ನೌಕರರ ವಿರುದ್ಧ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ಪ್ರತಿಭಟನೆ
ಶಿಕಾರಿಪುರ,ಆ.11: ಸರ್ಕಾರಿ ಅಧಿಕಾರಿ ಸಿಬ್ಬಂದಿಗಳ ಸೇವೆಯಲ್ಲಿನ ಲೋಪ, ವಿಳಂಭಕ್ಕೆ ಹಿರಿಯ ಅಧಿಕಾರಿಗಳಿಗೆ ದೂರು ಸಲ್ಲಿಸಿ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಿ, ಹೊರತುಪಡಿಸಿ ದೌರ್ಜನ್ಯ, ಹಲ್ಲೆ ಮತ್ತಿತರ ಅನಾಗರೀಕ ರೀತಿಯಲ್ಲಿ ವರ್ತಿಸಿದಲ್ಲಿ ಸರ್ಕಾರಿ ನೌಕರರ ಸಂಘ ಸಹಿಸುವುದಿಲ್ಲ. ಸಂಘ ಸದೃಢ ಸಮರ್ಥವಾಗಿದ್ದು, ಪ್ರಭಾವ ಮುಲಾಜಿಗೆ ಒಳಗಾಗದೆ ಕಾನೂನು ವ್ಯಾಪ್ತಿಯಲ್ಲಿ ಹೋರಾಟಕ್ಕೆ ಸಿದ್ದವಿರುವುದಾಗಿ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸಿ.ಎಸ್ ಷಡಾಕ್ಷರಿ ಎಚ್ಚರಿಸಿದರು.
ಕರ್ತವ್ಯ ನಿರತ ಸರ್ಕಾರಿ ಅಧಿಕಾರಿ, ನೌಕರರ ವಿರುದ್ಧ ಸತತ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ಶುಕ್ರವಾರ ತಾಲೂಕು ಕಚೇರಿ ಮುಂಭಾಗ ಸರ್ಕಾರಿ ನೌಕರರ ಸಂಘದ ವತಿಯಿಂದ ನಡೆದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.
ಇತ್ತೀಚಿನ ದಿನದಲ್ಲಿ ಜನಪ್ರತಿನಿಧಿಗಳು, ಸಾರ್ವಜನಿಕರಿಂದ ಸರ್ಕಾರಿ ನೌಕರರಿಗೆ ಹಲ್ಲೆ ಕರ್ತವ್ಯಕ್ಕೆ ಅಡ್ಡಿಪಡಿಸುವ ಪ್ರವೃತ್ತಿ ಹೆಚ್ಚಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ ಅವರು, ಇಂತಹ ಸಂದರ್ಭದಲ್ಲಿ ಜಿಲ್ಲಾ ಸಂಘ ನೌಕರರ ಹಿತ ಕಾಪಾಡಲು ಸದೃಢವಾಗಿದೆ.ರಾಜ್ಯ ಸರ್ಕಾರಿ ನೌಕರರ ಸಂಘ 82 ವಿವಿಧ ಇಲಾಖೆಯ 7 ಲಕ್ಷ ಸದಸ್ಯರನ್ನು ಹೊಂದಿರುವ ದೇಶದ ಏಕೈಕ ಬಲಿಷ್ಠ ಸಂಘಟನೆಯಾಗಿದ್ದು, ಕಾರ್ಯಾಂಗದ ಮೂಲಕ ಸಂವಿಧಾನದ ಇತಿಮಿತಿಯಲ್ಲಿ ಸರ್ಕಾರದ ಗೌರವ ಹೆಚ್ಚಳಕ್ಕೆ ನೌಕರರು ಶ್ರಮಿಸುತ್ತಿದ್ದಾರೆ ಎಂದು ತಿಳಿಸಿದರು.
ಕೆಲ ಜನಪ್ರತಿನಿಧಿಗಳು, ದುಷ್ಕರ್ಮಿಗಳ ವರ್ತನೆಯಿಂದಾಗಿ ನೌಕರರು ಭಯದಿಂದ ಕರ್ತವ್ಯ ನಿರ್ವಹಿಸುವಂತಾಗಿದೆ. ಹಲವೆಡೆ ನಡೆದ ಹಲ್ಲೆ ದೌರ್ಜನ್ಯಕ್ಕೆ ಸಂಘದ ಮೂಲಕ ಒತ್ತಡ ಪ್ರಭಾವಕ್ಕೆ ಒಳಗಾಗದೆ ಜೈಲಿಗೆ ಕಳುಹಿಸಲಾಗಿದೆ ಎಂದ ಅವರು, ಸರ್ಕಾರಿ ಅಧಿಕಾರಿಗಳ ಜತೆಗೌರವದಿಂದ ವರ್ತಿಸಿ ಕರ್ತವ್ಯದಲ್ಲಿನ ಲೋಪಕ್ಕೆ ಹಿರಿಯ ಅಧಿಕಾರಿಗಳು, ಉಸ್ತುವಾರಿ ಸಚಿವರು, ಕಾರ್ಯದರ್ಶಿಗಳಿಗೆ ದೂರು ನೀಡಿ, ಹೊರತುಪಡಿಸಿ ಕಾನೂನು ಕೈಗೆತ್ತಿಕೊಂಡು ದೌರ್ಜನ್ಯ ಹಲ್ಲೆ ನಡೆಸದಂತೆ ಎಚ್ಚರಿಸಿದರು.
ನಂತರ ಆರೋಪಿಗಳ ವಿರುದ್ದ ಕಠಿಣ ಕ್ರಮಕ್ಕೆ ಆಗ್ರಹಿಸಿ ತಹಸೀಲ್ದಾರ್, ಡಿವೈಎಸ್ಪಿ ರವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಬದಲ್ಲಿ ಸಾಗರ ಘಟಕದ ಅಧ್ಯಕ್ಷ ಪರಮೇಶ್ವರಪ್ಪ, ತಾ.ಎಸ್ಸಿಎಸ್ಟಿ ನೌಕರರ ಸಂಘದ ಅಧ್ಯಕ್ಷ ಪಾಪಯ್ಯ, ಸಮಾಜ ಕಲ್ಯಾಣಾಧಿಕಾರಿ ಶ್ರೀನಿವಾಸ್, ಎಇಇ ಸಂಗಪ್ಪ, ರಮೇಶ್‌ಬಾಣದ್, ಡಾ.ಪ್ರಭಾಕರ್, ಚೇತನ್, ಡಾ.ಹರ್ಷವರ್ಧನ, ಡಾ.ಮಾರುತಿ, ಡಾ.ಜಯಣ್ಣ, ದಿನೇಶ ಜಿಲ್ಲಾ ಹಾಗೂ ತಾ.ಸಂಘದ ಪದಾಧಿಕಾರಿಗಳು ಹಾಜರಿದ್ದರು.