ಚಿಕ್ಕಬಳ್ಳಾಪುರ: ತ್ರೈಮಾಸಿಕ ಪ್ರಗತಿ ಪರಿಶೀಲನೆ ಸಭೆ
ಚಿಕ್ಕಬಳ್ಳಾಪುರ, ಆ.10: ಜಿಲ್ಲೆಯಲ್ಲಿ ಪ್ರಸ್ತುತ ವರ್ಷವೂ ಮಳೆಯ ಕೊರತೆಯಿಂದಾಗಿ ಕುಡಿಯುವ ನೀರಿನ ಮಸ್ಯೆ ಉದ್ಭವಿಸುವ ಸಾಧ್ಯತೆಗಳಿದ್ದು, ನೀರಿನ ಸಮಸ್ಯೆ ಕಂಡುಬಂದ ಗ್ರಾಮಗಳಿಗೆ ಟ್ಯಾಂಕರ್ ಅಥವಾ ಖಾಸಗಿ ಕೊಳವೆಬಾವಿಗಳ ವುೂಲಕ ನೀರು ಪೂರೈಕೆ ಮಾಡಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ರಾಮಲಿಂಗಾರೆಡ್ಡಿ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಡಳಿತ ಭವನದ ಜಿಪಂ ಸಭಾಂಗಣದಲ್ಲಿ ಗುರುವಾರ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದ ಅವರು, ಜೂನ್ ತಿಂಗಳಲ್ಲಿ ವಾಡಿಕೆ ಮಳೆಗಿಂತ ಶೇ.17, ಜುಲೈ ತಿಂಗಳಲ್ಲಿ ಶೇ.61 ರಷ್ಟು ಮಳೆ ಕೊರತೆಯಾಗಿದೆ. ಇದು ಹೀಗೆ ಮುಂದುವರೆದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ನೀರಿನ ಗಂಭೀರ ಸಮಸ್ಯೆಯುಂಟಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಜಿಲ್ಲೆಯಾದ್ಯಂತ ಈಗಾಗಲೇ 123 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಭಣಿಸಿದೆ. ಈ ಪೈಕಿ 63 ಗ್ರಾಮಗಳಿಗೆ ಟ್ಯಾಂಕರ್, 60 ಗ್ರಾಮಗಳಿಗೆ ಖಾಸಗಿ ಕೊಳವೆಬಾವಿ ಮೂಲಕ ನೀರು ಸರಬರಾಜು ಮಾಡಲಾಗುತ್ತಿದ್ದು, ಚಿಂತಾಮಣಿ ತಾಲೂಕುವೊಂದರಲ್ಲೇ 50 ಗ್ರಾಮಗಳಲ್ಲಿ ನೀರಿಗೆ ಹಾಹಾಕಾರ ಉಂಟಾಗಿದೆ. ಪ್ರತಿದಿನವೂ 4-5 ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಉಂಟಾಗುತ್ತಿದೆ ಎಂದು ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಜಿಲ್ಲಾ ಅಧಿಕಾರಿ ಸಭೆಗೆ ವಿವರಿಸಿದರು.
ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಹೇಳಲು ಪೋನ್ ಮಾಡಿದರೆ ಯಾವ ಎಇ ಮತ್ತು ಪಿಡಿಒಗಳು ಕೈಗೆ ಸಿಕ್ಕಲ್ಲ. ಅಧಿಕಾರಿಗಳ್ಯಾರು ಕೇಂದ್ರ ಸ್ಥಾನದಲ್ಲಿ ಇಲ್ಲದ ಕಾರಣ ಈ ಸಮಸ್ಯೆ ಉಂಟಾಗುತ್ತಿದ್ದು, ಅಧಿಕಾರಿಗಳು ಕೇಂದ್ರಸ್ಥಾನದಲ್ಲೇ ಇರುವಂತೆ ಕ್ರಮ ಕೈಗೊಳ್ಳಬೇಕು ಎಂದು ಚಿಂತಾಮಣಿ ಶಾಸಕ ಕೃಷ್ಣಾರೆಡ್ಡಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡಿದರು.
