ಹರದಾಸ ಅಪ್ಪಚ್ಚಕವಿ ಅಧ್ಯಯನ ಗ್ರಂಥ, ವಿಶಿಷ್ಟ ಕೊಡವ ಸಂಸ್ಕೃತಿ ದಾಖಲೀಕರಣ ಬಿಡುಗಡೆ

Update: 2017-08-12 14:19 GMT

ಮಡಿಕೇರಿ, ಆ.12: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಕೊಡಗಿನ ಕಾಳಿದಾಸ ಹರದಾಸ ಅಪ್ಪಚ್ಚಕವಿ ಅವರ ಅಧ್ಯಯನ ಗ್ರಂಥ ಮತ್ತು ವಿಶಿಷ್ಟ ಕೊಡವ ಸಂಸ್ಕೃತಿಯ ದಾಖಲೀಕರಣದ ಸಿಡಿಯನ್ನು ಇಂದು ಬಿಡುಗಡೆ ಮಾಡಲಾಯಿತು.

ನಗರದ ಕೊಡವ ಸಮಾಜದಲ್ಲಿ ನಡೆದ ಸಮಾರಂಭವನ್ನು ಉದ್ಘಾಟಿಸಿದ ಕೊಡವ ಜಾನಪದ ತಜ್ಞ, ಹಿರಿಯ ಸಾಹಿತಿ ಮತ್ತು ಕೊಡವ ಅಕಾಡೆಮಿಯ ಮಾಜಿ ಅಧ್ಯಕ್ಷ ಬಾಚರಣಿಯಂಡ ಅಪ್ಪಣ್ಣ ಅವರು ಸಾಹಿತಿ ಹಾಗೂ ಪತ್ರಕರ್ತ ಐತಿಚಂಡ ರಮೇಶ್ ಉತ್ತಪ್ಪ ಸಂಶೋಧಿಸಿ ರಚಿಸಿದ ಹರದಾಸ ಅಪ್ಪನೆರವಂಡ ಅಪ್ಪಚ್ಚಕವಿಯ ಅಧ್ಯಯನ ಗ್ರಂಥವನ್ನು ಬಿಡುಗಡೆ ಮಾಡಿ ಮಾತನಾಡಿದರು.

ಇತಿಹಾಸದ ಪುಟಗಳಲ್ಲಿ ಸೇರಿರುವ, ಜನ ಮಾನಸದಿಂದ ಮರೆಯಾಗುತ್ತಿದ್ದ ಕೊಡಗಿನ ಕಾಳಿದಾಸನೆಂದೆ ಪ್ರಸಿದ್ಧವಾಗಿದ್ದ ಅಪ್ಪನೆೆರವಂಡ ಅಪ್ಪಚ್ಚ ಕವಿಯ ಜೀವನ ಚರಿತ್ರೆಯನ್ನು ಅಕಾಡೆಮಿ ಪ್ರಕಟಿಸುವ ಮೂಲಕ ಕೊಡವ ಭಾಷೆಯ ಆದಿಕವಿಯೆಂದೆ ಪರಿಗಣಿತವಾಗಿರುವ ಹರದಾಸ ಅಪ್ಪಚ್ಚ ಕವಿಗೆ ಪುನರ್ಜನ್ಮವನ್ನು ನೀಡಿರುವುದಾಗಿ ಸಂತಸ ವ್ಯಕ್ತಪಡಿಸಿದರು.

ಹರದಾಸ ಅಪ್ಪಚ್ಚಕವಿ ಜನಿಸಿ 150 ವರ್ಷಗಳು ಸಂದಿದ್ದು, ಅವರು ಸಾಹಿತ್ಯ ರಚಿಸಿದ ದಿನಮಾನಗಳಲ್ಲಿ ಮತ್ತು ಆ ಬಳಿಕದ ಸಾಕಷ್ಟು ವರ್ಷಗಳ ಕಾಲ ಪ್ರಚಾರದ ಕೊರತೆಯಿಂದ ಅಪ್ಪಚ್ಚ ಕವಿಯ ಸಾಹಿತ್ಯದ ಕುರಿತು ಹೆಚ್ಚಿನ ಅರಿವು ಜನರಲ್ಲಿ ಇರಲಿಲ್ಲ ಮತ್ತು ಕೊಡಗಿನ ಜನರ ಅಭಿಮಾನದ ಕೊರತೆಯೂ ಇದಕ್ಕೊಂದು ಕಾರಣವಾಗಿರಬಹುದು. 1948 ರಲ್ಲಿ ಐಚೆಟ್ಟಿರ ಮುತ್ತಣ್ಣ ಅವರು ಅಪ್ಪಚ್ಚ ಕವಿಯ ಸಾಹಿತ್ಯದ ಪ್ರಚಾರಕ್ಕೆ ಮುನ್ನುಡಿಯನ್ನು ಬರೆದವರಾಗಿದ್ದರೆಂದು ತಿಳಿಸಿದರು.

