ಕೆರೆಗಳಿಗೆ ನೀರು ತುಂಬಿಸುವ ಅಂಶವನ್ನು ಜೆಡಿಎಸ್ ಚುನಾವಣಾ ಪ್ರಣಾಳಿಕೆಯಲ್ಲಿ ಸೇರಿಸಿಕೊಳ್ಳಲಿದೆ: ದೇವೇಗೌಡ

Update: 2017-08-12 15:34 GMT

ಕಡೂರು, ಆ. 12: ತಾಲೂಕಿನ ಎಲ್ಲಾ ಕೆರೆಗಳಿಗೆ ನೀರು ತುಂಬಿಸುವ ಅಂಶವನ್ನು ಜೆಡಿಎಸ್ ಪಕ್ಷವು ಬರುವ ಚುನಾವಣೆಯಲ್ಲಿ ತನ್ನ ಪ್ರಣಾಳಿಕೆಯಲ್ಲಿ ಸೇರಿಸಿಕೊಳ್ಳಲಿದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಹೆಳಿದರು.

ಅವರು ಶನಿವಾರ ಕಡೂರು ಶಾಸಕ ವೈ.ಎಸ್.ವಿ. ದತ್ತ ಅವರು ಒಂದು ಸಾವಿರ ಕಿ.ಮೀ ಪಾದಯಾತ್ರೆಯ ಸಮಾರೋಪ ಸಮಾರಂಭವನ್ನು ಉದ್ಟಾಟಿಸಿ ಮಾತನಾಡಿದರು.

ಕ್ಷೇತ್ರದ ಬಗ್ಗೆ ಅತೀವ ಅಭಿಮಾನ ಹೊಂದಿರುವ ಶಾಸಕ ದತ್ತ ಅವರ ಕಾಳಜಿ ಶ್ಲಾಘನೀಯ ಎಂದ ಗೌಡರು, ಬಯಲುಭಾಗದ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಜಾರಿಗೆ ಭಗೀರಥ ಪ್ರಯತ್ನ ಮಾಡುತ್ತಿರುವ ದತ್ತ ಅವರ ಹೋರಾಟಕ್ಕೆ ತಮ್ಮ ಬೆಂಬಲವಿದೆ ಎಂದು ಹೇಳಿದರು. ಈ ನಿಟ್ಟಿನಲ್ಲಿ ಯಾವುದೇ ಕಾರ್ಯಕ್ರಮಗಳಾಗಲಿ, ಯಾವುದೇ ಹೋರಾಟಗಳಾಗಲಿ ತಾವು ಪಾಲ್ಗೊಳ್ಳಲು ಸದಾ ಸಿದ್ದ. ಈ ಭಾಗದ ಜನರು ಸಂಪೂರ್ಣ ನೀರಾವರಿ ಹೊಂದಲು ದತ್ತ ಅವರ ಹೋರಾಟಕ್ಕೆ ಪಕ್ಷಾತೀತವಾಗಿ ಎಲ್ಲರೂ ಬೆಂಬಲಿಸಲಿ ಎಂದು ಸಲಹೆ ನೀಡಿದ ಅವರು, ನೀರಾವರಿ ವಿಷಯದಲ್ಲಿ ರಾಜ್ಯಕ್ಕೆ ಬಹಳಷ್ಟು ವರ್ಷಗಳಿಂದಲೂ ಹಿನ್ನೆಡೆಯಾಗುತ್ತಿದೆ. ಕೃಷ್ಣ, ಕಾವೇರಿ, ಗೋದಾವರಿ, ಮಹದಾಯಿ ಮುಂತಾದ ನದಿಗಳ ಯೋಜನೆಗಳನ್ನು ಹೋರಾಟದ ಮೂಲಕವೇ ಅನುಷ್ಟಾನಗೊಳಿಸಬೇಕಾದ ಅನಿವಾರ್ಯತೆ ಎದುರಾಗಿದೆ ಎಂದರು.

ಗೋದಾವರಿ ನದಿ ತಿರುವಿನ ಯೋಜನೆ ಬಳಿಕ ಕೃಷ್ಣಾ ನದಿ ಯೋಜನೆಯಲ್ಲಿ ಬಚಾವತ್‌ನಲ್ಲಿ ಸ್ಕೀಮ್‌ನಲ್ಲಿ 23 ಟಿಎಂಸಿ ನೀರು ಲಭ್ಯವಾಗಬೇಕು. ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಕಡೂರು ತಾಲೂಕಿನ ಕೆರೆಗಳಿಗೆ ನೀರು ಹರಿಸಲು 1.538 ಟಿಎಂಸಿ ನೀರಿನ ಅಗತ್ಯವಿದ್ದು. ಅದು ಈ 23 ಟಿಎಂಸಿ ಬಚಾವತ್ ಸ್ಕೀಮ್‌ನಲ್ಲಿ ಸೇರಿದೆ ಎಂದು ಹೇಳಿದರು.

