ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾಗಿ ಗೀತಾ ಗಂಗಾನಾಯ್ಕ್ ಅವಿರೋಧ ಅಯ್ಕೆ
ದಾವಣಗೆರೆ, ಆ.10: ಜಿಲ್ಲಾಪಂಚಾಯತ್‌ನ ಉಪಾಧ್ಯಕ್ಷ ಸ್ಥಾನಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ ಬಿಜೆಪಿಯ ಅಣಜಿ ಜಿಪಂ ಕ್ಷೇತ್ರದ ಗೀತಾ ಗಂಗಾನಾಯ್ಕ ಅವಿರೋಧವಾಗಿ ಅಯ್ಕೆಯಾದರು.
ಬಿಜೆಪಿಯಿಂದ ಉಮೇದುವಾರಿಕೆ ಸಲ್ಲಿಸಿದ್ದ ಏಕೈಕ ವ್ಯಕ್ತಿಯಾದುದರಿಂದ ಚುನಾವಣಾಧಿಕಾರಿ ಎಂ.ವಿ. ಜಯಂತಿ ಅವರು ವಿಜೇತ ಅಭ್ಯರ್ಥಿ ಎಂದು ಘೋಷಣೆ ಮಾಡಿದರು. ಆಯ್ಕೆಯಾದ ಉಪಾಧ್ಯಕ್ಷರ ಅವಧಿ 10 ಆಗಸ್ಟ್ 2017ರಿಂದ 2 ಮೇ 2021ರ ವರೆಗೆ ಇರಲಿದೆ.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಉಪಾಧ್ಯಕ್ಷೆ ಗೀತಾ ಗಂಗಾನಾಯ್ಕ, ಈ ನನ್ನ ಗೆಲುವು ಜಿ.ಪಂನ ಎಲ್ಲಾ ಸದಸ್ಯರಿಗೂ ಹಾಗೂ ನನ್ನ ಗೆಲುವಿಗೆ ಸಹಕರಿಸಿದ ನಮ್ಮ ಪಕ್ಷದ ವರಿಷ್ಠರಿಗೆ ಸಲ್ಲುತ್ತದೆ ಎಂದರು.
ಜಿಲ್ಲೆಯಲ್ಲಿ ಸದ್ಯ ಬರಗಾಲವಿದ್ದು, ಕುಡಿಯುವ ನೀರಿಗೆ ಹೆಚ್ಚಿನ ಆದ್ಯತೆ ಕೊಡಲಾಗುವುದು. ಆರೋಗ್ಯ, ಶಿಕ್ಷಣ ಹಾಗೂ ಮಹಿಳೆಯರ ಆರೋಗ್ಯದ ಬಗ್ಗೆ ಹೆಚ್ಚು ಒತ್ತು ನೀಡಲಾಗುವುದು. ಸ್ವಚ್ಛತೆ ಇಂದಿನ ಪ್ರಮುಖ ಅಗತ್ಯವಾಗಿದ್ದು, ನಗರ ಹಾಗೂ ಜಿಲ್ಲೆಯ ಸ್ವಚ್ಛತೆ, ಶೌಚಾಲಯಗಳ ಬಗೆಗೆ ಹೆಚ್ಚಿನ ಗಮನ ಹರಿಸಿ, ನನ್ನೆಲ್ಲಾ ಜಿಪಂ ಸದಸ್ಯರ, ಅಧ್ಯಕ್ಷರೊಂದಿಗೆ ಚರ್ಚಿಸಿ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್, ಜಿಪಂನ ಅಧಿಕಾರಿಗಳು ಹಾಜರಿದ್ದರು. ಜಿಪಂ ಅಧ್ಯಕ್ಷೆ ಉಮಾ ಎಂ.ಪಿ. ರಮೇಶ್ ಸದಸ್ಯರು ನೂತನ ಉಪಾಧ್ಯಕ್ಷರಿಗೆ ನೀಡುವ ಮೂಲಕ ಶುಭ ಹಾರೈಸಿದರು.