ದಾಖಲೀಕರಣ ಬಿಡುಗಡೆ

ಕೊಡವ ಭಾಷಿಕ ಸಮುದಾಯದ ಭಾಷಾ ಸಂಸ್ಕ್ರತಿಯ ಕುರಿತು ಸಿರಿಗಂಧ ಶ್ರೀನಿವಾಸಮೂರ್ತಿ ನಿರ್ದೇಶನದಲ್ಲಿ ಹೊರ ತರಲಾದ ದಾಖಲೀಕರಣದ ಸಿಡಿಯನ್ನು ಮಂಗಳೂರು ವಿವಿಯ ಕೊಡವ ಸಾಂಸ್ಕೃತಿಕ ಅಧ್ಯಯನ ಪೀಠದ ರಿಜಿಸ್ಟ್ರಾರ್ ಮತ್ತು ಸಂಯೋಜಕ ಡಾ. ಕೋಡಿರ ಲೋಕೇಶ್ ಬಿಡುಗಡೆ ಮಾಡಿದರು.

ನಂತರ ಮಾತನಾಡಿದ ಅವರು, ಅಕಾಡೆಮಿಯಿಂದ ಕೊಡವ ಭಾಷಿಕ ಸಮುದಾಯದ ಭಾಷಾ ಸಂಸ್ಕೃತಿಯ ದಾಖಲೀಕರಣ ಒಳ್ಳೆಯ ಪ್ರಯತ್ನ ಮತ್ತು ಇದು ನಿರಂತರವಾಗಿ ಮುಂದುವರಿಯುವ ಅಗತ್ಯವಿದೆ. ಕೊಡವರು ಹೊರಗಿನಿಂದ ಬಂದವರೆ ಎನ್ನುವ ವಿಷಯದ ಕುರಿತ ಚರ್ಚೆಗಳು ಪ್ರಯೋಜನಕಾರಿಯಲ್ಲ. ಬದಲಾಗಿ ಕೊಡವ ಭಾಷಾ ಸಂಸ್ಕೃತಿಯನ್ನು ಉಳಿಸುವ ಕೆಲಸ ನಡೆಯಬೇಕಾಗಿದೆಯೆಂದು ಅಭಿಪ್ರಾಯಪಟ್ಟರು.

ಹೊರ ಸಂಸ್ಕೃತಿಯ ಧಾಳಿ ಮತ್ತು ಪ್ರಭಾವಗಳ ನಡುವೆ ಕೊಡವ ಭಾಷಾ ಮೂಲ ಸಂಸ್ಕೃತಿಯನ್ನು ದಾಖಲೀಕರಣದ ಮೂಲಕ ಸಂರಕ್ಷಿಸಿಕೊಳ್ಳುವುದು ಅಗತ್ಯವೆಂದು ತಿಳಿಸಿದರು.

ಕೊಡವ ಜಾನಪದ ಕೋಶ 

ಮಂಗಳೂರು ವಿವಿ ಕೊಡವ ಸಾಂಸ್ಕೃತಿಕ ಅಧ್ಯಯನ ಪೀಠದಿಂದ ಕೊಡವ ಜಾನಪದ ಕೋಶದ ಸಿದ್ಧತಾ ಕಾರ್ಯಗಳು ನಡೆಯುತ್ತಿದೆ. ಅದಾಗಲೆ ಕೊಡಗಿನ ಕೆಂಬಟ್ಟಿಸಮುದಾಯದ ಕುರಿತ ಪುಸ್ತಕ ಸಜ್ಜುಗೊಂಡಿದ್ದು ಬಿಡುಗಡೆ ಮಾಡಲಾಗುತ್ತದೆಂದು ತಿಳಿಸಿದರು.

