ಆರ್‌ಜೆಡಿ ವಾರ್ಡ್ ಕೌನ್ಸಿಲರ್‌ನ ಗುಂಡಿಕ್ಕಿ ಹತ್ಯೆ

Update: 2017-08-10 05:54 GMT

ಪಾಟ್ನಾ, ಆ.10: ರಾಷ್ಟ್ರೀಯ ಜನತಾ ದಳ(ಆರ್‌ಜೆಡಿ)ಪಕ್ಷದ ವಾರ್ಡ್ ಕೌನ್ಸಿಲರ್‌ವೊಬ್ಬರನ್ನು ಗುರುವಾರ ಬೆಳಗ್ಗೆ ಮೋಟಾರ್‌ಸೈಕಲ್‌ನಲ್ಲಿ ಬಂದ ದುಷ್ಕರ್ಮಿಗಳ ತಂಡ ಗುಂಡಿಕ್ಕಿ ಸಾಯಿಸಿದೆ.

ನಗರದ ವಾರ್ಡ್ ನಂ.15ರ ಕೌನ್ಸಿಲರ್ ಕೇದಾರ್ ರೈ ದುಷ್ಕರ್ಮಿಗಳ ಗುಂಡಿಗೆ ಬಲಿಯಾಗಿದ್ದಾರೆ. ರೈ ಬೆಳಗ್ಗೆ ವಾಕಿಂಗ್‌ಗೆ ತೆರಳಿದ್ದ ಸಂದರ್ಭದಲ್ಲಿ ದುಷ್ಕರ್ಮಿಗಳು ಈ ಕೃತ್ಯ ಎಸೆಗಿದ್ದಾರೆ. ರಕ್ತದ ಮಡುವಿನಲ್ಲಿದ್ದ ರೈ ಅವರನ್ನು ತಕ್ಷಣವೇ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಯ ವೇಳೆ ರೈ ಕೊನೆಯುಸಿರೆಳೆದಿದ್ದಾರೆ. ಮೃತದೇಹವನ್ನು ಪೋರ್ಸ್ಟ್ ಮಾರ್ಟಂ ಪರೀಕ್ಷೆಗಾಗಿ ಕಳುಹಿಸಿಕೊಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

‘‘ಮೃತ ಕೌನ್ಸಿಲರ್ ಕುಟುಂಬ ಸದಸ್ಯರು ನೀಡಿರುವ ಹೇಳಿಕೆಯನ್ನು ಆಧರಿಸಿ ಇಬ್ಬರನ್ನು ಬಂಧಿಸಲಾಗಿದೆ. ದುಷ್ಕರ್ಮಿಗಳನ್ನು ತಕ್ಷಣವೇ ಬಂಧಿಸುವ ವಿಶ್ವಾಸ ನಮಗಿದೆ’’ಎಂದು ಪಾಟ್ನಾದ ಹಿರಿಯ ಪೊಲೀಸ್ ಅಧೀಕ್ಷಕ ಮನು ಮಹಾರಾಜ್ ಹೇಳಿದ್ದಾರೆ.

ಕೌನ್ಸಿಲರ್ ಹತ್ಯೆಗೆ ಭೂವಿವಾದವೇ ಕಾರಣವೆಂದು ಶಂಕಿಸಲಾಗಿದೆ. ರೈ ದನಾಪುರ್‌ನ ಸಗುನ್‌ಮೊರ್ ಪ್ರದೇಶದಲ್ಲಿ ಸಾಕಷ್ಟು ಆಸ್ತಿಪಾಸ್ತಿ ಹೊಂದಿದ್ದರು. ಕಳೆದ ಕೆಲವು ವರ್ಷಗಳಿಂದ ಭೂ ಮಾಫಿಯಾದಲ್ಲಿ ಸಕ್ರಿಯರಾಗಿದ್ದರು ಎನ್ನಲಾಗಿದೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ರೈ ಮೇಲೆ ಸುಮಾರು 20 ಕ್ರಿಮಿನಲ್ ಪ್ರಕರಣ ದಾಖಲಾಗಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News