುವ ಸ್ಥಿತಿಯಲ್ಲಿದೆ. ಈ ಹಂತದಲ್ಲಿ ಜಿಲ್ಲೆಗೆ ಬಂದಿದ್ದ ಮುಖ್ಯಮಂತ್ರಿಗಳು ಜಿಲ್ಲೆಗೆ ಯಾವುದೇ ವಿಶೇಷ ಅನುದಾನ ನೀಡದೆ ಹೋಗಿರುವುದು ಸರಿಯಲ್ಲಿ ಎಂದಿದ್ದಾರೆ.
ಕಡೂರು ತಾಲ್ಲೂಕಿನಲ್ಲಿ ಪ್ರತಿದಿನ ಸುಮಾರು 75 ಹಳ್ಳಿಗಳಿಗೆ ಟ್ಯಾಂಕರ್‌ಗಳಲ್ಲಿ ನೀರು ಪೂರೈಸುತ್ತಿದ್ದು, ರೈತರು ಬರದಿಂದ ಕಂಗೆಟ್ಟಿದ್ದು ಮುಖ್ಯಮಂತ್ರಿಗಳ ಆಗಮನದ ನಿರೀಕ್ಷೆಯಲ್ಲಿ ಬರದ ನಾಡಿಗೆ ಬಹುದೊಡ್ಡ ಕೊಡುಗೆ ನೀಡುವ ಆಶಾಭಾವ ರೈತ ಮತ್ತು ಜನಸಾಮಾನ್ಯರು ಹೊಂದಿದ್ದರು. ಆದರೆ ಮುಖ್ಯಮಂತ್ರಿಯವರು ಬರದ ಪರಿಹಾರ ಪ್ರಸ್ತಾಪಿಸದೆ ಸೇರಿದ ಜನತೆಗೆ ನಿರಾಸೆಯನ್ನುಂಟು ಮಾಡಿದ್ದಾರೆ ಎಂದು ದೂರಿದ್ದಾರೆ.
ಮುಖ್ಯಮಂತ್ರಿಗಳಿಂದ ಬಹು ದೊಡ್ಡ ಕೊಡುಗೆಯನ್ನು ನಿರೀಕ್ಷಿಸಿದ್ದ ಜನತೆ ನಿರಾಸೆಯಿಂದ ಹಿಂದಿರುಗುವಂತಾಯಿತು. ಖಾಸಗಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ 1 ಗಂಟೆ ಭಾಷಣದ ಉದ್ದಕ್ಕೂ ಕೇಂದ್ರ ಮತ್ತು ಮೋದಿಯವರನ್ನು ದೂಷಿಸಿದರು. ಬೇರೆಯವರನ್ನು ದೂಷಿಸುವುದನ್ನು ಬಿಟ್ಟು ಜಿಲ್ಲೆಗೆ ಶಾಶ್ವತ ಕುಡಿಯುವ ನೀರಿಗಾಗಲಿ ಯಾವುದೇ ಯೋಜನೆಗಳನ್ನು ರೂಪಿಸದೇ ಕೇವಲ ಕೇಂದ್ರ ಸರ್ಕಾರವನ್ನು ದೂಷಿಸುವುದನ್ನು ಬಿಟ್ಟು ಜಿಲ್ಲೆಯ ಅಭಿವೃದ್ಧಿ ಬಗ್ಗೆ ಗಮನ ಹರಿಸಲಿ ಎಂದು ಹೇಳಿದ್ದಾರೆ.