ಮಡಿಕೇರಿ ದಸರಾ ಸಮಿತಿಯ ಕಾರ್ಯಾಧ್ಯಕ್ಷರಾಗಿ ಮಹೇಶ್ ಜೈನಿ ಆಯ್ಕೆ

Update: 2017-08-12 12:25 GMT

ಮಡಿಕೇರಿ, ಆ.12: ಐತಿಹಾಸಿಕ ಮಡಿಕೇರಿ ದಸರಾ ಸಮಿತಿಯ ಕಾರ್ಯಾಧ್ಯಕ್ಷರಾಗಿ ಬಿಜೆಪಿಯ ನಗರಾಧ್ಯಕ್ಷರಾದ ಮಹೇಶ್ ಜೈನಿ ಆಯ್ಕೆಯಾಗಿದ್ದಾರೆ. ಕಾರ್ಯಾಧ್ಯಕ್ಷ ಸ್ಥಾನಕ್ಕಾಗಿ ಇಂದು ನಡೆದ ಚುನಾವಣೆಯಲ್ಲಿ ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಬಿಜೆಪಿಯ ಕೆ.ಎಸ್.ರಮೇಶ್ ಪರಾಭವಗೊಂಡಿದ್ದಾರೆ.

ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ನಡೆದ ಚುನಾವಣೆಯಲ್ಲಿ ಹತ್ತು ಮಂಟಪ ಸಮಿತಿಗಳ ಅಧ್ಯಕ್ಷರುಗಳು ಹಾಗೂ ನಾಲ್ಕು ಕರಗ ಸಮಿತಿಗಳ ಅಧ್ಯಕ್ಷರುಗಳು ಮತದಾನ ಮಾಡಿದರು. ಒಟ್ಟು 14 ಮತಗಳಲ್ಲಿ ಮಹೇಶ್ ಜೈನಿ 10 ಮತಗಳನ್ನು ಪಡೆದು ಜಯಭೇರಿ ಬಾರಿಸಿದರೆ 4 ಮತಗಳನ್ನು ಗಳಿಸಿದ ಕೆ.ಎಸ್.ರಮೇಶ್ ಹೀನಾಯ ಸೋಲು ಅನುಭವಿಸಿದರು.

ಸುಮಾರು ಏಳು ಮಂದಿ ದಸರಾ ಸಮಿತಿ ಕಾರ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿದ್ದರು. ಆದರೆ ಕೊನೆ ಗಳಿಗೆಯಲ್ಲಿ ಐದು ಮಂದಿ ಸ್ಪರ್ಧೆಯಿಂದ ಹಿಂದೆ ಸರಿದರು. ಇಬ್ಬರು ಕಣದಲ್ಲಿ ಉಳಿದ ಕಾರಣ ಅನಿವಾರ್ಯವಾಗಿ ಚುನಾವಣೆ ನಡೆಸಲೇಬೇಕಾಯಿತು. ಆ ಮೂಲಕ ಕಳೆದ ಹಲವು ದಿನಗಳಿಂದ ಕಾರ್ಯಾಧ್ಯಕ್ಷ ಸ್ಥಾನದ ಆಯ್ಕೆ ವಿಚಾರಕ್ಕೆ ಸಂಬಂಧಿಸಿದಂತೆ ಉಂಟಾಗಿದ್ದಗೊಂದಲ ನಿವಾರಣೆಯಾದಂತ್ತಾಗಿದೆ.

ದಸರಾ ಸಮಿತಿಯಲ್ಲಿ ಹಲವು ಅಧಿಕಾರ ಸ್ಥಾನಗಳನ್ನು ಹೊಂದಿರುವ ನಗರಸಭಾ ಸದಸ್ಯರುಗಳಿಗೆ ಕಾರ್ಯಾಧ್ಯಕ್ಷ ಸ್ಥಾನ ನೀಡಬಾರದು ಎನ್ನುವ ಕೂಗು ಕೇಳಿ ಬಂದಿತ್ತು. ಸಾರ್ವಜನಿಕ ಕ್ಷೇತ್ರದ ವ್ಯಕ್ತಿಗಳಿಗೆ ಕಾರ್ಯಾಧ್ಯಕ್ಷ ಸ್ಥಾನ ನೀಡಬೇಕೆನ್ನುವ ಒತ್ತಾಯವಿತ್ತು.
ಈ ನಡುವೆಯೂ ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ.ಎಸ್.ರಮೇಶ್ ಅವರು ಕಾರ್ಯಾಧ್ಯಕ್ಷ ಸ್ಥಾನಕ್ಕಾಗಿ ಪಟ್ಟು ಹಿಡಿದಿದ್ದರು. ಆದರೆ ಇವರ ಅಭಿಪ್ರಾಯಕ್ಕೆ ನಗರಸಭಾಧ್ಯಕ್ಷರಾದ ಕಾವೇರಮ್ಮ ಸೋಮಣ್ಣ ಸೇರಿದಂತೆ ಬಹುತೇಕರು ವಿರೋಧ ವ್ಯಕ್ತಪಡಿಸಿದ್ದರು. ಇದರ ಪರಿಣಾಮವೇ ಕೆ.ಎಸ್.ರಮೇಶ್ ಅವರಿಗೆ ಸೋಲಾಯಿತು ಎಂದು ಹೇಳಲಾಗುತ್ತಿದೆ. ಬಹುಜನರ ಅಪೇಕ್ಷೆಯಂತೆ ನಗರಸಭಾ ಪ್ರತಿನಿಧಿಯಲ್ಲದ ಸಾರ್ವಜನಿಕ ಕ್ಷೇತ್ರದ ವ್ಯಕ್ತಿ ಕಾರ್ಯಾಧ್ಯಕ್ಷರಾಗಿ ಆಯ್ಕೆಯಾಗಿರುವುದನ್ನು ಹಲವರು ಸ್ವಾಗತಿಸಿದ್ದಾರೆ. 

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News