×
Ad

ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಳಂಕ ತರುವ ಬಿಜೆಪಿ ಯತ್ನ ವಿಫಲ: ಗಾಯತ್ರಿ ಶಾಂತೇಗೌಡ

Update: 2017-08-09 17:29 IST

ಚಿಕ್ಕಮಗಳೂರು, ಆ.9: ಕುತಂತ್ರ ಮತ್ತು ಷಡ್ಯಂತ್ರದಿಂದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಳಂಕ ತರುವ ಬಿಜೆಪಿಗರ ಪ್ರಯತ್ನವನ್ನು ಕಾಂಗ್ರೆಸ್ ವಿಫಲಗೊಳಿಸಿ ರಾಜ್ಯಸಭೆಗೆ ಗುಜರಾತ್‌ನಿಂದ ಅಹ್ಮದ್ ಪಟೇಲ್‌ರನ್ನು ಪುನರಾಯ್ಕೆ ಮಾಡಿದೆ ಎಂದು ಮಾಜಿ ಎಂಎಲ್‌ಸಿ ಶ್ರೀಮತಿ ಎ.ವಿ.ಗಾಯತ್ರಿಶಾಂತೇಗೌಡ ಹೇಳಿದರು.

ಅವರು ಬುಧವಾರ ನಗರದ ಆಜಾದ್‌ಪಾರ್ಕ್‌ನಲ್ಲಿ ರಾಜ್ಯಸಭೆಗೆ ಅಹ್ಮದ್ ಪಟೇಲ್ ಪುನರಾಯ್ಕೆ ಸಂಬಂಧ ಜಿಲ್ಲಾ ಕಾಂಗ್ರೆಸ್ ಮತ್ತು ಯುವ ಕಾಂಗ್ರೆಸ್ ಹಮ್ಮಿಕೊಂಡಿದ್ದ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ರಾಜ್ಯ ಸಭೆಗೆ ನಡೆದ ಚುನಾವಣೆ ಪೂರ್ವ ಹಣಬಲ ಮತ್ತು ತೋಳ್ಬಲವನ್ನು ಮಣಿಯದ ಕಾಂಗ್ರೆಸ್ ಶಾಸಕರು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗೌರವಿಸುವ ಮೂಲಕ ಎತ್ತಿ ಹಿಡಿದಿದ್ದಾರೆ. ಅಹ್ಮದ್ ಪಟೇಲ್‌ರನ್ನು ಶತಾಯಗತಾಯ ಸೋಲಿಸಬೇಕು ಎನ್ನುವ ಪ್ರಧಾನಿ ಮೋದಿ ಮತ್ತು ಅನಿತ್ ಶಾ ಕನಸು ನನಸಾಗಲು ಕಾಂಗ್ರೆಸ್ ಬಿಡಲಿಲ್ಲ ಎಂದು ನುಡಿದರು.

ರಾಜ್ಯಸಭೆಯಲ್ಲಿ ಗೆಲುವಿಗೆ ಅವಕಾಶ ಇಲ್ಲ ಎಂಬುದು ಗೊತ್ತಿದ್ದರೂ ಕುದುರೆ ವ್ಯಾಪಾರಕ್ಕಿಳಿದ ಬಿಜೆಪಿ ಮೂರನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿ ತೀವ್ರ ಮುಖಭಂಗಕ್ಕೀಡಾಗಿದೆ. ಅದು ಹಿಂದೆ ಕರ್ನಾಟಕದಲ್ಲಿ ಆಪರೇಷನ್ ಕಮಲ ನಡೆಸುವ ಮಾದರಿಯಲ್ಲಿ ಗುಜರಾತ್ ನಲ್ಲೂ ಆಪರೇಷನ್ ಕಮಲ ನಡೆಸಲು ಕುತಂತ್ರ ನಡೆಸಿ ವಿಫಲವಾಗಿದೆ. ಭವಿಷ್ಯದಲ್ಲಿ ಬಿಜೆಪಿಗರ ಇಂತಹ ಷಡ್ಯಂತ್ರಗಳಿಗೆ ಕಾಂಗ್ರೆಸ್ ಮಣಿಯದು ಎಂದು ತಿಳಿಸಿದರು.

ಈ ಸಮಯದಲ್ಲಿ ಜಿಲ್ಲಾ ಯುವ ಕಾಂಗ್ರೇಸ್ ಅಧ್ಯಕ್ಷ ಕೆ.ವಿ.ಶಿವಕುಮಾರ್, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಮಂಜೇಗೌಡ, ಪರಿಶಿಷ್ಟಜಾತಿ ವಿಭಾಗದ ಜಿಲ್ಲಾಧ್ಯಕ್ಷ ಎಂ.ಸಿ.ಹೂವಪ್ಪ, ಸಿಡಿಎ ಅಧ್ಯಕ್ಷ ಸೈಯದ್ ಹನೀಫ್, ಜಿಪಂ ಮಾಜಿ ಅಧ್ಯಕ್ಷ ಕೆ.ಮಹಮ್ಮದ್, ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಾಹಿಲ್ ಷರೀಫ್, ಪ್ರಧಾನ ಕಾರ್ಯದರ್ಶಿ ಸಿ.ಸಿ.ಮಧು, ಪಂಚಾಯತ್ ರಾಜ್ ಸಂಘಟನೆ ರಾಜ್ಯ ಸಂಚಾಲಕ ಬಿ.ಎಂ.ಸಂದೀಪ್, ವಕ್ತಾರ ಎಂ.ಸಿ.ಶಿವಾನಂದ ಸ್ವಾಮಿ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News