ಫೆಲೋಶಿಪ್ ಕೃತಿಗಳ ಬಿಡುಗಡೆ

ಸಮಾರಂಭದಲ್ಲಿ ಡಾ. ಬಿದ್ದಂಡ ರೇಖಾ ಚಿಣ್ಣಪ್ಪ ಅವರ ಸಂಶೋಧನಾತ್ಮಕ ಬರಹ ಸ್ವಾತಂತ್ರ್ಯ ಪೂರ್ವ ರಾಜಕೀಯ ಪರಿಸ್ಥಿತಿ(1947)ನ್ನು ಜಿಲ್ಲಾ ಕಸಾಪ ಅಧ್ಯಕ್ಷ ಲೋಕೆೇಶ್ ಸಾಗರ್, ಕಂಬೆಯಂಡ ಡೀನಾ ಬೋಜಣ್ಣ ಅವರ ಸಂಶೋಧನಾತ್ಮಕ ಬರಹ ಕೊಡಗಿನ ಮುಂದ್‌ಮನೆ ಕೈಮಡ ಮಂದ್‌ಗಳ ಶ್ರೀಮಂತ ಪರಂಪರೆಯನ್ನು ಅಪರ ಜಿಲ್ಲಾಧಿಕಾರಿ ಎಂ. ಸತೀಶ್ ಕುಮಾರ್, ಮಚ್ಚಮಾಡ ಗೋಪಿ ಸೀತಮ್ಮ ಅವರ ನೀತಿ ಜೊಪ್ಪೆಪುಸ್ತಕವನ್ನು ಮಡಿಕೆೇರಿ ಕೊಡವ ಸಮಾಜದ ಉಪಾಧ್ಯಕ್ಷರಾದ ಮಣವಟ್ಟಿರ ಇ. ಚಿಣ್ಣಪ್ಪ ಬಿಡುಗಡೆ ಮಾಡಿದರು. ಇದೇ ಸಂದರ್ಭ ಕೊಡವ ಜಾನಪದ ಪರಿಕರಗಳಾದ ಮೇದಪರೆ ಮತ್ತು ದುಡಿಗಳನ್ನು ಫಲಾನುಭವಿಗಳಿಗೆ ವಿತರಿಸಲಾಯಿತು.

ಅಪರ ಜಿಲ್ಲಾಧಿಕಾರಿ ಎಂ.ಸತೀಶ್ ಕುಮಾರ್ ಮಾತನಾಡಿ, ಕೊಡವ ಅಕಾಡೆಮಿ ಕೊಡವ ಭಾಷಾ ಸಂಸ್ಕ್ರತಿಯ ಸಂರಕ್ಷಣೆೆ ಮತ್ತು ಪ್ರಚುರ ಪಡಿಸುವ ಕಾರ್ಯವನ್ನು ನಡೆಸಿದೆ. ಹೀಗಿದ್ದು ಇತ್ತೀಚಿನ ದಿನಗಳಲ್ಲಿ ಕೆಲಸ ಕಾರ್ಯಗಳ ಮೇಲೆ ಹೊರ ಜಿಲ್ಲೆಯಲ್ಲಿ ನೆಲೆಸಿರುವ ಜಿಲ್ಲೆಯ ಯುವ ಸಮೂಹ, ಮರಳಿ ಕೊಡಗಿಗೆ ಬರಲು ಆಸಕ್ತಿ ತೋರದಿರುವ ಆತಂಕಕಾರಿ ಬೆಳವಣಿಗೆ ಕಂಡು ಬರುತ್ತಿದೆ. ಈ ಹಿನ್ನೆಲೆಯಲ್ಲಿ ಯುವ ಸಮೂಹಕ್ಕೆ ಕೊಡವ ಸಂಸ್ಕೃತಿಯ ಮಹತ್ವದ ಬಗ್ಗೆ ಅರಿವು ಮೂಡಿಸುವ ಕಾರ್ಯವಾಗಬೆೇಕಾಗಿದೆ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಬಿದ್ದಾಟಂಡ ಎಸ್.ತಮ್ಮಯ್ಯ ವಹಿಸಿದ್ದರು. ವೇದಿಕೆಯಲ್ಲಿ ಮಡಿಕೆೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಪ್ಪನೆರವಂಡ ಚುಮ್ಮಿದೇವಯ್ಯ, ಹಿರಿಯ ಸಾಹಿತಿ ಡಾ. ಕಾಳಿಮಾಡ ಶಿವಪ್ಪ, ಹಿರಿಯ ಸಾಹಿತಿ ಚೆಕ್ಕೇರ ತ್ಯಾಗರಾಜ್, ಮಡಿಕೇರಿ ಕೊಡವ ಸಮಾಜದ ಪೊಮ್ಮಕ್ಕಡ ಅಧ್ಯಕ್ಷರಾದ ಕವಿತ ಬೊಳ್ಳಮ್ಮ, ಮೈಸೂರು ರಂಗಾಯಣದ ನಿವೃತ್ತ ಸಹಾಯಕ ನಿರ್ದೇಶಕ ಎಸ್.ಐ. ಭಾವಿಕಟ್ಟಿ ಉಪಸ್ಥಿತರಿದ್ದರು.

ಚೇಂದಿರ ನಿರ್ಮಲ ಬೋಪಣ್ಣ ತಂಡ ಪ್ರಾರ್ಥಿಸಿ, ಅಕಾಡೆಮಿ ಸದಸ್ಯರಾದ ಚೋವಂಡ ಎಸ್. ಬೋಪಯ್ಯ ಸ್ವಾಗತಿಸಿದರು. ರಿಜಿಸ್ಟ್ರಾರ್ ಉಮರಬ್ಬ ಪ್ರಾಸ್ತಾವಿಕವಾಗಿ ಮಾತನಾಡಿದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News