ಸೊರಬ: ವನಮಹೋತ್ಸವ ಕಾರ್ಯಕ್ರಮ

Update: 2017-08-12 15:11 GMT

ಸೊರಬ, ಆ.12: ಭೂಮಿ ಮತ್ತು ಭಗವಂತ ಯಾವತ್ತೂ ಮನುಷ್ಯನ ದ್ವೇಷಿಗಳಲ್ಲ. ಮನುಷ್ಯ ತನ್ನ ಸ್ವಾರ್ಥದಿಂದಾಗಿ ಅನೇಕ ಸಂಕಷ್ಟಗಳನ್ನು ಎದುರಿಸುತ್ತಿದ್ದಾನೆ ಎಂದು ನಾಡೋಜ ಪ್ರಶಸ್ತಿ ಪುರಸ್ಕೃತೆ ಸಾಲುಮರದ ತಿಮ್ಮಕ್ಕ ಬೇಸರ ವ್ಯಕ್ತಪಡಿಸಿದರು.

ಪಟ್ಟಣದ ಡಿ.ದೇವರಾಜ್ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಯದಲ್ಲಿ ಲಯನ್ಸ್ ಕ್ಲಬ್, ಹಾಗೂ ವಿದ್ಯಾರ್ಥಿನಿಲಯದ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ವನಮಹೋತ್ಸವ ಕಾರ್ಯಕ್ರಮ ಸಸಿ ನೆಟ್ಟು ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ನಾಡಿನ ಜನರು ಹೆಣ್ಣು ಗಂಡೆಂಬ ತಾರತಮ್ಯವಿಲ್ಲದೆ ಸಮಾನತೆಯಿಂದ ಬಾಳಿದಾಗ ಸಾಮರಸ್ಯದ ಜೀವನ ಸಾಧ್ಯ. ಭೂಮಿಯನ್ನು ಬರುಡಾಗಿಸದೆ ಸುಂದರ ಪರಿಸರಕ್ಕಾಗಿ ಗಿಡಗಳನ್ನು ಬೆಳೆಸುವುದನ್ನುಪ್ರತಿಯೊಬ್ಬರೂ ಕರ್ತವ್ಯವಾಗಿಸಿಕೊಳ್ಳಬೇಕು. ಮಕ್ಕಳಾಗಿಲ್ಲ ಎಂಬ ಕೊರಗನ್ನು ದೂರಮಾಡಲು ಸಸಿಗಳನ್ನು ನೆಟ್ಟು ಅವುಗಳಿಗೆ ನೀರೆರೆದು ಮಕ್ಕಳ ರೂಪದಲ್ಲಿ ಪೋಷಿಸಿದೆ. ನನ್ನ ಕಾರ್ಯಕ್ಕೆ ಜೀವನೋಪಾಯಕ್ಕಾಗಿ ಕೂಲಿ ಕೆಲಸ ಮಾಡುತ್ತಿದ್ದ ನನ್ನ ಪತಿಯ ಸಹಕಾರವೂ ಸಾಕಷ್ಟು ದೊರೆಯಿತು. ದೇಶಕ್ಕೆ ಒಳಿತನ್ನು ಬಯಸುವುದಾದರೆ ಪೋಷಕರು ತಮ್ಮ ಮಕ್ಕಳನ್ನು ಸಸಿಗಳನ್ನು ಬೆಳೆಸಿ ಉಳಿಸುವ ಬಗ್ಗೆ ತಿಳಿಹೇಳಬೇಕು. ಕಷ್ಟಪಟ್ಟರೆ ಸುಖ-ಸಂಪತ್ತು ತಾನಾಗಿಯೆ ಬರುತ್ತದೆ. ಕಷ್ಟ ಜೀವಿಗಳನ್ನು ಸಮಾಜವೂ ಗುರುತಿಸುತ್ತದೆ ಎಂದರು.

ವಲಯಾರಣ್ಯಾಧಿಕಾರಿ ಅಜಯ್‌ಕುಮಾರ್ ಮಾತನಾಡಿ, ನಾಡಿನಲ್ಲಿ ಪರಿಸರವನ್ನು ಉಸಿರಾಗಿಸಿಕೊಂಡು ನಿಸ್ವಾರ್ಥದಿಂದ ಸೇವೆ ಸಲ್ಲಿಸಿದ ಏಕೈಕ ಜೀವ ಸಾಲುಮರದ ತಿಮ್ಮಕ್ಕ. ಇವರ ವೈಚಾರಿಕ ದೃಷ್ಟಿಕೋನವನ್ನು ಮುಂದಿಟ್ಟುಕೊಂಡು ಅರಣ್ಯ ಇಲಾಖೆ ಜಿಲ್ಲಾ ಕೇಂದ್ರದಲ್ಲಿ ಸಾಲುಮಮರದ ತಿಮ್ಮಕ್ಕನವನ ಎಂದು ಉದ್ಯಾನವನ ನಿರ್ಮಿಸುತ್ತಿರುವುದು ಶ್ಲಾಘನೀಯ. ಅಂತವರನ್ನು ಎಲ್ಲರೂ ಆದರ್ಶವಾಗಿಟ್ಟುಕೊಳ್ಳುವ ಅಗತ್ಯವಿದೆ ಎಂದರು.

ನಿಲಯದ ಮೇಲ್ವಿಚಾರಕಿ ಪುಷ್ಪಲತ ಬಾವಿಮಠ ಕಾರ್ಯಕ್ರುದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಲಯನ್ಸ್ ಪ್ರಾಂತೀಯ ಅಧ್ಯಕ್ಷ ನಾಗರಾಜ್‌ಗೌಡ, ಲಯನ್ಸ್ ಕ್ಲಬ್ ಅಧ್ಯಕ್ಷೆ ಪ್ರತಿಮಾ,ಬಿಸಿಎಂ ವಿಸ್ತರಣಾಧಿಕಾರಿ ವಿಜಯಲಕ್ಷ್ಮೀ ಬದ್ನೂರ್, ಟಿ.ಆರ್.ಸುರೇಶ್, ಶಿವಾನಂದ್ ಬಿಳಗಿ, ಹೆಚ್.ಎಸ್. ಮಂಜಪ್ಪ,ಚಿಂತಕ ರಾಜಪ್ಪ ಮಾಸ್ತರ್, ಡಾ.ಎಂ.ಕೆ ಭಟ್, ನಾಗರಾಜ್ ಗುತ್ತಿ, ಡಾ. ಜ್ಞಾನೇಶ್, ಡಿ.ಎಸ್. ಪ್ರಶಾಂತ್,ಶಿಕ್ಷಕ ಕುಮಾರಸ್ವಾಮಿ,ಕೃಷ್ಣಪ್ಪ ಜೆಡಿಗೇರಿ ಮತ್ತಿತರರಿದ್ದರು.
ತಾಲ್ಲೂಕಿನ ವಿವಿಧ ಸಂಘ-ಸಂಸ್ಥೆಗಳು ಸಾಲು ಮರದ ತಿಮ್ಮಕ್ಕ ಅವರನ್ನು ಸನ್ಮಾನಿಸಿದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News