ಶಿಕಾರಿಪುರ: ಸಸಿ ನೆಡುವ ಕಾರ್ಯಕ್ರಮ

Update: 2017-08-12 14:03 GMT

ಶಿಕಾರಿಪುರ, ಆ.12: ಮರ ಗಿಡ ನಾಶದಿಂದ ಭೂಮಿ ತಾಯಿ ಬೆಂದು ಹೋಗಿದ್ದಾಳೆ. ಮಳೆಯಿಲ್ಲದೆ ಜನಜಾನುವಾರು ಕಂಗಾಲಾಗಿದ್ದು ಭೂಮಿ ತಂಪಾಗಲು ಮಳೆ ಅಗತ್ಯ. ಮಳೆಗೆ ಸಸಿ ನೆಟ್ಟು ಮರಗಿಡ ಬೆಳಸಿ ಎಂದು ಖ್ಯಾತ ಪರಿಸರ ಪ್ರೇಮಿ ನಾಡೋಜ ಪ್ರಶಸ್ತಿ ಪುರಸ್ಕೃತ ಸಾಲುಮರದ ತಿಮ್ಮಕ್ಕ ಕರೆ ನೀಡಿದರು.

ಶನಿವಾರ ಇಲ್ಲಿನ ಮುಕ್ತಿಧಾಮ ಅಭಿವೃದ್ದಿ ಸಮಿತಿ, ಛಾಯಾಗ್ರಾಹಕರ ಸಂಘ, ಕಾರ್ಯನಿರತ ಪರ್ತಕರ್ತರ ಸಂಘ, ಋಗ್ವೇದ ಸಂಸ್ಥೆ, ಬಾಪೂಜಿ ವಿದ್ಯಾ ಸಂಸ್ಥೆಯ ವತಿಯಿಂದ ಮುಕ್ತಿಧಾಮದಲ್ಲಿ ನಡೆದ ಸಸಿ ನೆಡುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳಿಲ್ಲದ ಕೊರಗು ಕಾಡುವ ಜತೆಗೆ ಅವಿದ್ಯಾವಂತಳಾಗಿದ್ದರಿಂದ ಸಮಾಜದಲ್ಲಿ ಗೌರವ ದೊರೆಯದು ಎಂಬ ಚಿಂತೆಯಿಂದ ನಿತ್ಯ ಬೆಳಿಗ್ಗೆ ಪತಿ ರಸ್ತೆ ಪಕ್ಕದಲ್ಲಿ ಗುಂಡಿ ತೆಗೆದು ಗಾಡಿಯಲ್ಲಿ ಹೋಗುತ್ತಿದ್ದು, ಹಿಂದಿನಿಂದ ಕಡ್ಡಿ ರೂಪದ ಸಸಿ ನೆಡುವ ಕಾಯಕವನ್ನು ರೂಡಿಸಿಕೊಂಡಿದ್ದಾಗಿ ತಿಳಿಸಿದ ಅವರು, ಬೆಳಿಗ್ಗೆ ಹೊಟ್ಟೆಪಾಡಿನ ಕಾಯಕ ನಂತರದಲ್ಲಿ ಸಸಿಗೆ ನೀರು ಹಾಕಿ ಕಾಪಾಡುವ ಕರ್ತವ್ಯವನ್ನು ನಿರ್ವಹಿಸಿ ಇದೀಗ ಮರವಾಗಿರುವುದು ಕಂಡು ಸಂತಸಪಡುತ್ತಿರುವುದಾಗಿ ತಿಳಿಸಿದರು.

ಸಕಾಲಕ್ಕೆ ಮಳೆಯಾದಲ್ಲಿ ಮನುಷ್ಯ ಪ್ರಾಣಿಗಳು ಸಂತೃಪ್ತವಾಗಿರಲು ಸಾದ್ಯ ಎಂದ ಅವರು, ಹಿಂದೆ ಅರಣ್ಯ ಸಂಪತ್ತಿನಿಂದ ಮಳೆ ಹೆಚ್ಚಾಗಿ ಬಯಲಲ್ಲಿ ನೀರು ಹರಿಯುತ್ತಿದ್ದು ಗೋಪ್ರಾಣಿಗಳು ಅನಂದವಾಗಿ ಬದುಕುತ್ತಿದ್ದವು. ಇತ್ತೀಚಿನ ದಿನದಲ್ಲಿ ಮರಗಿಡ ನಾಶದಿಂದ ಭೂಮಿ ತಾಯಿ ಬೆಂದುಹೋಗಿ ಕುಡಿಯಲು ನೀರಿಲ್ಲದೆ ಸರ್ಕಾರ ಗಾಡಿಯಲ್ಲಿ ನೀರು ನೀಡುತ್ತಿದ್ದು, ಇಂತಹ ಸ್ಥಿತಿಯನ್ನು ಈ ಕಣ್ಣಿನಿಂದ ನೋಡಬೇಕಾಗಿದೆ ಎಂದು ಅತಂಕ ವ್ಯಕ್ತಪಡಿಸಿದರು.

ಆರಂಭದಲ್ಲಿ ಹೊನ್ನಾಳಿ ರಸ್ತೆಯ ಮುಕ್ತಿಧಾಮದಲ್ಲಿ ಸಸಿ ನೆಡಲಾಯಿತು. ವಿವಿಧ ಸ್ಥಳೀಯ ಸಂಘಟನೆಗಳಿಂದ ತಿಮ್ಮಕ್ಕರನ್ನು ಅಭಿನಂದಿಸಲಾಯಿತು. 60 ಸಾವಿರ ಹಣ ಸಂಗ್ರಹಿಸಿ ಹಸ್ತಾಂತರಿಸಲಾಯಿತು. ಪುರಸಬಾಧ್ಯಕ್ಷೆ ರತ್ನಮ್ಮ, ಉಪಾಧ್ಯಕ್ಷೆ ಫೈರೋಜಾಭಾನು, ಸದಸ್ಯ ಮೋಹನ, ನಾಗರಾಜಗೌಡ, ರೂಪಕಲಾ ಹೆಗ್ಡೆ, ರವೀಂದ್ರ, ಮುಖ್ಯಾಧಿಕಾರಿ ಬಾಲಾಜಿರಾವ್, ತಾ. ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಕಿರಣಕುಮಾರ್, ಪರ್ತಕರ್ತರ ಸಂಘದ ಅಧ್ಯಕ್ಷ ಅರುಣಕುಮಾರ್, ಚಿನ್ನಪ್ಪ, ಪಾಪಯ್ಯ, ಹನೀಫ್‌ಸಾಬ್, ಚೇತನ್, ಎಂ.ಜಿ ಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News