ಅಹ್ಮದ್ ಪಟೇಲ್ ಗೆಲುವಿಗೆ ಕಾರಣವಾದ 44ನೇ ಮತ ಯಾರದ್ದು ?

Update: 2017-08-10 10:16 GMT

ಅಹ್ಮದಾಬಾದ್, ಆ.10: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ ರಾಜ್ಯಸಭಾ ಚುನಾವಣೆಯನ್ನು ಎಲ್ಲಾ ಎಡರುತೊಡರುಗಳನ್ನು ದಾಟಿಯೂ ಗೆದ್ದಿರಬಹುದು. ಆದರೆ ಅವರ ಗೆಲುವಿಗೆ ನಿರ್ಣಾಯಕವಾಗಿ ಪರಿಣಮಿಸಿದ ಆ ಒಂದು ಹೆಚ್ಚುವರಿ ಮತ ಯಾರು ಚಲಾಯಿಸಿದ್ದು ಎಂಬುದು ಕುತೂಹಲಕ್ಕೆಡೆ ಮಾಡಿಕೊಟ್ಟಿದೆ.

ಪಟೇಲ್ ಅವರಿಗೆ ಒಟ್ಟು 44 ಮತಗಳು ದೊರೆತಿದ್ದವು. ಆದರೆ ಕಾಂಗ್ರೆಸ್ ಪಕ್ಷದ ಕೇವಲ 43 ಶಾಸಕರು ಅವರ ಪರವಾಗಿ ಮತ ಚಲಾಯಿಸಿದ್ದರಿಂದ ಆ 44ನೇ ಮತದಾರ ಯಾರೆಂಬುದು ಇನ್ನೂ ತಿಳಿದಿಲ್ಲ. ಈ ಮತವನ್ನು ಜೆಡಿ(ಯು) ಪಕ್ಷದ ಏಕೈಕ ಶಾಸಕ ಛೋಟುಭಾಯಿ ವಾಸವ ಅಥವಾ ಎನ್.ಸಿ.ಪಿ.ಯ ಜಯಂತ್ ಪಟೇಲ್ ಅವರದ್ದೂ ಆಗಿದ್ದಿರಬಹುದು. ಜಯಂತ್ ಅವರಂತೂ ತಾವು ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡಿದ್ದಾಗಿ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ಗುಜರಾತ್ ರಾಜ್ಯದಲ್ಲಿ ಬಿಜೆಪಿ ತನ್ನ 22 ವರ್ಷಗಳ ಆಡಳಿತದಲ್ಲಿ ಆದಿವಾಸಿಗಳನ್ನು ಯಾವತ್ತೂ ನಿರ್ಲಕ್ಷ್ಯಿಸಿದೆ ಎಂದು ವಾಸವ ಹೇಳಿದ್ದರೆ ಅವರು ಮತ ಚಲಾಯಿಸಲು ಬಂದಾಗ ಅವರ ಜತೆ ಬಿಜೆಪಿ ನಾಯಕರಾದ ಐ.ಕೆ.ಜಡೇಜಾ ಮತ್ತು ಭರತಸಿಂಹ ಪರ್ಮಾರ್ ಅವರೂ ಇದ್ದಾರೆ. ಗಾಂಧಿನಗರ ತಲುಪುವ ಮುನ್ನ ಅವರು ಕಾರಿನಲ್ಲಿ ಕಾಂಗ್ರೆಸ್ ನಾಯಕರೊಂದಿಗೆ ಪ್ರಯಾಣಿಸಿದ್ದರು.

ವಾಸವ ತಮ್ಮ ಪರವಾಗಿ ಮತ ಚಲಾಯಿಸಿದ್ದಾರೆ ಎಂದು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳೆರಡೂ ಹೇಳುತ್ತಿವೆ.
ಕುತೂಹಲಕಾರಿಯೆಂದರೆ ಅಹ್ಮದಾಬಾದ್ ನಲ್ಲಿ ವಾಸವ ಅವರು ತಮ್ಮ ಮತ ಚಲಾಯಿಸಿದ ಕೂಡಲೇ ಅಹ್ಮದ್ ಪಟೇಲ್ ಅವರಿಗೆ ಧನ್ಯವಾದ ಕೂಡ ಹೇಳಿದ್ದಾರೆ.

ಆದರೆ ಮತ ಚಲಾಯಿಸುವ ಮುನ್ನ ಪತ್ರಿಕೆಯೊಂದರೊಂದಿಗೆ ಮಾತನಾಡಿದ ವಾಸವ, ತಾವು ಯಾರಿಗೆ ಮತ ಚಲಾಯಿಸುವುದೆಂದು ಇನ್ನೂ ನಿರ್ಧರಿತವಾಗಿಲ್ಲ. ಅದರೆ ಪಕ್ಷ ನಾಯಕ ನಿತೀಶ್ ಕುಮಾರ್ ಅವರು ಬಿಜೆಪಿ ಅಭ್ಯರ್ಥಿಗೆ ಮತ ಚಲಾಯಿಸಲು ಹೇಳಿದ್ದರೆ, ಶರದ್ ಯಾದವ್ ಅವರು ಅಹ್ಮದ್ ಪಟೇಲ್ ಅವರನ್ನು ಬೆಂಬಲಿಸಲು ಹೇಳಿದ್ದರು ಎಂದು ತಿಳಿಸಿದ್ದರು.

