ಪಾದಯಾತ್ರೆಯ ಸಮಾರೋಪವು ನೀರಾವರಿ ಯೋಜನೆಯ ಸಂಕಲ್ಪ ದಿನವಾಗಿ ಆಚರಣೆ: ವೈಎಸ್‌ವಿ ದತ್ತ
ಕಡೂರು ಆ. 10: ಕ್ಷೇತ್ರದ ಜನರ ಬಳಿ ತೆರಳಿ ಅವರ ಸಮಸ್ಯೆ ಆಲಿಸಿ, ಪರಿಹಾರ ದೊರಕಿಸುವ ನಿಟ್ಟಿನಲ್ಲಿ ಆರಂಭಗೊಂಡ 1 ಸಾವಿರ ಕಿ.ಮೀ. ಪಾದಯಾತ್ರೆಯ ಸಮಾರೋಪ ಸಮಾರಂಭವನ್ನು ನೀರಾವರಿ ಯೋಜನೆಯ ಸಂಕಲ್ಪ ದಿನವನ್ನಾಗಿ ಆಚರಿಸಲಾಗುವುದು ಎಂದು ಶಾಸಕ ವೈ.ಎಸ್.ವಿ. ದತ್ತ ಹೇಳಿದರು.
ಅವರು ಗುರುವಾರ ತಾಲೂಕಿನ ನಾಗಗೊಂಡನಹಳ್ಳಿ ಗ್ರಾಮಕ್ಕೆ ಪಾದಯಾತ್ರೆ ಮೂಲಕ ಆಗಮಿಸಿದಾಗ ಗ್ರಾಮದ ಶ್ರೀ ಆಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು.
ಕ್ಷೇತ್ರವು ಬರಗಾಲದಿಂದ ಮುಕ್ತಿಗೊಳ್ಳಲು ಇರುವುದು ಒಂದೇ ಪರಿಹಾರ. ಅದುವೇ ಶಾಶ್ವತ ನೀರಾವರಿ ಯೋಜನೆ. ಈ ಶಾಶ್ವತ ನೀರಾವರಿ ಯೋಜನೆಗೆ ಈಗಾಗಲೇ ನೀರಾವರಿ ನಿಗಮವು ಕ್ರಿಯಾ ಯೋಜನೆ ತಯಾರಿಸಿ ಸಭೆಯ ಮುಂದೆ ಇಡಲಿದ್ದು ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆಯುವ ಸಭೆ ಒಪ್ಪಿಗೆ ನೀಡಿದರೆ ಶಾಶ್ವತ ನೀರಾವರಿ ಯೋಜನೆಯ ಹೋರಾಟಕ್ಕೆ ಫಲ ಸಿಗಲಿದೆ ಎಂದರು.
ಪಾದಯಾತ್ರೆಯಲ್ಲಿ ಜನರಿಂದ ದೊರೆತ ಸ್ವಾಗತ ನನ್ನನ್ನು ಮೂಕನನ್ನಾಗಿ ಮಾಡಿದೆ. ಇದು ಒಂದು ಜನಸ್ನೇಹಿ ಪಾದಯಾತ್ರೆ ಎಂದು ಬಣ್ಣಿಸುತ್ತೇನೆ. ಪಾದಯಾತ್ರೆಯ ಸಮಯದಲ್ಲಿ ಜನರು ಕಷ್ಟ-ಸುಖ ಹಂಚಿಕೊಂಡಿದ್ದಾರೆ. ಇದರಿಂದ ನನ್ನ ತಪ್ಪುಗಳ ಅರಿವಾಗಿದೆ. ಶೇ 10 ರಷ್ಟು ಗ್ರಾಮಗಳಿಗೆ ಅನುದಾನ ಸವಲತ್ತು ನೀಡಿಲ್ಲದಿರುವುದು ಗಮನಕ್ಕೆ ಬಂದಿದೆ. ಅಂತಹ ಗ್ರಾಮಗಳನ್ನು ಪಟ್ಟಿ ಮಾಡಿ ಮುಂದಿನ ದಿನಗಳಲ್ಲಿ ನ್ಯಾಯ ಒದಗಿಸುತ್ತೇನೆ ಎಂದು ನುಡಿದರು.
300ಕ್ಕೂ ಹೆಚ್ಚಿನ ಹಳ್ಳಿಗಳು, 45 ಗ್ರಾಪಂ ಗಳನ್ನು ಪಾದಯಾತ್ರೆಯಲ್ಲಿ ಸಂಪರ್ಕಿಸಿದ್ದೇನೆ. ನೋವು, ಬರ, ಮಳೆ, ಬೆಳೆಹಾನಿ, ಮೇವಿನ ಸಮಸ್ಯೆಗಳಂತಹ ಸಮಸ್ಯೆಗಳನ್ನು ಕಣ್ಣಾರೆ ಕಂಡಿದ್ದೇನೆ. ಮುಂದಿನ ದಿನಗಳಲ್ಲಿ ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಹುಡುಕಲು ಮುಂದಾಗುತ್ತೇನೆ. ಪಾದಯಾತ್ರೆ ಅಂತಿಮ ಹಂತಕ್ಕೆ ಬಂದಿದೆ. 50 ಕಿ.ಮೀ ಬಾಕಿ ಇದ್ದು ಆ.11ರಂದು ಸಂಜೆ ಕಡೂರು ಪಟ್ಟಣಕ್ಕೆ ಸಮೀಪದ ಮಲ್ಲೇಶ್ವರ ಗ್ರಾಮದಲ್ಲಿ ವಾಸ್ತವ್ಯ ಮಾಡಿ ಆ.12ರಂದು ಮಧ್ಯಾಹ್ನ 12.30ಕ್ಕೆ ಕಡೂರು ಎಂಆರ್‌ಎಂ ರಂಗಮಂದಿರದಲ್ಲಿ ಸಮಾರೋಪ ನಡೆಯಲಿದೆ ಎಂದರು.
ಸಮಾರೋಪ ಕಾರ್ಯಕ್ರಮವನ್ನು ಮಾಜಿ ಪ್ರಧಾನಿಗಳು ಹಾಗೂ ಸಂಸದರಾದ ಹೆಚ್.ಡಿ. ದೇವೇಗೌಡರು, ಶತಾಯುಷಿ ಸ್ವಾತಂತ್ರ ಹೋರಾಟಗಾರ ಹೆಚ್.ಎಸ್. ದೊರೆಸ್ವಾಮಿ, ಮಾಜಿ ಲೋಕಾಯುಕ್ತ ಸಂತೋಷ್‌ಹೆಗ್ಗಡೆ ಐತಿಹಾಸಿಕ ಸಮಾರಂಭಕ್ಕೆ ಸಾಕ್ಷಿಯಾಗಲಿದ್ದಾರೆ ಎಂದು ಹೇಳಿದರು
ಈ ಸಂದರ್ಭ ಜೆಡಿಎಸ್ ತಾಲೂಕು ಅಧ್ಯಕ್ಷ ಕೋಡಿಹಳ್ಳಿ ಮಹೇಶ್ವರಪ್ಪ ಸೇರಿದಂತೆ ಗ್ರಾಮದ ಮುಖಂಡರು ಉಪಸ್ತಿತರಿದ್ದರು.