ಪ್ರಭಾಕರ್‌ಭಟ್ ರ ಶಿಕ್ಷಣ ಸಂಸ್ಥೆಗೆ ಅನುದಾನ ಕಡಿತಗೊಳಿಸಿರುವುದರಲ್ಲಿ ಯಾವುದೇ ತಪ್ಪಿಲ್ಲ: ಸಿದ್ದರಾಮಯ್ಯ
ಚಿಕ್ಕಬಳ್ಳಾಪುರ, ಆ.11: ಈ ಹಿಂದೆ ಹಲವು ವಿದ್ಯಾಸಂಸ್ಥೆಗಳಿಗೆ ಅನುದಾನವನ್ನು ಕಡಿತ ಗೊಳಿಸುವಲ್ಲಿ ಕಳೆದ ಸರ್ಕಾರ ಯಶಸ್ವಿಯಾಗಿದ್ದು, ಪ್ರಸ್ತುತ ಕಲ್ಲಡ್ಕ ಪ್ರಭಾಕರ್‌ಭಟ್ ಅವರ ಶಿಕ್ಷಣ ಸಂಸ್ಥೆಗೆ ಅನುದಾನ ಕಡಿತಗೊಳಿಸಿರುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ನಗರದ ಹೊರಹೊಲಯದ ಅಣಕನೂರಿನಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಉದ್ಘಾಟಿಸಿದ ಬಳಿಕ ಸುದ್ದಿಗಾರರೊಂದಿಗೆ ಶಿಕ್ಷಣ ಸಂಸ್ಥೆಗೆ ಅನುದಾನ ಕಡಿತ ಕುರಿತು ಮಾತನಾಡಿದ ಅವರು, ಕಾನೂನು ಸಿದ್ದರಾಮಯ್ಯಗೂ ಒಂದೇ, ಕಲ್ಲಡ್ಕ ಭಟ್‌ಗೂ ಒಂದೇ ಎಂದು ನುಡಿದರು.
ಪ್ರಜಾಪ್ರಭುತ್ವದ ನಂಬಿಕೆಯಿಲ್ಲದವರು ಬೇರೇ ಪಕ್ಷದವರನ್ನು ಆಮಿಷವೊಡ್ಡಿ ರಾಜೀನಾಮೆ ಕೊಡಿಸಲು ಮುಂದಾಗಿದ್ದಾರೆ. ಅಲ್ಲದೆ ಆಪರೇಷನ್ ಕಮಲದಲ್ಲಿ ನಂಬಿಕೆ ಇಲ್ಲ ಎಂದ ಅವರು, ಕಾಂಗ್ರೆಸ್‌ನ ಯಾವುದೇ ಸಚಿವರು ಅಥವಾ ಶಾಸಕರು ಬಿಜೆಪಿ ಸೇರುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.
ಅಲ್ಲದೆ ಬಿಜೆಪಿಯ ಹಲವಾರು ಶಾಸಕರು ಕಾಂಗ್ರೆಸ್ ಸೇರಲು ತುದಿಗಾಲಲ್ಲಿ ನಿಂತಿದ್ದು, ಶೀಘ್ರದಲ್ಲಿಯೇ ರಾಜಕೀಯ ದೃವೀಕರಣ ನಡೆಯಲಿದೆ ಎಂದ ಅವರು, ಕಾಂಗ್ರೆಸ್ ಪಕ್ಷವು ಜನರ ವಿಶ್ವಾಸಕ್ಕೆ ತಕ್ಕಂತೆ ಕಾರ್ಯನಿರ್ವಹಿಸುತ್ತಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಕಳೆದ ಬಾರಿಗಿಂತ ಉತ್ತಮ ಮಟ್ಟದಲ್ಲಿದ್ದು, 2018ರ ಚುನಾವಣೆಯಲ್ಲಿ ಸಂಪೂರ್ಣ ಬಹುಮತದೊಂದಿಗೆ ಅಧಿಕಾರ ಏರುವುದರಲ್ಲಿ ಶತಸಿದ್ಧ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಮ್ಮ ನಡಿಗೆ ದಲಿತರ ಕಡೆಗೆ ಎಂಬ ಘೋಷಣೆಯೊಂದಿಗೆ ಹೋಟೆಲ್‌ನಲ್ಲಿ ತರಿಸಿದ ತಿಂಡಿ ದಲಿತರ ಮನೆಯಲ್ಲಿ ತಿಂದು ಬಂದ ಬಿಜೆಪಿಯವರು ದಲಿತರ ಮನೆಗಳಿಗೆ ಹೆಣ್ಣು ಮಕ್ಕಳನ್ನು ನೀಡಿ, ದಲಿತರ ಮನೆಯಿಂದ ಹೆಣ್ಣುಮಕ್ಕಳನ್ನು ನಿಮ್ಮ ಮನೆಗೆ ತನ್ನಿ ಎಂದು ತಾವು ಪ್ರಶ್ನಿಸಿದ ಕಾರಣ ಅಂದಿನಿಂದ ದಲಿತರ ಮನೆಗೆ ಭೇಟಿ ನೀಡುವುದನ್ನೂ ಬಿಟ್ಟಿದ್ದಾರೆ ಎಂದು ಲೇವಡಿ ಮಾಡಿದರು. ರಾಜ್ಯದಲ್ಲಿ ಕಾಂಗ್ರೆಸ್ ಕಳೆದ ಬಾರಿಗಿಂತ ಉತ್ತಮ ಸ್ಥಿಯಲ್ಲಿದ್ದು, 2018ರ ಚುನಾವಣೆಯಲ್ಲಿ ಸಂಪೂರ್ಣ ಬಹುಮತದೊಂದಿಗೆ ಅಧಿಕಾರ ಪಡೆಯುವುದರಲ್ಲಿ ಅನುಮಾನವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅಲ್ಲದೆ ಅಮಿತ್ ಶಾ ಅವರು ಬಂದರೆ ಕಾಂಗ್ರೆಸ್‌ನಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ, ಜೊತೆಗೆ ತಾವು ರೈತರ 50 ಸಾವಿರದವರೆಗಿನ ಸಾಲ ಮನ್ನಾ ಮಾಡಿದ್ದು, ಉಳಿದ ಸಾಲ ಮನ್ನಾಗಾಗಿ ಕೇಂದ್ರದ ಮೇಲೆ ಒತ್ತಡ ಹೇರಬೇಕಿದ್ದ ವಿರೋಧ ಪಕ್ಷಗಳು ತುಟಿ ಬಿಚ್ಚದೆ ಮೌನ ವಹಿಸಿವೆ ಎಂದು ಆರೋಪಿಸಿದರು.