ಹನೂರು: ಕುಡಿಯುವ ನೀರಿನ ಘಟಕ ಕಾಮಗಾರಿಗೆ ಭೂಮಿಪೂಜೆ

Update: 2017-08-11 14:46 GMT

ಹನೂರು, ಆ.11: ಮೊದಲ ಹಂತದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಖಾಸಗಿ ಬಸ್ ನಿಲ್ದಾಣದಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಸ್ಥಾಪಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಮೂರು ಕಡೆ ಘಟಕ ಸ್ಥಾಪನೆಗೆ ಕ್ರಮವಹಿಸಲಾಗಿದೆ ಎಂದು ಶಾಸಕ ಆರ್.ನರೇಂದ್ರ ತಿಳಿಸಿದರು.

ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ 10ಲಕ್ಷ ವೆಚ್ಚದ ಶುದ್ಧ ಕುಡಿಯುವ ನೀರಿನ ಘಟಕ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಶಾಸಕ ನರೇಂದ್ರ, ಮನುಷ್ಯನ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಶುದ್ಧ ಕುಡಿಯುವ ನೀರು ಪ್ರಮುಖ ಪಾತ್ರವಹಿಸಲಿದೆ. ಈ ದಿಸೆಯಲ್ಲಿ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರನ್ನು ನೀಡಲು ಧರ್ಮಸ್ಥಳ ಸಂಸ್ಥೆಯ ಸಹಯೋಗದೊಂದಿಗೆ ಈಗಾಗಲೇ ಘಟಕ ಪ್ರಾರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ಲೊಕ್ಕನಹಳ್ಳಿ ರಸ್ತೆ ಭಾಗದಲ್ಲೊಂದು, ಜಿ.ವಿ.ಗೌಡ ನಗರದಲ್ಲೊಂದು ಹಾಗೂ ಆರ್.ಎಸ್.ದೊಡ್ಡಿ ಬಡಾವಣೆಯಲ್ಲೊಂದು ಘಟಕ ಸ್ಥಾಪನೆಗೆ ಕ್ರಮವಹಿಸಲಾಗಿದೆ. ಸಾರ್ವಜನಿಕರು ನೀರನ್ನು ಮಿತವಾಗಿ ಬಳಕೆ ಮಾಡಿಕೊಳ್ಳುವ ಮೂಲಕ ಸದ್ಭಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಕೆರೆಗಳಿಗೆ ತುಂಬಿಸುವ ಯೋಜನೆ ಶೀಘ್ರ ಜಾರಿ: ಹನೂರು ಕ್ಷೇತ್ರ ವ್ಯಾಪ್ತಿಯ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು 435ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲು ಕ್ರಮವಹಿಸಲಾಗಿದ್ದು, ನದಿಮೂಲದಿಂದ ಹುಬ್ಬೇಹುಣಸೇ, ಗುಂಡಾಲ್‌ಜಲಾಶಯ, ರಾಮನಗುಡ್ಡ ಕೆರೆಗಳಿಗೆ ನೀರು ತುಂಬಿಸುವ ಂ135ಕೋಟಿ ವೆಚ್ಚದ ಕಾಮಗಾರಿಯು ಅನುಮೋದನೆಯ ಹಂತದಲ್ಲಿದ್ದು, ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆಗೊಳ್ಳಲಿದೆ. ಈ ಎರಡೂ ಯೋಜನೆಗಳು ಅನುಮೋದನೆಗೊಂಡ ಕೂಡಲೇ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಕ್ಷೇತ್ರಕ್ಕೆ ಕರೆತಂದು ಚಾಲನೆಗೊಳಿಸಲಾಗುವುದು ಮತ್ತು ತಾಲ್ಲೂಕು ಉದ್ಘಾಟನೆಯನ್ನೂ ಅಂದೇ ನೆರವೇರಿಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪ.ಪಂ ಅಧ್ಯಕ್ಷೆ ಮಮತಾ ಮಹಾದೇವು, ಉಪಾಧ್ಯಕ್ಷ ಬಸವರಾಜು, ಸದ್ಯರಾದ ರಾಜೂಗೌಡಮ ಬಾಲರಾಜ್‌ನಾಯ್ಡು, ಟಿಎಪಿಸಿಎಂಎಸ್ ನಿರ್ದೇಶಕ ಮಾದೇಶ್, ಮುಖ್ಯಾಧಿಕಾರಿ ಮೋಹನ್‌ಕೃಷ್ಣ, ಅಭಿಯಂತರುಗಳಾದ ನಾಗೇಂದ್ರ, ಸುರೇಶ್, ಆರಾಧ್ಯ,ಅಧಿಕಾರಿಗಳಾದ ನಂಜುಂಡಶೆಟ್ಟಿ, ಮುಖಂಡರಾದ ಚಿಕ್ಕತಮ್ಮಯ್ಯ, ಮಲ್ಲು, ಮಹಾದೇವು, ಮಾದೇಶ್, ಸುದೇಶ್, ಗುತ್ತಿಗೆದಾರರಾದ ಪವನ್ ಎನ್ವೈರೋ ಇಂಜಿನಿಯರ್‌ನ ಅಧಿಕಾರಿಗಳು ಇನ್ನಿತರರು ಹಾಜರಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News