ಡಯಾಲಿಸಿಸ್ ಚಿಕಿತ್ಸಾ ಘಟಕಗಳ ಉದ್ಘಾಟನಾ ಸಮಾರಂಭ

Update: 2017-08-12 15:46 GMT

ಚಿಕ್ಕಬಳ್ಳಾಪುರ, ಆ.12: ಜಿಲ್ಲಾಸ್ಪತ್ರೆಯಲ್ಲಿ ಅವ್ಯವಸ್ಥೆಗಳ ಕುರಿತು ಕೇಳಿ ಬರುತ್ತಿರುವ ದೂರುಗಳನ್ನು ವಾರದಲ್ಲಿ ಸರಿಪಡಿಸದಿದ್ದಲ್ಲಿ ಕಟ್ಟು ನಿಟ್ಟಿನ ಕ್ರಮಕೈಗೊಳ್ಳುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಕೆ.ಆರ್.ರಮೇಶ್ ಕುಮಾರ್ಜಿಲ್ಲಾ ಶಸ್ತ್ರಚಿಕಿತ್ಸಕರಿಗೆ ಎಚ್ಚರಿಸಿದರು.

ನಗರದ ಜಿಲ್ಲಾಸ್ಪತ್ರೆಯಲ್ಲಿ ಆರಂಭಿಸಿರುವ 12 ಯುನಿಟ್‌ಗಳ ನೂತನ ಡಯಾಲಿಸಿಸ್ ಚಿಕಿತ್ಸಾ ಘಟಕಗಳ ಉದ್ಘಾಟನಾ ಸಮಾರಂಭದಲ್ಲಿ ರಕ್ತ ಸೇರಿದಂತೆ ಕೆಲ ಪರೀಕ್ಷೆಗಳು, ಔಷಧಗಳಿಗೆ ಹೊರಗಡೆ ಕಳಿಸುತ್ತಿದ್ದಾರೆ ಎಂಬ ದೂರುಗಳನ್ನು ಆಲಿಸಿ ಜಿಲ್ಲಾಶಸ್ತ್ರ ಚಿಕಿತ್ಸಕರನ್ನು ಪ್ರಶ್ನಿಸಿದ ಅವರು, ಮುಂಬರುವ ಸೋಮವಾರದ ಅಂತ್ಯದೊಳಗೆ ಎಲ್ಲ ಸಮಸ್ಯೆಗಳನ್ನು ಇತ್ಯರ್ಥಪಡಿಸಬೇಕೆಂದು ಕಟ್ಟುನಿಟ್ಟಿನ ಆದೇಶ ನೀಡಿದರು.

ಜಿಲ್ಲಾಸ್ಪತ್ರೆಗೆ ಕೆಲ ಯಂತ್ರೋಪಕರಣಗಳು ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ ಕಳೆದ 10 ವರ್ಷಗಳಿಂದ ನಡೆಯದ ನೇಮಕಾತಿ ಪ್ರಕ್ರಿಯೆಯಿಂದ ಸ್ಥಗಿತಗೊಂಡಿದ್ದ ಸಿಬ್ಬಂದಿಗಳಿಗೆ ನೇಮಕಾತಿ ವಿಶೇಷ ಅನುಮತಿಯೊಂದಿಗೆ ಆನ್‌ಲೈನ್ ಅರ್ಜಿ ಆಹ್ವಾನಿಸಲಾಗಿದೆ. ಕೆಲ ಸೇವೆಗಳನ್ನು ಗುತ್ತಿಗೆ ನೀಡಲಾಗಿದೆ. ರಾಜ್ಯದಲ್ಲಿ ಸಮಗ್ರ 2003 ಪ್ರಾಥಮಿಕ ಆರೋಗ್ಯ ಕೇಂದ್ರ, 206 ಸಮುದಾಯ ಆರೋಗ್ಯ ಕೇಂದ್ರಗಳು, 146 ತಾಲೂಕು ಆಸ್ಪತ್ರೆ, 31 ಜಿಲ್ಲಾಸ್ಪತ್ರೆಗಳು ಕಾರ್ಯನಿರ್ವಹಿಸುತ್ತಿರುವ ಬೃಹತ್ ವ್ಯವಸ್ಥೆಯಲ್ಲಿ ಲೋಪಗಳು ಇರಬಹುದು ಎಂದ ಅವರು, ಲೋಪಗಳನ್ನು ಸರಿಪಡಿಸಲು ಮುಂದಾಗುವುದಾಗಿ ತಿಳಿಸಿದರು.

ಶಾಸಕ ಡಾ.ಕೆ. ಸುಧಾಕರ್ ಮಾತನಾಡಿ, ಸಾವಿರಾರು ರೂ. ವೆಚ್ಚದ ಡಯಾಲಿಸಿಸ್ ಚಿಕಿತ್ಸೆಯನ್ನು ಉಚಿತವಾಗಿ ಒದಗಿಸುವ ನಿಟ್ಟಿನಲ್ಲಿ ಜಿಲ್ಲಾಸ್ಪತ್ರೆಯಲ್ಲಿ ಸುಸಜ್ಜಿತ ಡಯಾಲಿಸಿಸ್ ಚಿಕಿತ್ಸಾ ಘಟಕಗಳನ್ನು ಆರಂಭಿಸಲಾಗಿದ್ದು, ಬಡ ವರ್ಗದ ಜನತೆ ಡಯಾಲಿಸಿಸ್ ಸೇವೆಯನ್ನು ಪಡೆದುಕೊಳ್ಳಬೇಕೆಂದ ಅವರು, ರೋಗ ಕಾಣಿಸಿಕೊಳ್ಳುವ ಮುನ್ನ ಉತ್ತಮ ಜೀವನ ಶೈಲಿ, ಆಹಾರ ವಿಧಾನಗಳಿಂದ ಆರೋಗ್ಯವಂತ ಜೀವನ ಸಾಗಿಸಲು ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸುವ ಮೂಲಕ ಆರೋಗ್ಯವಂತ ಜೀವನ ಸಾಗಿಸಬೇಕೆಂದು ಸಲಹೆ ನೀಡಿಸಿದರು.

ಇದೇ ಸಂದರ್ಭದಲ್ಲಿ ಆಸ್ಪತ್ರೆಯ ಆವರಣದಲ್ಲಿ ನೂತನ ಆಂಬ್ಯುಲೆನ್ಸ್‌ಗಳಿಗೆ ಚಾಲನೆ ನೀಡಲಾಯಿತು. ಜಿಪಂ ಅಧ್ಯಕ್ಷ ಪಿ.ಎನ್.ಕೇಶವರೆಡ್ಡಿ, ಖಾದಿ ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷಯಲುವಳ್ಳಿ ಎನ್. ರಮೇಶ್, ಉದ್ಯಮಿ ಬಿ.ಆರ್.ಶೆಟ್ಟಿ, ಜಿಲ್ಲಾಧಿಕಾರಿ ದೀಪ್ತಿ ಆದಿತ್ಯ ಕಾನಡೆ, ಜಿಲ್ಲಾ ಆರೋಗ್ಯ ುತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರವಿಶಂಕರ್, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಎಂ.ವಿ.ವಿಜಯ್ ಕುಮಾರ್ಸೇರಿದಂತೆ ಮತ್ತಿತರರು ಇದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News