ವಿಜ್ಞಾನವನ್ನು ನಂಬಿ,ಮೂಢ ನಂಬಿಕೆಗಳನ್ನಲ್ಲ: ಹೆಚ್.ಕಾಂತರಾಜ್
ತುಮಕೂರು, ಆ.10: ಯಾವುದೇ ಒಂದು ಜನಾಂಗ ಅಭಿವೃದ್ಧಿ ಹೊಂದಬೇಕಾದರೆ ಆ ಜನಾಂಗದಲ್ಲಿರುವ ಅನೂಚಾನವಾಗಿ ಬಂದಿರುವ ಮೂಢನಂಬಿಕೆಗಳನ್ನು ತೊರೆದು ವಿಜ್ಞಾನವನ್ನು ನಂಬಿದಾಗ ಮಾತ್ರ ಸಾಧ್ಯವೆಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಹೆಚ್.ಕಾಂತರಾಜ್ ತಿಳಿಸಿದ್ದಾರೆ.
ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಡಿ.ದೇವರಾಜ ಅರಸು ಸಂಶೋಧನಾ ಸಂಸ್ಥೆ ಇವರ ವತಿಯಿಂದ ಏರ್ಪಡಿಸಿದ್ದ ಗೊಲ್ಲ ಜನಾಂಗದಲ್ಲಿನ ಮೂಢನಂಬಿಕೆಗಳ ನಿರ್ಮೂಲನೆ ಕುರಿತು ಆಯೋಜಿಸಿದ್ದ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಪ್ರಧಾನ ಭಾಷಣ ಮಾಡಿದ ಅವರು, ಸಂವಿಧಾನಿಕ ಹಕ್ಕುಗಳನ್ನು ನಾವು ಪಡೆಯಬೇಕು.ಅವುಗಳನ್ನು ಅನುಭವಿಸಬೇಕು. ಇದರಿಂದ ನಾವು ಮುಂದೆ ಬರಲು ಸಾಧ್ಯ ಎಂದು ತಿಳಿಸಿದ ಅಧ್ಯಕ್ಷರು, ರಾಜ್ಯದಲ್ಲಿ 1141 ಗೊಲ್ಲರ ಹಟ್ಟಿಗಳು ಇದ್ದು, ಇವುಗಳನ್ನು ಸರಕಾರ ಕಂದಾಯ ಗ್ರಾಮಗಳನ್ನಾಗಿ ಘೋಷಿಸುವ ಮೂಲಕ ಈ ಗ್ರಾಮಗಳಿಗೆ ಎಲ್ಲಾ ನಾಗರೀಕ ಸೌಲಭ್ಯಗಳನ್ನು ಕಲ್ಪಿಸಬೇಕಾಗಿದೆ ಎಂದರು.
ಕೆಲವು ಗೊಲ್ಲರಹಟ್ಟಿಗಳಲ್ಲಿ ಇಂದಿಗೂ ವಿದ್ಯುತ್ ಸಂಪರ್ಕಗಳಿಲ್ಲ. ಕಾರಣ ಆ ಗೊಲ್ಲರಹಟ್ಟಿಗಳ ಜನರು ವಿದ್ಯುತ್ ಸಂಪರ್ಕ ತಂತಿಗಳನ್ನು ತಮ್ಮ ಗ್ರಾಮಗಳಲ್ಲಿರುವ ಜುಂಜಪ್ಪ, ಈರಣ್ಣ, ಮುಂತಾದ ದೇವರುಗಳಿಗೆ ಸರಿಹೊಂದುವುದಿಲ್ಲವೆಂಬ ಮೂಢ ನಂಬಿಕೆಯಿಂದ ಇಂದಿಗೂ ವಿದ್ಯುತ್ ಸಂಪರ್ಕಗಳನ್ನು ಪಡೆದಿಲ್ಲ. ದಿನನಿತ್ಯದ ಬದುಕಿಗೆ ಅಡ್ಡಿ ಆತಂಕಗಳನ್ನು ಉಂಟು ಮಾಡದ ನಂಬಿಕೆಗಳನ್ನು ಮಾತ್ರ ನಾವು ರೂಢಿಸಿಕೊಳ್ಳಬೇಕು.ಇದರಿಂದ ನಮ್ಮ ಬದುಕು ಹಸನಾಗಲಿದೆ.ವೈಚಾರಿಕತೆಯನ್ನು ಬಳಸಿಕೊಳ್ಳುವುದರ ಮೂಲಕ ಗೊಲ್ಲ ಜನಾಂಗದವರು ಸಮಾಜದ ಮುಖ್ಯವಾಹಿನಿಯಲ್ಲಿ ಒಂದಾಗಿ ತಾವು ಪ್ರಗತಿ ಹೊಂದಬೇಕು ಎಂದು ಅವರು ಕಿವಿಮಾತು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಡಾ:ಎಸ್.ರಫೀಕ್ ಅಹಮದ್ ವಹಿಸಿದ್ದರು. ವೇದಿಕೆಯಲ್ಲಿ ಪ್ರೊ. ಗುರುಲಿಂಗಯ್ಯ, ಪ್ರೊ.ನರಸಿಂಹಯ್ಯ, ಗುರುಮಲ್ಲಯ್ಯ ಮತ್ತು ಜಿ.ಪಂ. ಸದಸ್ಯರಾದ ಪ್ರೇಮಾಮಹಾಲಿಂಗಪ್ಪ ಮುಂತಾದವರು ಉಪಸ್ಥಿತರಿದ್ದರು.