ಪುರಸಭೆಯ ನೂತನ ಅಧ್ಯಕ್ಷರಾಗಿ ಪಿ.ಗಿರೀಶ್ ಅವಿರೋಧ ಆಯ್ಕೆ

Update: 2017-08-09 13:22 GMT

ಗುಂಡ್ಲುಪೇಟೆ, ಆ.9: ಕಳೆದ ಹಲವು ದಿನಗಳಿಂದ ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಪಟ್ಟಣದ ಪುರಸಭೆಗೆ ನೂತನ ಅಧ್ಯಕ್ಷರಾಗಿ ಪಿ.ಗಿರೀಶ್ ಅವಿರೋಧವಾಗಿ ಆಯ್ಕೆಯಾದರು.

23 ಸದಸ್ಯರ ಆಡಳಿತ ಮಂಡಲಿಯಲ್ಲಿ ಕಾಂಗ್ರೆಸ್ ನ 22 ಸದಸ್ಯರು ಹಾಗೂ ಒಬ್ಬರು ಬಿಜೆಪಿ ಸದಸ್ಯರಿದ್ದಾರೆ. ಪಕ್ಷದ ಒಳ ಒಪ್ಪಂದದಂತೆ ಕಳೆದ ಸಾಲಿನಲ್ಲಿ ಅಧ್ಯಕ್ಷರಾಗಿದ್ದ ಭಾಗ್ಯಮ್ಮ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ತೆರವಾದ ಸ್ಥಾನವನ್ನಲಂಕರಿಸಲು ಆಕಾಂಕ್ಷಿಗಳು ತೀವ್ರ ಕಸರತ್ತು ನಡೆಸಿದ್ದು, ಹೈಕಮಾಂಡ್ ಮೇಲೆ ತೀವ್ರ ಒತ್ತಡ ಹೇರಿದ್ದರು. ಹಿಂದೆ ಸಚಿವ ಮಹದೇವಪ್ರಸಾದ್ ತೀರ್ಮಾನವೇ ಅಂತಿಮವಾಗುತ್ತಿತ್ತು. ಆದರೆ ಮಂಗಳವಾರ ಶಾಸಕಿ ಡಾ.ಗೀತಾಮಹದೇವಪ್ರಸಾದ್, ಪುತ್ರ ಗಣೇಶಪ್ರಸಾದ್, ಕಾಡಾ ಅಧ್ಯಕ್ಷ ಎಚ್.ಎಸ್.ನಂಜಪ್ಪ ಹಾಗೂ ಮುಖಂಡರು ಪುರಸಭೆ ಸದಸ್ಯರು ಹಾಗೂ ಮುಖಂಡರ ಜೊತೆಗೂಡಿ ಬೆಳಗಿನಿಂದ ಸಂಜೆಯವರೆಗೂ ಸಭೆ ನಡೆಸಿದರೂ ಒಮ್ಮತದ ಅಭ್ಯರ್ಥಿ ಆಯ್ಕೆಮಾಡಲು ಸಾಧ್ಯವಾಗಲಿಲ್ಲ  ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಆಕಾಂಕ್ಷಿಯಾಗಿದ್ದ ಜಿ.ಕೆ.ನಾಗೇಂದ್ರ ಕಣದಿಂದ ಹಿಂದೆ ಸರಿದ ಪರಿಣಾಮವಾಗಿ ಬುಧವಾರ ಬೆಳಗ್ಗೆ 10 ಗಂಟೆಗೆ ಪುರಸಭೆಗೆ ತೆರಳಿದ ಪಿ.ಗಿರೀಶ್, ಶಶಿಧರ್ ಹಾಗೂ ನೂರುಲ್ಲಾ ಚುನಾವಣಾಧಿಕಾರಿಗೆ ತಮ್ಮ ನಾಮಪತ್ರವನ್ನು ಸಲ್ಲಿಸುವ ಮೂಲಕ ಹೈಕಮಾಂಡಿಗೆ ತಲೆನೋವು ತಂದಿದ್ದರು. ಇದರಿಂದ ಪಕ್ಷದಲ್ಲಿ ಒಡಕುಂಟಾಗಿ ಮುಂದಿನ ವಿಧಾನಸಭಾ ಚುನಾವಣೆಯ ಮೇಲೆ ಪರಿಣಾಮವುಂಟಾಗುವ ಭೀತಿಯುಂಟಾಗಿತ್ತು. ಇದರಿಂದ ಶಾಸಕಿ ಡಾ.ಗೀತಾ ಮಹದೇವಪ್ರಸಾದ್ ಪುತ್ರ ಗಣೇಶಪ್ರಸಾದ್ ಪ್ರವಾಸಿ ಮಂದಿರಕ್ಕೆ ಮೂವರು ಅಭ್ಯರ್ಥಿಗಳನ್ನು ಕರೆದು ಎಲ್ಲರನ್ನೂ ತಲಾ 6 ತಿಂಗಳು ಅಧ್ಯಕ್ಷರನ್ನಾಗಿಸುವ ಭರವಸೆ ನೀಡಿದ ನಂತರ ಶಶಿಧರ್ ಹಾಗೂ ನೂರುಲ್ಲಾ ತಮ್ಮ ನಾಮಪತ್ರ ಹಿಂತೆಗೆದುಕೊಂಡರು.

ಪಿ.ಗಿರೀಶ್ ಒಬ್ಬರೇ ಅಂತಿಮವಾಗಿ ಕಣದಲ್ಲಿ ಉಳಿದಿದ್ದರಿಂದ ಅಧ್ಯಕ್ಷರಾಗಿ ಆಯ್ಕೆಯಾದರು ಎಂದು ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ತಹಸೀಲ್ದಾರ್ ಕೆ.ಸಿದ್ದು ಪ್ರಕಟಿಸಿದರು.

ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷರಾದ ಭಾಗ್ಯಮ್ಮ, ಪಿ.ಚಂದ್ರಪ್ಪ, ಎನ್.ರಮೇಶ್, ಬಿ.ವೆಂಕಟಾಚಲ, ಸದಸ್ಯರಾದ ಎಸ್.ಗೋವಿಂದರಾಜನ್, ಶಶಿಧರ್, ಷಾಫಿಯಾ, ನಾಗರತ್ನಮ್ಮ, ಮಲ್ಲರಾಜು, ರಂಗಸ್ವಾಮಿ ಮುಂತಾದವರು ಹಾಜರಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News