ಎಲ್ಲಾ ಕೆರೆಗಳಿಗೆ ನೀರು ಸಂಗ್ರಹಕ್ಕೆ ಹೆಚ್ಚಿನ ಅದ್ಯತೆ ನೀಡಿ: ಕೆ.ಪಿ.ಮೋಹನ್‌ರಾಜ್
ತುಮಕೂರು. ಆ.10: ಗುರುವಾರ ಸಂಜೆಯಿಂದ ಹಾಸನ ಜಿಲ್ಲೆ ಹೇಮಾವತಿ ಜಲಾಶಯದಿಂದ ಎಡದಂಡೆ ನಾಲೆಯ ಮೂಲಕ ತುಮಕೂರು ಜಿಲ್ಲೆಗೆ ನೀರು ಹರಿಯಲಿದ್ದು, ಕಂದಾಯ, ಪೊಲೀಸ್, ಗ್ರಾಮೀಣಾಭಿವೃದ್ದಿ ಮತ್ತು ನಗರಾಭಿವೃದ್ದಿ ಇಲಾಖೆಗಳ ಅಧಿಕಾರಿಗಳು ಪರಸ್ವರ ಸಮನ್ವಯದ ಮೂಲಕ ಜಿಲ್ಲೆಗೆ 2018ರ ಮೇ.31ರವರೆಗೆ ಅಗತ್ಯವಿರುವ ಕುಡಿಯುವ ನೀರು ಸಂಗ್ರಹಣೆಗೆ ಮುಂದಾಗುವಂತೆ ಜಿಲ್ಲಾಧಿಕಾರಿ ಕೆ.ಪಿ.ಮೋಹನ್‌ರಾಜ್ ಸೂಚಿಸಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಂದಾಯ, ಪೊಲೀಸ್, ನಗರಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮಳೆ ಕೊರತೆಯಿಂದಾಗಿ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸಲು ಆಗಸ್ಟ್ 10ರ ಸಂಜೆಯಿಂದ ಹೇಮಾವತಿಯ ಹಾಸನದ ಗೊರೊರು ಡ್ಯಾಂನಿಂದ ತುಮಕೂರು ನಾಲೆಗೆ ನೀರನ್ನು ಹರಿಸಲಿದ್ದು, ಜನ, ಜಾನುವಾರುಗಳಿಗೆ ಜಿಲ್ಲೆಯಲ್ಲಿ ನೀರನ್ನು ಒದಗಿಸಲು ಕೆರೆಗಳಿಗೆ ನೀರನ್ನು ತುಂಬಿಸುವ ಕಾರ್ಯ ಆಗಬೇಕು. ಇದಕ್ಕಾಗಿ ವ್ಯಾಪಕ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಎಂದು ಜಿಲ್ಲಾಧಿಕಾರಿಗಳು ಸಭೆಗೆ ತಿಳಿಸಿದರು.
ಮುಂಬರುವ ಮೇ 31ರವರೆಗೆ ಜಿಲ್ಲೆಗೆ ಅಗತ್ಯವಿರುವಷ್ಟು ನೀರನ್ನು ಕೆರೆಗಳಲ್ಲಿ ಸಂಗ್ರಹಿಸಬೇಕಿದೆ. ನಾಲೆಗೆ ಮುಂದಿನ 25 ದಿನಗಳು ನೀರು ಹರಿಯಬಹುದು. ಈ ಅವಧಿಯಲ್ಲಿ ಅಗತ್ಯವಿರುವಷ್ಟು ನೀರನ್ನು ಪೋಲಾಗದಂತೆ ಸಂರಕ್ಷಿಸುವುದು ಜಿಲ್ಲಾಡಳಿತದ ಕರ್ತವ್ಯವಾಗಿದೆ. ಇದಕ್ಕಾಗಿ ನಾಲೆಯಲ್ಲಿ ಹರಿಯುವ ನೀರು ಕುಡಿಯುವ ನೀರಿಗೆ ಅಲ್ಲದೆ ಬೇರೆ ಉದ್ದೇಶಕ್ಕೆ ಬಳಕೆಯಾಗದಂತೆ ತಡೆಯಲು ನಾಲೆ ತಂಡ ಹಾಗೂ ಕೆರೆ ತಂಡ ಎಂದು ಎರಡು ತಂಡಗಳನ್ನು ರಚಿಸಬೇಕು. ಈ ತಂಡಗಳಲ್ಲಿ ನೀರಾವರಿ ಇಲಾಖೆಗಳ ಇಂಜಿನಿಯರ್‌ಗಳು, ಕಂದಾಯ ಇಲಾಖೆಯ ಅಧಿಕಾರಿಗಳು, ಬೆಸ್ಕಾಂ, ಪೊಲೀಸ್ ಸಿಬ್ಬಂದಿ ಮತ್ತಿತರ ಇಲಾಖೆಗಳ ಅಧಿಕಾರಿಗಳು ತಂಡದ ಸದಸ್ಯರಾಗಿರುತ್ತಾರೆ ಎಂದು ಜಿಲ್ಲಾಧಿಕಾರಿ ಸಭೆಗೆ ತಿಳಿಸಿದರು.
ಸಭೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾಗೋಪಿನಾಥ್, ಅಪರ ಜಿಲ್ಲಾಧಿಕಾರಿ ಸಿ.ಅನಿತಾ, ಪ್ರೊಬೆಷನರಿ ಐಎಎಸ್ ಅಧಿಕಾರಿ ಪ್ರೀತಿ ಗೆಹಲೋಟ್, ಉಪವಿಭಾಗಾಧಿಕಾರಿಗಳಾದ ಡಾ:ವೆಂಕಟೇಶಯ್ಯ, ಶ್ರೀಮತಿ ಶಿಲ್ಪ, ಶ್ರೀಮತಿ ತಬಸ್ಸುಮ್ ಜಹೇರಾ, ಪಾಲಿಕೆ ಆಯುಕ್ತ ಮಂಜುನಾಥಸ್ವಾಮಿ ಸೇರಿದಂತೆ ಹೇಮಾವತಿ ನಾಲಾ ವ್ಯಾಪ್ತಿಯ ಪೊಲೀಸ್ ಇನ್ಸ್‌ಪೆಕ್ಟರ್, ಕಂದಾಯ ಇಲಾಖೆಯ ಸಿಬ್ಬಂದಿಗಳು ಮತ್ತಿತರರು ಹಾಜರಿದ್ದರು.