ಡಿವೈಎಫ್‌ಐ ಆಶ್ರಯದಲ್ಲಿ ಪುರಸಭೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ
ಬಾಗೇಪಲ್ಲಿ, ಆ.10; ಪಟ್ಟಣದಲ್ಲಿ ಶುದ್ದ ಕುಡಿಯುವ ನೀರು, ಬೀದಿದೀಪ ಹಾಗೂ ಚರಂಡಿ ನಿರ್ವಹಣೆಯಲ್ಲಿ ಪುರಸಭೆ ಆಡಳಿತವು ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆರೋಪಿಸಿ ಡಿವೈಎಫ್‌ಐ ಆಶ್ರಯದಲ್ಲಿ ಕಾರ್ಯಕರ್ತರು ಪುರಸಭೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಗುರುವಾರ ಡಾ.ಎಚ್.ಎನ್.ವೃತ್ತದಿಂದ ಮೆರವಣಿಗೆಯಲ್ಲಿ ಬಂದ ಕಾರ್ಯಕರ್ತರು ಪುರಸಭೆ ಕಚೇರಿಗೆ ಮುತ್ತಿಗೆ ಹಾಕಿದರು.
ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕು ಡಿವೈಎಫ್‌ಐ ಅಧ್ಯಕ್ಷ ಬಿ.ಎಂ.ಹೇಮಚಂದ್ರ, ಪಟ್ಟಣದಲ್ಲಿ ನೀರು ಕಳ್ಳತನ ಹೆಚ್ಚಾಗಿ ನಡೆಯತ್ತಿದೆ.ಶ್ರೀಮಂತರು 2-3 ನಲ್ಲಿಗಳನ್ನು ಅಕ್ರಮವಾಗಿ ಹಾಕಿಸಿಕೊಂಡು ಸಮೃದ್ದ ನೀರು ಪಡೆಯುತ್ತಿದ್ದಾರೆ. ಆದರೆ ಸಕ್ರಮವಾಗಿ ತೆರಿಗೆ ಪಾವತಿ ಮಾಡುವ ಬಡ ಗ್ರಾಹಕರಿಗೆ ಕುಡಿಯಲು ನೀರು ಸಿಗುತ್ತಿಲ್ಲ ಎಂದ ಅವರು, ಪಟ್ಟಣದ 23ವಾರ್ಡ್‌ಗಳ ಪೈಕಿ ಅನೇಕ ವಾರ್ಡ್‌ಗಳ ಬೀದಿದೀಪಗಳ ನಿರ್ವಹಣೆ ಇಲ್ಲದೆ ಸಾರ್ವಜನಿಕರು ರಾತ್ರಿ ವೇಳೆಯಲ್ಲಿ ಒಡಾಡಲು ತೊಂದರೆಯಾಗಿದೆ. ಬೀದಿದೀಪಗಳ ಗುತ್ತಿಗೆ ಪಡೆದಿರುವ ಗುತ್ತಿಗೆದಾರನಿಗೆ ಈ ಬಗ್ಗೆ ಅನೇಕ ಬಾರಿ ಚನ್ನಾಗಿ ನಿರ್ವಹಣೆ ಮಾಡುವಂತೆ ತಿಳಿಸಿದ್ದರೂ ಸಮರ್ಪಕ ರೀತಿಯಲ್ಲಿ ನಿರ್ವಹಣೆ ಮಾಡದೆ ಇರುವುದು ಖಂಡನೀಯ ಎಂದ ಅವರು, ಪುರಸಭೆ ಮುಖ್ಯಾಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ಪಟ್ಟಣದಲ್ಲಿ ಅಶುಚಿಯ ವಾತಾವರಣ ನಿರ್ಮಾಣವಾಗಿದೆ. ಚರಂಡಿಗಳಲ್ಲಿ ಕಸ ವಿಲೇವಾರಿಯಾಗದೆ ಸೊಳ್ಳೆಗಳ ಹಾವಳಿ ಹೆಚ್ಚಾಗಿ ಸಾರ್ವಜನಿಕರು ವಿವಿಧ ಜ್ವರಗಳಿಂದ ನರಳುತ್ತಿದ್ದಾರೆ ಎಂದರು.
