ಅಪ್ಪಚ್ಚ ಕವಿಯ 150ನೇ ಜನ್ಮ ದಿನೋತ್ಸವ: ವರ್ಷವಿಡೀ ಕಾರ್ಯಕ್ರಮ ನಡೆಸಲು ನಿರ್ಧಾರ
ಮಡಿಕೇರಿ, ಆ.10 :ಕೊಡವರ ಆದಿ ಕವಿ ಹರದಾಸ ಅಪ್ಪನೆರವಂಡ ಅಪ್ಪಚ್ಚ ಕವಿಯ 150ನೇ ಜನ್ಮೋತ್ಸವವನ್ನು ವರ್ಷವಿಡೀ ಆಚರಿಸಲು ಅಖಿಲ ಕೊಡವ ಸಮಾಜ ತೀರ್ಮಾನಿಸಿದೆ. ಅಖಿಲ ಕೊಡವ ಸಮಾಜದ ಅಧ್ಯಕ್ಷ ಮಾತಂಡ ಮೊಣ್ಣಪ್ಪ ಅವರ ಅಧ್ಯಕ್ಷತೆಯಲ್ಲಿ ವಿರಾಜಪೇಟೆಯ ಅಖಿಲ ಕೊಡವ ಸಮಾಜದ ಸಭಾಂಗಣದಲ್ಲಿ ನಡೆದ ವಿವಿಧ ಕೊಡವ ಸಮಾಜದ ಪ್ರತಿನಿಧಿಗಳು ಹಾಗೂ ಪ್ರಮುಖರ ಸಭೆಯಲ್ಲಿ ವರ್ಷವಿಡೀ ಅಪ್ಪಚ್ಚ ಕವಿಯನ್ನು ನೆನಪು ಮಾಡಿಕೊಳ್ಳುವಂತಹ ಕಾರ್ಯಕ್ರಮವನ್ನು ನಡೆಸಲು ನಿರ್ಧಾರ ತೆಗೆದುಕೊಳ್ಳಲಾಯಿತು.
ಸೆಪ್ಟಂಬರ್ ತಿಂಗಳಿನಲ್ಲಿ ಅಪ್ಪಚ್ಚ ಕವಿಯ ಜನ್ಮೋತ್ಸವವನ್ನು ಉದ್ಘಾಟಿಸಲಾಗುವುದು.
ನಂತರ ಪ್ರತಿ ತಿಂಗಳು ಒಂದೊಂದು ಪ್ರದೇಶದಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಈ ಕುರಿತು ತಾತ್ಕಾಲಿಕವಾಗಿ ‘‘ಅಪ್ಪಚ್ಚ ಕವಿ 150ನೇ ಜನ್ಮೋತ್ಸವ" ಸಂಚಾಲಕ ಸಮಿತಿಯೊಂದನ್ನು ರಚಿಸಲಾಯಿತು. ಆ.22 ರಂದು ವಿರಾಜಪೇಟೆಯಲ್ಲಿ ಮತ್ತೊಮ್ಮೆ ಎಲ್ಲಾ ಕೊಡವ ಸಮಾಜ, ಕೊಡವ ಸಮಾಜಗಳ ಒಕ್ಕೂಟ ಪ್ರತಿನಿಧಿಗಳ ಸಭೆ ನಡೆಸಲಾಗುವುದು. ಅಲ್ಲಿ ಕಾರ್ಯಕ್ರಮಗಳ ವಿವರವನ್ನು ಚರ್ಚೆಸಿ ಅಂತಿಮಗೊಳಿಸಲಾಗುವುದು ಎಂದು ಅಖಿಲ ಕೊಡವ ಸಮಾಜದ ಅಧ್ಯಕ್ಷ ಮಾತಂಡ ಮೊಣ್ಣಪ್ಪ ತಿಳಿಸಿದ್ದಾರೆ.
ಸಭೆಯಲ್ಲಿ ಅಖಿಲ ಕೊಡವ ಸಮಾಜದ ಖಜಾಂಚಿ ಮಂಡೇಪಂಡ ಸುಗುಣ, ಕಾರ್ಯದರ್ಶಿ ಅಮ್ಮಣಿಚಂಡ ರಾಜಾ ನಂಜಪ್ಪ, ಕೊಡವ ಸಮಾಜದ ಪ್ರತಿನಿಗಳು ಹಾಗೂ ಸಾಹಿತಿಗಳು ಉಪಸ್ಥಿತರಿದ್ದರು.