ಹಬ್ಬದ ಆಚರಣೆ ಅಂಗವಾಗಿ ಪೂರ್ವಭಾವಿ ಸಭೆ
ಬಣಕಲ್, ಆ.9: ಮುಂಬರುವ ಗೌರಿಗಣೇಶ ಹಬ್ಬದ ಆಚರಣೆಯ ಪ್ರಯುಕ್ತ ಸಾರ್ವಜನಿಕರು ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಪೋಲಿಸರೊಂದಿಗೆ ಸಾರ್ವಜನಿಕರು ಸಹಕರಿಸಬೇಕೆಂದು ಬಣಕಲ್ ಪೋಲಿಸ್ ಠಾಣಾ ಮುಖ್ಯ ಪೇದೆ ಎಸ್.ಬಾಬು ಹೇಳಿದರು.
ಅವರು ಬುಧವಾರ ಕೊಟ್ಟಿಗೆಹಾರದಲ್ಲಿ ಬಣಕಲ್ ಹೋಬಳಿಯ ದೇವರಮನೆ, ಕೋಗಿಲೆ, ಕೋಡೇಬೈಲ್, ಗುತ್ತಿಹಳ್ಳಿ, ಕೊಟ್ಟಿಗೆಹಾರ ವ್ಯಾಪ್ತಿಯ ತರುವೆ, ದೇವನಗೂಲ್, ಬಿನ್ನಡಿ, ಅತ್ತಿಗೆರೆ ಗ್ರಾಮದ ಗ್ರಾಮಗಸ್ತು ಸಭೆಯಲ್ಲಿ ಮಾತನಾಡಿದರು.
ಗಣಪತಿ ಹಬ್ಬ ಆಚರಿಸಲು ಮುಂಜಾಗ್ರತೆ ಕ್ರಮವಾಗಿ ಕೆಲವು ನಿಯಮಗಳನ್ನು ಪಾಲಿಸಿ ಶಾಂತಿಯುತವಾಗಿ ಸಾರ್ವಜನಿಕರು ಹಬ್ಬ ಆಚರಿಸಬೇಕು. ಗಣಪತಿ ಮೂರ್ತಿ ವಿಗ್ರಹವನ್ನು ಪ್ರತಿಷ್ಠಾಪಿಸುವ ಮೊದಲು ಸ್ಥಳೀಯ ಗ್ರಾಪಂ ನಲ್ಲಿ ಅನುಮತಿ ಪಡೆಯಬೇಕು. ವಿಗ್ರಹವನ್ನು ಇಡುವ ಜಾಗದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಂಡು ಇತರರ ತಕರಾರು ಇರಬಾರದು ಎಂದು ತಿಳಿಸಿದರು.
ಹಬ್ಬದ ಮೆರವಣಿಗೆ ಹಾಗೂ ಧ್ವನಿವರ್ಧಕ ಬಳಸಲು ಪೋಲಿಸ್ ಇಲಾಖೆಯಿಂದ ಅನುಮತಿ ಪಡೆಯಬೇಕು. ಮೆರವಣಿಗೆಯಲ್ಲಿ ಅಹಿತಕರ ಘಟನೆ ಸಂಭವಿಸದಂತೆ ಆಯೋಜಕರು ನೋಡಿಕೊಳ್ಳಬೇಕು. ಗಣಪತಿ ವಿಸರ್ಜನೆ ಮತ್ತು ಮೆರವಣಿಗೆ ಮಾಡಲು ನಿಗದಿಯಾದ ಸಮಯದಲ್ಲಿ ಮಾಡಿ ಮುಗಿಸಬೇಕು. ಯಾವುದೇ ಕಾನೂನು ಭಂಗದ ಚಟುವಟಿಕೆಗಳು ನಡೆಯಬಾರದು. ಉತ್ತಮ ರೀತಿಯಲ್ಲಿ ಹಬ್ಬದ ಆಚರಣೆಗಳು ನಡೆಸಬೇಕು. ಆಚರಣೆಯಲ್ಲಿ ಅಹಿತಕರ ಘಟನೆಗಳು ನಡೆದಲ್ಲಿ ಆಯೋಜಕರನ್ನು ಹೊಣೆ ಮಾಡಲಾಗುವುದು ಎಂದರು.
ಬಣಕಲ್ ಪೋಲಿಸ್ ಪೇದೆ ಹೆಚ್.ಎಲ್.ಸಂತೋಷ್ ಕುಮಾರ್ ಮಾತನಾಡಿ, ಯಾವುದೇ ಹಬ್ಬಗಳು ಶಾಂತಿಯುತವಾಗಿ ನಡೆಯಲು ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ. ಶಾಂತಿ ಕದಡದಂತೆ ಹಬ್ಬದ ಕಾರ್ಯಕ್ರಮಗಳ ಮೇಲ್ವಿಚಾರಣೆ ವಹಿಸಿರುವ ಪ್ರತಿನಿದಿಗಳು ಅಚ್ಚುಕಟ್ಟಾಗಿ ಕಾರ್ಯಕ್ರಮ ನಿರ್ವಹಿಸಬೇಕು. ಡಿಜೆಯಂತಹ ಧ್ವನಿವರ್ಧಕ ಬಳಸಲು ಯಾವುದೇ ಹಬ್ಬದಲ್ಲಿ ಅನುಮತಿ ಇಲ್ಲ. ಗ್ರಾಮಸ್ಥರು ಶಾಂತಿ ಸುವ್ಯವಸ್ಥೆಯ ನಿಟ್ಟಿನಲ್ಲಿ ಹಬ್ಬದ ಆಚರಣೆಗೆ ಮುಂಜಾಗರೂಕತೆ ವಹಿಸಿ ಕೆಲಸ ಮಾಡಬೇಕು. ಸೂಕ್ತ ಕ್ರಮಗಳನ್ನು ಅಳವಡಿಸಿ ಶಾಂತಿಯಿಂದ ಹಬ್ಬ ಆಚರಿಸಲು ಸಾರ್ವಜನಿಕರು ಪೋಲಿಸರೊಂದಿಗೆ ಸಹಕಾರ ನೀಡಬೇಕು ಎಂದು ನುಡಿದರು.
ಸಭೆಯಲ್ಲಿ ಆಟೋ ಚಾಲಕರ ಮತ್ತು ಮಾಲಕರ ಸಂಘದ ಅಧ್ಯಕ್ಷ ದೇವೆಂದ್ರ, ಕಾರ್ಯಧರ್ಶಿ ನಾಗೇಶ್, ರಘು, ಮಹೇಶ್, ದಿನೇಶ್, ಜಗ್ಗನ್ನಾಥ್, ಬಾವಕ, ಬಿನುವರ್ಗಿಸ್, ಸ್ಪಂಧನ್‌ಗೌಡ, ದೀಪಕ್, ಶ್ರೀಧರ್‌ಭಂಡಾರಿ, ಪೂಣೇಶ್, ಬೈರಯ್ಯ ಮತ್ತಿತರರಿದ್ದರು.