ಎನ್.ಸಿ.ಪಿ.ಗೆ ಗುಜರಾತ್ ನಲ್ಲಿ ಇಬ್ಬರು ಶಾಸಕರಿದ್ದು, ಕುಟಿಯಾನ ಶಾಸಕ ಕಂಧಲ್ ಜಡೇಜಾ ಅವರು ಬಿಜೆಪಿಗೆ ಮತ ಚಲಾಯಿಸಿದ್ದಾಗಿ ಹೇಳಿದ್ದರು. ಅವರು ಮತ ಚಲಾಯಿಸಲು ಬಂದಾಗ ಅಮಿತ್ ಶಾ ಕಾಲಿಗೂ ಎರಗಿದ್ದರು. ಇನ್ನೊಬ್ಬ ಶಾಸಕ ಜಯಂತ್ ಪಟೇಲ್ ಅವರು ತಾವು ಕಾಂಗ್ರೆಸ್ ಅಭ್ಯರ್ಥಿಗೆ ಮತ ಚಲಾಯಿಸಿದ್ದಾಗಿ ಹೇಳಿಕೊಂಡಿದ್ದರು. ತನ್ನ ಒಬ್ಬ ಶಾಸಕ ಪಕ್ಷದ ವಿಪ್ ಉಲ್ಲಂಘಿಸಿದ್ದಾರೆಂದು ಚುನಾವಣೆ ನಂತರ ಎನ್.ಸಿ.ಪಿ. ಹೇಳಿಕೊಂಡಿತ್ತು.

ಅತ್ತ ಗುಜರಾತ್ ಪರಿವರ್ತನ್ ಪಾರ್ಟಿ ಶಾಸಕ ನಳಿನ್ ಕೊಟಡಿಯಾ ತಾವು ಬಿಜೆಪಿ ವಿರುದ್ಧ ಮತ ಚಲಾಯಿಸಿದ್ದಾಗಿ ಹೇಳಿದ್ದರು. ಆದರೆ ಅವರು ಅಡ್ಡ ಮತದಾನ ಮಾಡಿರುವ ಸಾಧ್ಯತೆಯನ್ನು ಬಿಜೆಪಿ ನಾಯಕರು ನಿರಾಕರಿಸಿದ್ದರಲ್ಲದೆ, ಅವರು ಆಡಳಿತ ಪಕ್ಷಕ್ಕೆ ವಿರುದ್ಧವಾಗಿರುವ ಪಟಿದಾರ್ ಸಮುದಾಯವನ್ನು ಗಮನದಲ್ಲಿರಿಸಿ ಹೇಳಿಕೆ ನೀಡಿದ್ದಾರೆಂದು ಹೇಳಿಕೊಂಡಿದ್ದರು.

ರಾಜ್ಯಸಭಾ ಚುನಾವಣೆಯ ಮುನ್ನ ಕಾಂಗ್ರೆಸ್ ಪಕ್ಷಕ್ಕೆ 57 ಶಾಸಕರುಗಳಿದ್ದರೆ ಅದು ಅಹ್ಮದ್ ಪಟೇಲ್ ಅವರ ವಿಜಯಕ್ಕೆ ಸಾಕಾಗಿತ್ತು. ಆದರೆ ಚುನಾವಣೆಗೆ ಮುನ್ನ ವಿಪಕ್ಷ ನಾಯಕ ಶಂಕರ್ ಸಿಂಗ್ ವಘೇಲಾ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು. ನಂತರ ಹಲವರ ರಾಜೀನಾಮೆ, ಪಕ್ಷಾಂತರ ನಡೆದಿತ್ತು. ಆರು ಕಾಂಗ್ರೆಸ್ ಶಾಸಕರು ವಿಧಾನಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರಿಂದ ಪಕ್ಷದ ಒಟ್ಟು ಶಾಸಕರ ಸಂಖ್ಯೆ 51ಕ್ಕೆ ಇಳಿದಿತ್ತು.
ರಾಜೀನಾಮೆ ನೀಡಿದವರಲ್ಲಿ ಬಲವಂತ್ ಸಿಂಹ ಅವರು ಬಿಜೆಪಿ ಸೇರಿದ್ದರಲ್ಲದೆ ಅದರ ಮೂರನೇ ಅಭ್ಯರ್ಥಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News