ಯಾವ ರಾಜಕೀಯ ಪಕ್ಷಗಳಿಗೂ ಲೋಕಾಯುಕ್ತ ಸಂಸ್ಥೆ ಬೇಡವಾಗಿದೆ: ಸಂತೋಷ್ ಹೆಗಡೆ

Update: 2017-08-12 15:27 GMT

ಕಡೂರು, ಆ. 12: ಯಾವ ರಾಜಕೀಯ ಪಕ್ಷಗಳಿಗೂ ಲೋಕಾಯುಕ್ತ ಸಂಸ್ಥೆ ಬೇಡವಾಗಿದೆ ಎಂದು ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ಆರೋಪಿಸಿದರು.

ಅವರು ಶನಿವಾರ ಕಡೂರು ಶಾಸಕ ವೈ.ಎಸ್.ವಿ. ದತ್ತ ಅವರ 1 ಸಾವಿರ ಕಿ.ಮೀ. ಪಾದಯಾತ್ರೆಯ ಸಮಾರೋಪದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಸಂದರ್ಭ ಪಟ್ಟಣದ ಪ್ರವಾಸಿಮಂದಿರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದರು.

ರಾಜ್ಯದಲ್ಲಿ ಲೋಕಾಯುಕ್ತ ಸಂಸ್ಥೆ ಬಲಿಷ್ಟವಾಗಿತ್ತು. ಈ ಸಂಸ್ಥೆಯನ್ನು ದುರ್ಬಲ ಮಾಡಲು ಹಲವಾರು ಪ್ರಯತ್ನಗಳು ನಡೆಯುತ್ತಿವೆ. ಆಡಳಿತ ನಡೆಸುವವರ ಜೊತೆ ಲೋಕಾಯುಕ್ತ ಸಂಸ್ಥೆ ಕೈ ಜೋಡಿಸದಿದ್ದರೆ ಆ ಸಂಸ್ಥೆಯನ್ನು ಮುಚ್ಚುವ ಪ್ರಯತ್ನ ನಡೆಸುತ್ತಿರುವುದು ವಿಷಾಧನೀಯ ಎಂದರು.
 
ಈ ಹಿಂದೆಯೂ ಎಸಿಬಿ ಸಂಸ್ಥೆ ಇತ್ತು. ನಾಲೈದು ವರ್ಷಗಳಲ್ಲಿ 20 ಪ್ರಕರಣಗಳನ್ನು ಮಾತ್ರ ಅದು ದಾಖಲಿಸಿತ್ತು. ಲೋಕಾಯುಕ್ತ ಸಂಸ್ಥೆ 2006ರಿಂದ 2011ರವರೆಗೆ 700ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದೆ ಎಂದ ಅವರು, ನ್ಯಾಯಮೂರ್ತಿ ಭಾಸ್ಕರರಾವ್ ಅವರನ್ನು ಲೋಕಾಯುಕ್ತ ನ್ಯಾಯಮೂರ್ತಿಗಳಾಗಿ ನೇಮಕ ಮಾಡಿದ್ದೇ ಆ ಸಂಸ್ಥೆಯನ್ನು ಮುಚ್ಚಲು ಎಂಬ ಸತ್ಯ ಈಗ ಎಲ್ಲರಿಗೂ ಅರಿವಾಗಿದೆ. 2016ರಲ್ಲಿ ಏಕಾಏಕಿ ಯಾವ ಚರ್ಚೆಯನ್ನೂ ನಡೆಸದೆ ಎಸಿಬಿ ಸಂಸ್ಥೆಯನ್ನು ಸರ್ಕಾರ ಹುಟ್ಟುಹಾಕಿತು ಎಂದು ನುಡಿದರು. ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರ ಮನೆಯ ಮೇಲೆ ಐಟಿ ದಾಳಿ ವಿಚಾರವಾಗಿ ಪ್ರಶ್ನಿಸಿದಾಗ ಗುಜರಾತ್ ಶಾಸಕರುಗಳಿಗೂ ಐಟಿ ದಾಳಿಗೂ ಸಂಬಂಧವಿಲ್ಲ. ಇಷ್ಟು ದೊಡ್ಡ ಮಟ್ಟದ ದಾಳಿ ನಡೆಸಬೇಕಾದರೆ ಮೂರು ಅಥವಾ ನಾಲ್ಕು ತಿಂಗಳುಗಳ ಕಾಲ ತನಿಖೆ ನಡೆಯಬೇಕು. ಎಷ್ಟೋ ಮಾಹಿತಿ ಪಡೆದು ದಾಳಿ ನಡೆಸಿದ್ದಾರೆ. ಇದು ತಪ್ಪಲ್ಲ ಎಂದು ಹೇಳಿದರು.