ಕ್ಷೇತ್ರದಲ್ಲಿ ದಿನಕ್ಕೊಂದು ಗ್ರಾಮದಲ್ಲಿ ನೀರಿನ ಸಮಸ್ಯೆಯುಂಟಾಗುತ್ತಿದೆ. ಜನ ನಮ್ಮನ್ನು ಅಡ್ಡ ಕಟ್ಟಿ ಕೇಳುತ್ತಾರೆ. ಅವರಿಗೆ ನಾವೇನು ಹೇಳಬೇಕು. ಅಧಿಕಾರಿಗಳು ಮಾತ್ರ ಎಲ್ಲೋ ಇರ್ತಾರೆ. ಕರೆ ಮಾಡಿದರೆ, ಸ್ಪಂಧಿಸುವ ಕನಿಷ್ಠ ಸೌಜನ್ಯವೂ ಇಲ್ಲ. ಹೀಗಿದ್ದಲ್ಲಿ ನಾವು ಏಕೆ ರಾಜಕೀಯ ಮಾಡಬೇಕು ಎಂದು ಸಚಿವರನ್ನು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ರಾಮಲಿಂಗಾರೆಡ್ಡಿ, ಮುಂದೆ ಈ ರೀತಿ ಆಗದಂತೆ ಎಲ್ಲಾ ಪಿಡಿಒ, ಎಇ ಗಳಿಗೆ ಸೂಚನೆ ನೀಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಶಿಡ್ಲಘಟ್ಟ ಶಾಸಕ ರಾಜಣ್ಣ, ವಿಧಾನಪರಿಷತ್ ಸದಸ್ಯ ರಮೇಶ್‌ಬಾಬು, ಜಿಪಂ ಅಧ್ಯಕ್ಷ ಪಿ.ಎನ್. ಕೇಶವರೆಡ್ಡಿ, ಉಪಾಧ್ಯಕ್ಷೆ ನಿರ್ಮಲಾ, ಜಿಲ್ಲಾಧಿಕಾರಿ ದೀಪ್ತಿ ಆದಿತ್ಯ ಕಾನಡೆ, ಅಪರ ಜಿಲ್ಲಾಧಿಕಾರಿ ಡಾ.ಕೆ.ಎನ್. ಅನುರಾಧ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್‌ರೆಡ್ಡಿ, ಅಪರ ಜಿಲ್ಲಾಧಿಕಾರಿ ಡಾ.ಅನುರಾಧ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಇಒ ಅಮಾನತಿಗೆ ಆದೇಶ
ಚಿಂತಾಮಣಿ ತಾಪಂ ಕಚೇರಿ ಕಟ್ಟಡ ನಿರ್ಮಾಣಕ್ಕೆ 3 ಕೋಟಿ ರೂಅನುದಾನ ಬಿಡುಗಡೆಯಾಗಿ 1 ವರ್ಷ ಕಳೆದರೂ ಕಾಮಗಾರಿ ಆರಂಭಿಸದೇ ತಾಪಂ ಇಒ ನಿರ್ಲಕ್ಷ ವಹಿಸುತ್ತಿದ್ದಾರೆ ಎಂದು ಚಿಂತಾಮಣಿ ಶಾಸಕ ಜೆ.ಕೆ. ಕೃಷ್ಣಾರೆಡ್ಡಿ ಆರೋಪಿಸಿದಾಗ, ಸಮರ್ಪಕ ಸಮಜಾಯಿಷಿ ನೀಡದ ಚಿಂತಾಮಣಿ ತಾಪಂ ಇಒ ಶ್ರೀನಿವಾಸ್ ಅವರನ್ನು ತರಾಟೆಗೆ ತೆಗೆದುಕೊಂಡ ಸಚಿವ ರಾಮಲಿಂಗಾರೆಡ್ಡಿ, ಇಒ ಶ್ರೀನಿವಾಸ್ಅವರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತು ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಅವರು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.