ಗುಂಪು ಹಿಂಸಾ ಹತ್ಯೆ ವಿರುದ್ಧ ಎಸ್‌ಡಿಪಿಐನಿಂದ ಅಭಿಯಾನ
ಮಂಡ್ಯ, ಆ.11: ದೇಶದಲ್ಲಿ ನಡೆಯುತ್ತಿರುವ ಗುಂಪು ಹಿಂಸಾ ಹತ್ಯೆ ಖಂಡಿಸಿ ಜಿಲ್ಲೆಯಲ್ಲಿ ಆ.17 ರಿಂದ 20ರವರೆಗೆ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಮುಹಮದ್ ತಾಹೇರ್ ಮತ್ತು ಕಾರ್ಯದರ್ಶಿ ಆಸ್ಗರ್ ಅಹಮದ್ ತಿಳಿಸಿದ್ದಾರೆ.
ಆ.17 ರಂದು ನಾಗಮಂಗಲದಲ್ಲಿ, 18 ರಂದು ಮದ್ದೂರಿನಲ್ಲಿ ವಿಚಾರಗೋಷ್ಠಿ ಏರ್ಪಡಿಸಿದ್ದು, ಆ.20 ರಂದು ಈ ಸಂಬಂಧ ಮಂಡ್ಯ ನಗರದಲ್ಲಿ ಬೃಹತ್ ಸಾರ್ವಜನಿಕ ಸಭೆ ಆಯೋಜಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಆ.1 ರಿಂದ 25ರವರೆಗೆ ಭಾರತದ ಗುಂಪು ಹಿಂಸಾ ಹತ್ಯೆಯನ್ನು ಪ್ರತಿರೋಧಿಸೋಣ ಎಂಬ ಶೀರ್ಷಿಕೆಯಡಿ ಎಸ್‌ಡಿಪಿಐ ರಾಷ್ಟ್ರೀಯ ಅಭಿಯಾನ ನಡೆಸುತ್ತಿದ್ದು, ಅದರ ಭಾಗವಾಗಿ ಜಿಲ್ಲೆಯಲ್ಲೂ ಈ ಅಭಿಯಾನ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.
ತಥಾಕಥಿತ ಗೋರಕ್ಷಣೆಯ ಹೆಸರಿನಲ್ಲಿ ದೇಶದಲ್ಲಿ ನಿರ್ಮಿಸಿರುವ ಅರಾಜಕತೆಯ ಪರಿಸ್ಥಿತಿಯನ್ನು ಪ್ರತಿರೋಧಿಸಲು ಮತ್ತು ಭಯಭೀತ ಜನರಲ್ಲಿ ಜಾಗೃತಿ ಮೂಡಿಸಿ ಸಂಘಟಿಸಲು ಅಭಿಯಾನದ ಉದ್ದೇಶವಾಗಿದ್ದು, ಸಾರ್ವಜನಿಕರು ಪಾಲ್ಗೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಗೋರಕ್ಷಕರ ಹೆಸರಲ್ಲಿ ನಡೆಸಿರುವ ಹಿಂಸಾ ಹತ್ಯೆಯಲ್ಲಿ 29 ಮಂದಿ ಅಮಾಯರು ಬಲಿಯಾಗಿದ್ದು, ನೂರಾರು ಮಂದಿ ಗಾಯಗೊಂಡು ದಯನೀಯ ಸ್ಥಿತಿಗೆ ತಲುಪಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಗೋರಕ್ಷರ ಗುಂಡಾಗಳಿಗೆ ರಕ್ಷಣೆ ನೀಡುತ್ತಾ ಬರುತ್ತಿವೆ ಎಂದು ಅವರು ಕಿಡಿಕಾರಿದ್ದಾರೆ.
ರಾಷ್ಟ್ರೀಯ ಅಭಿಯಾನವು ಆ.1ರಂದು ರಾಜಾಸ್ಥಾನದ ಜೈಪುರದಲ್ಲಿ ಚಾಲನೆಗೊಂಡಿದ್ದು, 25 ರಂದು ಮುಕ್ತಾಯಗೊಳ್ಳಲಿದೆ. 25 ರಂದು ಗುಂಪು ಹಿಂಸಾ ಹತ್ಯೆಯನ್ನು ವಿರೋಧಿಸಿ ಸಂತ್ರಸ್ತರಿಗೆ ನ್ಯಾಯದೊರಕಿಸಿಕೊಡುವ ನಿಟ್ಟಿನಲ್ಲಿ ವಿವಿಧ ಮುಖ್ಯ ರಸ್ತೆಗಳ ಇಕ್ಕೆಲಗಳಲ್ಲಿ "ಮನೆಯಿಂದ ಹೊರ ಬನ್ನಿ" ಎಂಬ ಸೂಚನಾ ಫಲಕವನ್ನು ಪ್ರದರ್ಶಿಸಲಾಗುವುದು ಎಂದೂ ಅವರು ಹೇಳಿದ್ದಾರೆ.