×
Ad

ಕ್ವಿಟ್ ಇಂಡಿಯಾ ನೆನಪಿಗಾಗಿ ಕಾಂಗ್ರೇಸ್ ಕಾರ್ಯಕರ್ತರ ಪಾದಯಾತ್ರೆ

Update: 2017-08-09 17:27 IST

ಚಿಕ್ಕಮಗಳೂರು, ಆ.9: ಕ್ವಿಟ್ ಇಂಡಿಯಾ ಚಳುವಳಿಯ ನೆನಪಿಗಾಗಿ ಜಿಲ್ಲಾ ಕಾಂಗ್ರೇಸ್ ಮತ್ತು ಯುವ ಕಾಂಗ್ರೇಸ್ ಕಾರ್ಯಕರ್ತರು ನಗರದಲ್ಲಿ ಬುಧವಾರ ಪಾದಯಾತ್ರೆ ನಡೆಸಿದರು.

ಗಾಂಧಿ ಟೋಪಿ ಧರಿಸಿ ತಾಲ್ಲೂಕು ಕಛೇರಿ ಆವರಣದಿಂದ ಕಾಲ್ನಡಿಗೆಯಲ್ಲಿ ಹೊರಟ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಮಹಾತ್ಮಾ ಗಾಂಧಿ ಉದ್ಯಾನವನಕ್ಕೆ ತೆರಳಿ ರಾಷ್ಟ್ರಪಿತನ ವಿಗ್ರಹಕ್ಕೆ ಮಾಲಾರ್ಪಣೆ ಮಾಡಿದರು.  ನಂತರ ಪ್ರತಿಮೆ ಎದುರು ಕುಳಿತು ರಾಷ್ಟ್ರಪಿತನಿಗೆ ಪ್ರಿಯವಾದ ರಘುಪತಿ ರಾಘವ ರಾಜಾರಾಂ ಗೀತೆಯನ್ನು ಸಾಮೂಹಿವಾಗಿ ಹಾಡಿದರು.

ತರೀಕೆರೆ ಶಾಸಕ ಶ್ರೀನಿವಾಸ್ ಮಾತನಾಡಿ, ಇಂದಿನ ಯುವಜನತೆಯಲ್ಲಿ ಸ್ವಾತಂತ್ರ್ಯ ಹೋರಾಟದ ಬಗ್ಗೆ ಅರಿವು ಮೂಡಿಸುವುದು ಹಾಗೂ ಅವರಲ್ಲಿ ದೇಶ ಭಕ್ತಿ ಮತ್ತು ರಾಷ್ಟ್ರಪ್ರೇಮವನ್ನು ಬೆಳೆಸುವ ಉದ್ದೇಶದಿಂದ ಈ ಕಾರ್ಯಕ್ರಮ ದೇಶಾದ್ಯಂತ ನಡೆಸಲಾಗುತ್ತಿದೆ ಎಂದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಲ್.ಮೂರ್ತಿ ಮಾತನಾಡಿ, ಬ್ರಿಟೀಷರನ್ನು ದೇಶದಿಂದ ಹೊರ ಹಾಕಲು ಅಂದು ಕ್ವಿಟ್ ಇಂಡಿಯಾ ಚಳುವಳಿ ನಡೆಸಲಾಯಿತು. ಆದರೆ ಇಂದು ಬ್ರಿಟೀಷರ ಬುದ್ದಿ ಇರುವವರ ವಿರುದ್ದ ಪಕ್ಷದ ಕಾರ್ಯಕರ್ತರು ಚಳುವಳಿ ನಡೆಸಬೇಕಾಗಿದೆ ಎಂದು ಹೇಳಿದರು.

ಮಾಜಿ ಎಂಎಲ್‌ಸಿ ಗಾಯತ್ರಿ ಶಾಂತೇಗೌಡ ಮಾತನಾಡಿ, ದೇಶದ ಸ್ವಾತಂತ್ರ್ಯಕ್ಕಾಗಿ ನಿಜವಾಗಿ ಹೋರಾಟ ನಡೆಸಿದವರು ಯಾರು ಎಂಬುದನ್ನು ಇಂದಿನ ಯುವ ಜನತೆಗೆ ಪಕ್ಷದ ಕಾರ್ಯಕರ್ತರು ತಿಳಿಸಬೇಕು ಎಂದರು.

ಈ ವೇಳೆ ಸಿಡಿಎ ಅಧ್ಯಕ್ಷ ಸೈಯದ್ ಹನೀಫ್, ಜಿಲ್ಲಾ ಯುವ ಕಾಂಗ್ರೇಸ್ ಅಧ್ಯಕ್ಷ ಕೆ.ವಿ.ಶಿವಕುಮಾರ್, ಪ್ರಧಾನ ಕಾರ್ಯದರ್ಶಿ ಸಿ.ಸಿ.ಮಧು, ವಿಧಾನ ಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ರಾಹಿಲ್ ಷರೀಫ್, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಮಂಜೇಗೌಡ, ಪಂಚಾಯತ್ ರಾಜ್ ಸಂಘಟನೆ ರಾಜ್ಯ ಸಂಚಾಲಕ ಬಿ.ಎಂ.ಸಂದೀಪ್, ಪರಿಶಿಷ್ಠ ಜಾತಿ ವಿಭಾಗದ ಜಿಲ್ಲಾಧ್ಯಕ್ಷ ಎಂ.ಸಿ.ಹೂವಪ್ಪ, ಜಿಪಂ ಮಾಜಿ ಅಧ್ಯಕ್ಷ ಕೆ.ಮಹಮ್ಮದ್, ಎಂ.ಸಿ.ಶಿವಾನಂದ ಸ್ವಾಮಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News