×
Ad

ದಸಂಸದಿಂದ ಅನಿರ್ಧಿಷ್ಟಾವಧಿ ಧರಣಿ

Update: 2017-08-10 21:33 IST

ಚಿಕ್ಕಬಳ್ಳಾಪುರ, ಆ.10: ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಇಲಾಖೆಯು ದಲಿತ ವಿರೋಧಿ ಧೋರಣೆಯನ್ನು ಅನುಸರಿಸುತ್ತಿವೆ ಎಂದು ಆರೋಪಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದನಗರದ ತಾಲೂಕು ಕಚೇರಿಯ ಎದುರು ಗುರುವಾರದಂದು ಅನಿರ್ಧಿಷ್ಟಾವಧಿ ಧರಣಿಹಮ್ಮಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಕೆಡಿಎಸ್‌ಎಸ್ ರಾಜ್ಯ ಸಂಚಾಲಕ ಬಿ.ಎನ್. ಗಂಗಾಧರಪ್ಪ ಮಾತನಾಡಿ, ದಲಿತರಿಗೆ ಸರ್ಕಾರ ಒದಗಿಸುತ್ತಿರುವ ಅನುದಾನವನ್ನು ದುರುಪಯೋಗ ಪಡಿಸಿಕೊಂಡಿರುವ ಕುರಿತು ಅಧಿಕಾರಿಗಳನ್ನು ಪ್ರಶ್ನಿಸಿದರೆ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪದಡಿ ದಲಿತ ಮುಖಂಡರನ್ನು ವ್ಯವಸ್ಥಿತಿ ರೀತಿಯಲ್ಲಿ ರೌಡಿ ಪಟ್ಟಿಗೆ ಸೇರಿಸುವ ಮೂಲಕ ಅಧಿಕಾರಿಗಳು ದಲಿತರ ವಿರುದ್ಧ ಧಮನಕಾರಿ ನೀತಿ ಅನುಸರಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ಜಿಲ್ಲೆಯಲ್ಲಿ ಪೊಲೀಸ್ ಇಲಾಖೆಯು ಜನಪ್ರತಿನಿಧಿಗಳ ಒತ್ತಡಕ್ಕೆ ಮಣಿದು ಚಿಂತಾಮಣಿ, ಬಾಗೇಪಲ್ಲಿ ಮತ್ತು ಚಿಕ್ಕಬಳ್ಳಾಪುರ ತಾಲೂಕುಗಳಲ್ಲಿ ಸುಮಾರು 25 ಮಂದಿ ದಲಿತ ಹೋರಾಟಗಾರರನ್ನು ಉದ್ಧೇಶ ಪೂರ್ವಕವಾಗಿ ರೌಡಿಪಟ್ಟಿಗೆ ಸೇರಿಸಲಾಗಿದೆ. ಅಲ್ಲದೆ ಶೋಷಿತರ ನ್ಯಾಯಯುತ ಹಕ್ಕುಗಳನ್ನು ದಮನ ಮಾಡಲು ಜನಪ್ರತಿನಿಧಿಗಳು ಪೊಲೀಸ್ ಇಲಾಖೆ ಮೂಲಕ ಹತ್ತಿಕ್ಕುತ್ತಿದ್ದಾರೆ ಎಂದು ಆರೋಪಿಸಿದರು.

ಜಿಲ್ಲೆಯಲ್ಲಿ ಮಟ್ಕಾ, ಅಂದರ್ ಬಾಹರ್, ಕ್ರಿಕೆಟ್ ಬೆಟ್ಟಿಂಗ್ ಸೇರಿದಂತೆ ನಾನಾ ಜೂಜುಗಳು ನಡೆಯುತ್ತಿದ್ದು, ಈ ಜೂಜು ನಡೆಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿರುವ ಪೊಲೀಸರು, ಅಮಾಯಕ ದಲಿತ ಹೋರಾಟಗಾರರ ವಿರುದ್ಧ ಪ್ರಕರಣಗಳನ್ನು ದಾಖಲಿಸಿ ಬೆದರಿಕೆ ತಂತ್ರಕ್ಕೆ ಮುಂದಾಗಿದ್ದು, ಇದರಿಂದ ಹೋರಾಟ ಇನ್ನಷ್ಟು ಗಟ್ಟಿಗೊಳ್ಳಲಿದೆ ಎಂದು ಹೇಳಿದರು.

ಆದ್ದರಿಂದ ಜಿಲ್ಲೆಯ ಆರೂ ತಾಲೂಕುಗಳ ತಾಲೂಕು ಕಚೇರಿಗಳ ಮುಂದೆ ಅನಿರ್ಧಿಷ್ಟಾವಧಿ ಧರಣಿ ಹಮ್ಮಿಕೊಳ್ಳಲಿದ್ದು, ದಲಿತರ ನ್ಯಾಯುತ ಬೇಡಿಕೆಗಳಿಗೆ ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳು ಸ್ಪಂಧಿಸದಿದ್ದರೆ 15 ರಂದು ನಡೆಯಲಿರುವ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಜನಪ್ರತಿನಿಧಿಗಳಿಗೆ ಭಾವುಟ ಹಾರಿಸಲು ಬಿಡದೆ ಕಪ್ಪು ಭಾವುಟ ಪ್ರದರ್ಶನ ಮಾಡಲಾಗುವುದು. ಅಲ್ಲದೆ ಈ ನೀತಿ ಬದಲಿಸಿಕೊಳ್ಳದಿದ್ದರೆ ಜಿಪಂಗೆ ಮುತ್ತಿಗೆ ಹಾಕಿ ಉಗ್ರ ಪ್ರತಿಭಟನೆ ಮಾಡಲೂ ಹಿಂಜೆರಿಯುವುದಿಲ್ಲ ಎಂದು ಎಚ್ಚರಿಸಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕರಾದ ಡಿಎಂ. ನರಸಿಂಹಯ್ಯ, ಕೆ.ವಿ. ವೆಂಕಟೇಶ್, ತಾಲೂಕು ಸಂಚಾಲಕರಾದ ಕಣಿತಹಳ್ಳಿ ಗಂಗಾಧರ್, ಜಿ.ಸಿ. ವೆಂಕಟೇಶ್, ಎಸ್.ಎಂ. ರಾಜಣ್ಣ, ಟಿ.ನಾಗೇಶ್, ಆರ್.ಡಿ. ನಾಗರಾಜ್, ಹನುಮಪ್ಪ, ಬಿ.ಎನ್. ಹರೀಶ್‌ಕುಮಾರ್, ಅಂಜಿ, ಖಜಾಂಚಿ ಜಯರಾಮ್, ಎನ್, ಶ್ರೀನಿವಾಸ್ ಸೇರಿದಂತೆ ಇತರರು ಭಾಗವಹಿಸಿದ್ದರು.


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News