ದೇಶದಲ್ಲಿ ಕಪ್ಪು ಹಣವಿರುವವರು ಬಹಳಷ್ಟು ಜನರಿದ್ದಾರೆ. ಅವರ ವಿರುದ್ದವೂ ದಾಳಿ ನಡೆಯಬೇಕು. ಕೇಂದ್ರದಲ್ಲಿ ಆಡಳಿತದಲ್ಲಿರುವ ಪಕ್ಷದ ನಾಯಕರ ಮೇಲೂ ಐಟಿ ದಾಳಿ ನಡೆಯಬೇಕು. ಇಲ್ಲದಿದ್ದರೆ ಜನರಿಗೆ ನಂಬಿಕೆ ಬರುವುದಿಲ್ಲ ಎಂದು ಆ ಪಕ್ಷದ ಮುಖಂಡರುಗಳೇ ಸಾರ್ವಜನಿಕವಾಗಿ ವ್ಯಾಖ್ಯಾನ ಮಾಡುತ್ತಿದ್ದಾರೆ ಎಂದರು.

ನಟ ಉಪೇಂದ್ರ ಅವರ ರಾಜಕೀಯ ಕ್ಷೇತ್ರದ ಪ್ರವೇಶದ ಬಗ್ಗೆ ಪ್ರಶ್ನಿಸಿದಾಗ, ಸಿದ್ದಾಂತಗಳ ಆಧಾರದ ಮೇಲೆ ರಚಿಸಿದ ಪಕ್ಷ ಉತ್ತಮ ಆಡಳಿತ ನೀಡುತ್ತದೆ. ಹಣವಿಲ್ಲದೆ ಪಕ್ಷ ಕಟ್ಟುತ್ತೇನೆ ಎಂದು ಹೇಳಿದ್ದಾರೆ. ಸಮಾಜದಲ್ಲಿ ಅವರ ಪಕ್ಷ ಉತ್ತಮ ಪಕ್ಷವಾಗಿ ಹೊರಹೊಮ್ಮಲಿ ಎಂದು ಆಶೀಸಿದರು.
ಬೆಂಗಳೂರಿನ ಕೆರೆಗಳನ್ನು ಮತ್ತು ರಾಜಕಾಲುವೆಗಳನ್ನು ಮುಚ್ಚಿದ್ದಾರೆ, ರಾಜಕಾಲುವೆಗಳ ನೀರು ಕೆರೆಗಳಿಗೆ ಹೋಗುತ್ತಿತ್ತು. ಆದರೆ ಇಂದು ಕೆರೆಗಳಿಲ್ಲದ ಕಾರಣ ಮನೆಗಳಿಗೆ ಹೋಗುತ್ತಿದೆ. ಇದರಿಂದ ತಾಪಮಾನ ಹೆಚ್ಚಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆರೆಗಳ ಮತ್ತು ರಾಜಕಾಲುವೆಗಳ ಡಿನೋಟಿಪೀಕೆಷನ್ ಮಾಡುವುದಿಲ್ಲ ಎಂದು ಭರವಸೆ ನೀಡಿದ್ದಾರೆ. ಈ ಬಗ್ಗೆ ಕಾದು ನೋಡೋಣ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News