ಸಿಪಿಎಂ ಪಕ್ಷದ ನಗರ ಘಟಕದ ಅಧ್ಯಕ್ಷ ವಾಲ್ಮೀಕಿ ನಗರದ ಅಶ್ವಥ್ಥಪ್ಪ ಮಾತನಾಡಿ, ಬೀದಿದೀಪಗಳ ನಿರ್ವಹಣೆ ಮಾಡುತ್ತಿರುವ ಗುತ್ತಿಗೆದಾರನಿಗೆ ಪ್ರತಿ ತಿಂಗಳು 1ಲಕ್ಷ 20ಸಾವಿರ ಪುರಸಭೆಯಿಂದ ನೀಡಲಾಗುತ್ತಿದೆ. ಆದರೆ ಕೆಟ್ಟು ಹೋಗಿರುವ ಬೀದಿದೀಪಗಳ ಸರಿಪಡಿಸಲು ಕೈಹಾಕುತ್ತಿಲ್ಲ. ಬೀದಿದೀಪಗಳ ಟೆಂಡರ್‌ನಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ. ಆದ್ದರಿಂದ ಹಾಲಿ ಗುತ್ತಿಗೆದಾರನನ್ನು ಬದಲಾಯಿಸಿ ಮತ್ತೊಬ್ಬ ಗುತ್ತಿಗೆದಾರನನ್ನು ನೇಮಿಸಬೇಕು ಎಂದು ಆಗ್ರಹಿಸಿದ ಅವರು, ಪಟ್ಟಣದಲ್ಲಿ 1 ತಿಂಗಳಾದರೂ ಕುಡಿಯುವ ನೀರು ಸರಬರಾಜು ಮಾಡುತ್ತಿಲ್ಲ. ಸಾರ್ವಜನಿಕರು ಕುಡಿಯುವ ನೀರಿಗಾಗಿ ತೊಂದರೆ ಪಡುತ್ತಿದ್ದಾರೆ. ಈ ಹಿಂದೆ ಟ್ಯಾಂಕರ್‌ಗಳ ಮೂಲಕ ಸಾರ್ವಜನಿಕರಿಗೆ ಸರಬರಾಜು ಮಾಡಿದ ನೀರಿನಲ್ಲಿ ಅಕ್ರಮಗಳ ನಡೆದಿದ್ದು, ಈ ಬಗ್ಗೆ ಉನ್ನತಮಟ್ಟದ ತನಿಖೆಯಾಗಬೇಕಾಗಿದೆ.1 ಟ್ಯಾಂಕರ್ ನೀರು ಸರಬರಾಜು ಮಾಡಿದರೆ 2-3 ಟ್ಯಾಂಕರ್ ನೀರು ಸರಬರಾಜು ಮಾಡಲಾಗಿದೆ ಎಂದು ಸುಳ್ಳು ದಾಖಲೆಗಳನ್ನು ಸೃಷ್ಟಿ ಮಾಡಿ ಹಣ ಲಪಟಾಯಿಸಲಾಗಿದೆ ಎಂದ ಅವರು, ಶಾಸಕರಿಗೆ ಪಟ್ಟಣದ ಜನರ ಮತಗಳು ಬೇಕು. ಆದರೆ ಸಾರ್ವಜನಿಕರಿಗೆ ಸಮಸ್ಯೆಗಳ ಬಗ್ಗೆ ಗಮನ ಹರಿಸುವುದು ಅವರಿಗೆ ಬೇಡವಾಗಿದೆ ಎಂದು ವ್ಯಂಗವಾಡಿದರು.
ಪುರಸಭೆ ಮುಖ್ಯಾಧಿಕಾರಿ ಗೈರು ಹಾಜರಿಯಲ್ಲಿ ಇಂಜನೀಯರ್ ಚಕ್ರಪಾಣಿ ಪ್ರತಿಭಟನೆಕಾರರಿಂದ ಮನವಿ ಸ್ವೀಕರಿಸಿ ಮಾತನಾಡಿ, ಪಟ್ಟಣದಲ್ಲಿ ಉಂಟಾಗಿರುವ ಕುಡಿಯುವ ನೀರಿನ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲು ಅಧ್ಯಕ್ಷೆ ಮಮತ ನಾಗರಾಜರೆಡ್ಡಿ ಅವರು ಮುಖ್ಯಾಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿಗಳನ್ನು ಬೇಟಿ ಮಾಡಲು ಚಿಕ್ಕಬಳ್ಳಾಪುರಕ್ಕೆ ಹೋಗಿದ್ದಾರೆ. ಒಂದು ವಾರದಳೊಗೆ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದರು.
ಈ ಪ್ರತಿಭಟನೆಯಲ್ಲಿ ಪುರಸಭೆ ಸದಸ್ಯರಾದ ಪಿ.ಒಬಳರಾಜು, ವನಜ ರವಿ, ಸಿಪಿಎಂ ಪಕ್ಷದ ಸ್ಥಳೀಯ ಸಮಿತಿ ಸದಸ್ಯ ನರಸಿಂಹರೆಡ್ಡಿ ಡಿವೈಎ್ಐ ಕಾರ್ಯದರ್ಶಿ ಆಸೀಫ್, ನಗರ ಘಟಕದ ಕಾರ್ಯದರ್ಶಿ ಜುಬೇರ ಅಹಮದ್ ಹಾಗೂ ಮುಖಂಡರಾದ ಅಬೂಬಕರ್,ಅಪ್ಸರ್,ಶಾಕೀರ್,ಸೀನಾ ಮತ್ತಿತರರು ಹಾಜರಿದ್ದರು.