ದುರ್ಧೈವ ಆಂಧ್ರಪ್ರದೇಶ ಇಬ್ಬಾಗವಾಗಿ ತೆಲಂಗಾಣ ಮತ್ತು ಆಂಧ್ರಪ್ರದೇಶ ರಾಜ್ಯಗಳಾಗಿ ಈಗ ಎರಡೂ ರಾಜ್ಯಗಳು ಗೋದಾವರಿ ನೀರಿನಲ್ಲಿ ಪಾಲು ಕೇಳುತ್ತಿವೆ. ಗೋದಾವರಿ ನದಿ ತಿರುವು ಯೋಜನೆ ಜಾರಿಗೆ ಸಂಬಂಧಿಸಿದಂತೆ ಕೃಷ್ಣಾ ನದಿ ಪಾತ್ರದ ಜನರ ಅರಿವು ಮೂಡಿಸುವ ಅಗತ್ಯವಿದೆ ಎಂದು ನುಡಿದರು.

ಧಾರವಾಡ ಮತ್ತು ಗದಗ ಜಿಲ್ಲೆಯ 12 ತಾಲೂಕುಗಳಿಗೆ ಕುಡಿಯುವ ನೀರು ಒದಗಿಸುವ ಮಹದಾಯಿ ಯೋಜನೆ ಜಾರಿಗೆ ಈಗಾಗಲೇ ಹೋರಾಟಗಳು ನಡೆದಿವೆ. ನಿರಂತರ ಹೋರಾಟಕ್ಕೆ ಫಲ ಇನ್ನೂ ಸಿಕ್ಕಿಲ್ಲ. ವ್ಯವಸ್ಥೆ ಹದಗೆಟ್ಟು ಹೋಗಿದೆ. ನಮ್ಮನ್ನು ಆಳುವವರು ಸಮಸ್ಯೆಯನ್ನು ಮತ್ತಷ್ಟು ಸಂಕೀರ್ಣ ಮಾಡಿದ್ದಾರೆ ಎಂದ ಅವರು, ಆಲಮಟ್ಟಿ ಅಣೆಕಟ್ಟು ಕಾವೇರಿಯ ಎಲ್ಲಾ ಅಣೆಕಟ್ಟುಗಳ ಒಟ್ಟು ನೀರಿನ ಸಂಗ್ರಹಕ್ಕಿಂತ ಮೂರು ಪಟ್ಟು ಹೆಚ್ಚು ಸಾಮಥ್ಯ ಹೊಂದಿದೆ. ಆದರೆ ಇದರ ಸಂಪೂರ್ಣ ಬಳಕೆ ಕರ್ನಾಟಕಕ್ಕೆ ಆಗಿಲ್ಲ. ತಾವು ಪ್ರಧಾನಿ ಆಗಿದ್ದಾಗಿನಿಂದ ಈವರೆಗೆ ರೂ. 10 ಸಾವಿರ ಕೋಟಿ ಹಣ ಮಾತ್ರ ಈ ಯೋಜನೆಗೆ ಬಂದಿದೆ ಎಂದರು.

ನೀರಾವರಿಯ ಸಮಸ್ಯೆಗಳ ಬಗ್ಗೆ ಗಂಟೆಗಟ್ಟಲೇ ಮಾತನಾಡಬಹುದು. ರೈತರು ಕಡಿಮೆ ನೀರು ಬಳಸಿ ಹೆಚ್ಚಿನ ಬೆಳೆ ಬೆಳೆಯುವ ಕೃಷಿ ಚಟುವಟಿಕೆಯತ್ತ ಗಮನ ಅರಿಸಬೇಕು. ಪ್ರಧಾನಿ ಮೋದಿ ಈ ಬಗ್ಗೆ ಈಚೆಗೆ ಇಸ್ರೇಲ್ ದೇಶಕ್ಕೆ ತೆರಳಿ ಮಾಹಿತಿ ಪಡೆದುಕೊಂಡು ಬಂದಿದ್ದಾರೆ. ಅದರ ಸದುಪಯೋಗ ಈ ದೇಶದ ಜನರಿಗೆ ಆಗಬೇಕು ಎಂದು ನುಡಿದರು.

ವೈ.ಎಸ್.ವಿ. ದತ್ತ ಪ್ರಾಸ್ತಾವಿಕವಾಗಿ ಶಾಸಕ ಮಾತನಾಡಿದರು.
ವೇದಿಕೆಯಲ್ಲಿ ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ, ಸಾತಂತ್ರ್ಯ ಹೋರಾಟಗಾರ ಹೆಚ್.ಎಸ್. ದೊರೆಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News