ಸತ್ಯ,ನಿಷ್ಠೆಯಿಂದ ಉತ್ತಮ ಪ್ರಜೆಗಳ ಉದಯ: ಎಂಎಲ್‌ಸಿ ಸುನಿಲ್ ಸುಬ್ರಮಣಿ ಅಭಿಪ್ರಾಯ
ಮಡಿಕೇರಿ, ಆ.11: ಸತ್ಯ, ನಿಷ್ಠೆ, ಶಿಸ್ತು ಹಾಗೂ ಪ್ರಾಮಾಣಿಕತೆಯನ್ನು ಶೈಕ್ಷಣಿಕ ಜೀವನದಿಂದಲೇ ಮೈಗೂಡಿಸಿಕೊಂಡಾಗ ಮಾತ್ರ ವಿದ್ಯಾರ್ಥಿಗಳು ಈ ದೇಶದಲ್ಲಿ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಲು ಸಾಧ್ಯವೆಂದು ವಿಧಾನ ಪರಿಷತ್ ಸದಸ್ಯರಾದ ಸುನಿಲ್ ಸುಬ್ರಮಣಿ ಅಭಿಪ್ರಾಯಪಟ್ಟಿದ್ದಾರೆ.
ಕಾಲೇಜು ಶಿಕ್ಷಣ ಇಲಾಖೆ ಹಾಗೂ ಸರಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ಆರಂಭಿಸಿದ ಪ್ರಸಕ್ತ ಸಾಲಿನ ಸಹಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಿಗೆ ಕಾಲೇಜು ಸಭಾಂಗಣದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.
ಇಂದಿನ ಆಧುನಿಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ಒಳ್ಳೆಯ ವಿಚಾರಗಳನ್ನಷ್ಟೇ ಮೈಗೂಡಿಸಿಕೊಂಡು ಶೈಕ್ಷಣಿಕ ಅಭ್ಯುದಯವನ್ನು ಸಾಧಿಸಬೇಕು. ಮತ್ತೊಬ್ಬರೊಂದಿಗೆ ಪೈಪೋಟಿಗಿಳಿಯದೆ ತಮಗೆ ತಾವೇ ಸರಿಸಾಟಿ ಎನ್ನುವಂತೆ ಬೆಳವಣಿಗೆಯನ್ನು ಕಾಣಬೇಕೆಂದು ಸಲಹೆ ನೀಡಿದರು. ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಹಾಗೂ ಮಾಜಿ ರಾಷ್ಟ್ರಪತಿ ದಿವಂಗತ ಡಾ.ಅಬ್ದುಲ್ ಕಲಾಂ ರಂತಹ ಮಹಾನ್ ವ್ಯಕ್ತಿಗಳು ಯಾವುದೇ ಅನುಕೂಲಗಳಿಲ್ಲದೆ ಸ್ವಪ್ರಯತ್ನದಿಂದ ದೇಶದ ಮಹಾನ್ ಸ್ಥಾನಗಳನ್ನು ಅಲಂಕರಿಸಿದ್ದಾರೆ. ಇಂದು ಸಾಕಷ್ಟು ಸೌಲಭ್ಯಗಳು ದೇಶದಲ್ಲಿ ಲಭ್ಯವಿದೆ, ಮಾಹಿತಿ ತಂತ್ರಜ್ಞಾನವೂ ಮುಂದುವರೆದಿದೆ. ಆದರೆ ಇವುಗಳನ್ನು ದುರುಪಯೋಗ ಪಡಿಸಿಕೊಳ್ಳದೆ ಸದುದ್ದೇಶಕ್ಕೆ ಬಳಸಿಕೊಂಡು ವಿದ್ಯಾರ್ಥಿ ಜೀವನವನ್ನು ಸಾರ್ಥಕ ಪಡಿಸಿಕೊಳ್ಳಬೇಕೆಂದು ಸುನಿಲ್ ಸುಬ್ರಮಣಿ ಕಿವಿಮಾತು ಹೇಳಿದರು. ಆಸ್ತಿ ಗಳಿಕೆಗಿಂತ ವಿದ್ಯಾಭ್ಯಾಸದ ಮೂಲಕ ಉನ್ನತ ಹುದ್ದೆಯನ್ನು ಅಲಂಕರಿಸಲು ವಿದ್ಯಾರ್ಥಿಗಳು ಪ್ರಯತ್ನಿಸಬೇಕೆಂದರು.
ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾ ಅಧ್ಯಕ್ಷರಾದ ಬಿ.ಎಸ್.ಲೋಕೇಶ್ ಸಾಗರ್ ಮಾತನಾಡಿ, ಇಂದು ದೇಶದ ಘನತೆ ಜ್ಞಾನಿಗಳು, ವಿದ್ವಾಂಸರು, ಉನ್ನತ ವ್ಯಾಸಾಂಗ ಮಾಡಿದ ವಿದ್ಯಾರ್ಥಿಗಳಿಂದ ಉಳಿದಿದೆಯೇ ಹೊರತು ಐಶಾರಾಮಿ ಕಟ್ಟಡ ಅಥವಾ ಅಭಿವೃದ್ಧಿ ಎನ್ನುವ ಮರೀಚಿಕೆಯಿಂದಲ್ಲವೆಂದು ಅಭಿಪ್ರಾಯಪಟ್ಟರು. ಕೊಡಗು ಜಿಲ್ಲೆ ಎಲ್ಲಾ ಕ್ಷೇತ್ರಗಳಲ್ಲೂ ತನ್ನದೇ ಆದ ಛಾಪನ್ನು ಮೂಡಿಸಿದ್ದು, ವಿದ್ಯಾರ್ಥಿಗಳು ಹೆಚ್ಚಿನ ವಿದ್ಯಾರ್ಜನೆಯ ಮೂಲಕ ಗುರುಗಳು ಹಾಗೂ ಪೋಷಕರಿಗೆ ಕೀರ್ತಿ ತರುವ ಕಾರ್ಯವನ್ನು ಮಾಡಬೇಕೆಂದರು. ಶ್ರದ್ಧೆಯಿಂದ ಜ್ಞಾನ ವೃದ್ಧಿಸಿಕೊಂಡು ಉನ್ನತ ಮಟ್ಟಕ್ಕೇರುವ ಮೂಲಕ ಜಿಲ್ಲೆಯ ಗೌರವವನ್ನು ಮತ್ತಷ್ಟು ಹೆಚ್ಚಿಸಬೇಕೆಂದು ಕರೆ ನೀಡಿದರು.
2017-18ನೇ ಶೈಕ್ಷಣಿಕ ಸಾಲಿನ ಕಾಲೇಜು ಪ್ರತಿನಿಧಿಗಳಾಗಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಉಪನ್ಯಾಸಕರಾದ ಶಶಿಧರ್ ಪ್ರಮಾಣ ವಚನ ಬೋಧಿಸಿದರು. ಕಾರ್ಯಕ್ರಮದಲ್ಲಿ ಪ್ರಮುಖರಾದ ಪೂಣಚ್ಚ, ಪ್ರಕಾಶ್ , ದಯಾನಂದ ಉಪಸ್ಥಿತರಿದ್ದರು.