ಪ್ರತಿ ತಿರುವಿನಲ್ಲೂ ಪ್ರೇಮದ ದೀಪ ಬೆಳಗಲಿ: ಶಕೀಲ್ ಸಮ್ದಾನಿ
ಭಟ್ಕಳ, ಆ.11: ಇಂದು ದೇಶಕ್ಕೆ ಹಿಂದೂ-ಮುಸ್ಲಿಮ್ ಭಾವೈಕ್ಯತೆ ಅತಿ ಅವಶ್ಯಕತೆಯಾಗಿದ್ದು, ನಾವು ಪ್ರತಿಯೊಂದು ತಿರುವಿನಲ್ಲೂ ಪ್ರೀತಿ, ಪ್ರೇಮ, ಸೌಹಾರ್ಧತೆಯ ದೀಪವನ್ನು ಬೆಳಗಬೇಕಾಗಿದೆ ಎಂದು ಅಲಿಘಡ್ ಮುಸ್ಲಿಮ್ ವಿಶ್ವವಿದ್ಯಾಲಯದ ಕಾನೂನು ವಿಭಾಗದ ಮುಖ್ಯಸ್ಥ ಡಾ.ಮುಹಮ್ಮದ್ ಶಕೀಲ್ ಸಮ್ದಾನಿ ಹೇಳಿದರು.
ಅವರು ಶುಕ್ರವಾರ ಇಲ್ಲಿನ ಇಸ್ಲಾಮಿಯಾ ಆಂಗ್ಲೋ ಉರ್ದು ಪ್ರೌಢಶಾಲಾ ಮೈದಾನದಲ್ಲಿ ರಾಬಿತಾ ಸೂಸೈಟಿ ಆಯೋಜಿಸಿದ್ದ ರಾಬಿತಾ ಶೈಕ್ಷಣಿಕ ಪುರಸ್ಕಾರ ಸಮಾರಂಭದಲ್ಲಿ ಮುಖ್ಯಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ದೇಶದ ಮುಸ್ಲಿಮರು ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ ಎನ್ನುವ ಮಾತನ್ನು ಖಂಡಿಸಿದ ಅವರು, ಇಂದು ಭಾರತೀಯ ಮುಸ್ಲಿಮರು ಅದರಲ್ಲೂ ಉತ್ತರ ಭಾರತದ ಮುಸ್ಲಿಮರಲ್ಲಿ ಶೈಕ್ಷಣಿಕ ಜಾಗೃತಿಯಾಗುತ್ತಿದ್ದು, ಈ ಬಾರಿಯ ಐಎಎಸ್ ಪರೀಕ್ಷೆಯಲ್ಲಿ ಟಾಪ್‌ಟೆನ್ ವಿದ್ಯಾರ್ಥಿಗಳಲ್ಲಿ ಪ್ರಥಮ ಮೂರು ಸ್ಥಾನಗಳನ್ನು ಮುಸ್ಲಿಮರು ಪಡೆದುಕೊಂಡಿರುವುದೇ ಸಾಕ್ಷಿಯಾಗಿದೆ. ದಕ್ಷಿಣ ಭಾರತಕ್ಕೆ ಹೋಲಿಸಿದೆ ಉತ್ತರ ಭಾರತದ ಮುಸ್ಲಿಮರು ಶೈಕ್ಷಣಿಕವಾಗಿ ಹಿಂದುಳಿದಿದ್ದು ಸತ್ಯವಾದರೂ, ಈಗ ಅವರಲ್ಲಿ ಜಾಗೃತಿಯುಂಟಾಗುತ್ತಿದೆ ಎಂದರು.
ನಮ್ಮ ಸಂವಿಧಾನ ನಮಗೆ ಎಲ್ಲರೀತಿಯ ಹಕ್ಕು ನೀಡಿರುವಾಗ ನಾವು ಅದನ್ನು ಪಡೆಯುವಲ್ಲಿ ವಿಫಲರಾದರೆ ಯಾರ ತಪ್ಪುಎಂದು ಪ್ರಶ್ನಿಸಿದ ಅವರು, ನಾವು ನಮ್ಮ ಸಂವಿಧಾನ ಬದ್ಧ ಹಕ್ಕುಗಳಿಗಾಗಿ ಹೋರಾಡಬೇಕು ಎಂದರು. ಮಸ್ಲಿಮರು ತಮ್ಮ ರಕ್ಷಣೆಯನ್ನು ತಾವೇ ಮಾಡಿಕೊಳ್ಳಬೇಕು. ಈಗ ನಮ್ಮನ್ನು ರಕ್ಷಿಸಲು ಆಕಾಶದಿಂದ ಸಹಾಯ ಒದಗಿ ಬರುವುದಿಲ್ಲ ಎಂದರು. ಪ್ರಸ್ತುತ ದೇಶದ ರಾಜಕೀಯ ಸ್ಥಿತಿಗತಿಗಳ ಕುರಿತು ಮಾತನಾಡಿದ ಅವರು, ಪ್ರಜಾಪ್ರಭುತ್ವ ರೀತಿಯಲ್ಲಿ ಆಯ್ಕೆಗೊಂಡವರನ್ನು ಗೌರವಿಸಬೇಕು. ಅವರನ್ನು ಮನೆಗೆ ಕಳುಹಿಸುವ ವ್ಯವಸ್ಥೆಯೂ ಪ್ರಜಾಪ್ರಭುತ್ವ ರೀತಿಯಲ್ಲೇ ಅಗಬೇಕು. ನಾವು ಕೇವಲ ವಾಟ್ಸಪ್ ಮತ್ತು ಫೇಸ್ಬುಕ್ ಗಳಲ್ಲಿ ಹಾಸ್ಯ ಮಾಡುತ್ತ ಕಾಲ ಕಳೆಯುವುದರಲ್ಲೇ ವ್ಯರ್ಥರಾಗಿದ್ದೇವೆ. ದೇಶದಲ್ಲಿ ಮುಸ್ಲಿಮರ ಮೇಲೆ ದಿನೆ ದಿನೆ ನಡೆಯುತ್ತಿರುವ ದೌರ್ಜನ್ಯಗಳು ಹೆಚ್ಚಾಗತೊಡಗಿವೆ. ಸಂಖ್ಯೆಯಲ್ಲಿ ಹೆಚ್ಚಿದ್ದರೂ ನಾವಿಂದು ತೂಕ ಕಳೆದುಕೊಂಡಿದ್ದೇವೆ. ಇದಕ್ಕೆಕಾರಣ ನಾವು ಕುರ್‌ಆನಿ ಶಿಕ್ಷಣಗಳನ್ನು ಮರೆತಿದ್ದೇವೆ. ಹಿಂದೆ ಮುಸ್ಲಿಮರು ಸಂಖ್ಯೆಯಲ್ಲಿ ಅಲ್ಪರಾಗಿದ್ದರೂ ಅವರು ಜಗತ್ತನ್ನೂ ಆಳಿದರು. ಇಂದು ನಾಯಕತ್ವದಿಂದ ನಮ್ಮಿಂದ ದೂರಾವಾಗಿದೆ. ಕಳೆದುಕೊಂಡಿರುವ ಗೌರವ ಸನ್ಮಾನಗಳನ್ನು ಮತ್ತೇ ನಾವು ಮರಳಿ ಪಡೆಯಬೇಕಾದರೆ ಕುರಾನಿನ ಶಿಕ್ಷಣಕ್ಕನುಗುಣವಾಗಿ ಬದುಕುವುದನ್ನು ಕಲಿತುಕೊಳ್ಳಬೇಕು ಎಂದು ಕರೆ ನೀಡಿದರು.
ಮುಖ್ಯಅತಿಥಿಯಾಗಿ ಉಪಸ್ಥಿತರಿದ್ದು ರಾಜ್ಯಆಹಾರ ಮತ್ತು ನಾಗರೀಕ ಸರಬರಾಜು ಸಚಿವಯು.ಟಿ.ಕಾದರ್ ಮಾತನಾಡಿ, ನಾಲ್ಕುಗೋಡೆಯ ವರ್ಗದಕೋಣೆಯಲ್ಲಿರುವ, ಮೈದಾನ ಆಟ ಆಡುತ್ತಿರುವ ವಿದ್ಯಾರ್ಥಿವರ್ಗ ಬಲಿಷ್ಠರಾದಾಗ ಮಾತ್ರದೇಶ ಬಲಿಷ್ಠವಾಗುವುದು, ನಾವಿಂದುದೇಶಪ್ರೇಮದ ಬಗ್ಗೆ ಮಾತನಾಡುತ್ತೇವೆ. ಕೇವಲ ಮೈಕ್ ಮುಂದೆ ಬೊಬ್ಬೆ ಹೊಡೆಯುವುದರಿಂದದೇಶಪ್ರೇಮ ಬೆಳೆಯುವುದಿಲ್ಲ ಎಂದರು. ರಾಬಿತಾ ಸಂಸ್ಥೆಯ ಮಾಜಿಅಧ್ಯಕ್ಷ ಸಾದಿಕ್ ಪಿಲ್ಲೂರ್‌ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಯೂನೂಸ್‌ಕಾಝಿಯಾ ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.ಕಾರ್ಯದರ್ಶಿ ಮೌಲಾನ ಸೈಯ್ಯದ್‌ತನ್ವೀರ್ ಹಾಗೂ ಯೂಸೂಫ್ ಬರ್ಮಾವರ್‌ಕಾರ್ಯಕ್ರಮ ನಿರೂಪಿಸಿದರು.
ವೇದಿಕೆಯಲ್ಲಿ ಮೌಲಾನ ಅಬ್ದುಲ್ ಅಝೀಮ್ ಕಾಝೀಯಾ, ಖಲಿಫಾ ಜಮಾಅತುಲ್ ಮುಸ್ಲಿಮೀನ್ ಪ್ರಧಾನ ಕಾಝಿ ಮೌಲಾನ ಕ್ವಾಜಾ ಮುಹಿದ್ದೀನ್ ಅಕ್ರಮಿ ಮದನಿ, ರಾಬಿತಾ ಸಂಸ್ಥೆಯ ಮಾಜಿ ಪ್ರಧಾನ ಕಾರ್ಯದರ್ಶಿ ಮುಹಿದ್ದೀನ್ ರುಕ್ನುದ್ದೀನ್, ತಂಝೀಮ್ ಅಧ್ಯಕ್ಷ ಮುಝಮ್ಮಿಲ್ ಕಾಝಿಯಾ, ಅಂಜುಮನ್ ಸಂಸ್ಥೆಯ ಸೈಯ್ಯದ್ ಅಬ್ದುಲ್‌ರಹಮಾನ್ ಬಾತಿನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ನ್ಯೂಶಮ್ಸ್ ಸ್ಕೂಲ್ ಶಾಲೆಗೆ ಬೆಸ್ಟ್ ಸ್ಕೂಲ್ ಅವಾರ್ಡ್ ನೀಡಿ ಪುರಸ್ಕರಿಸಲಾಯಿತು.