ರಾಜ್ಯಕ್ಕೊಂದು ಸಾಂಸ್ಕೃತಿಕ ನೀತಿ

Update: 2017-08-12 18:55 GMT

ಇಂದಿರಾ ಕ್ಯಾಂಟೀನುಗಳನ್ನು ಸ್ಥಾಪಿಸಿ ಬಡಜನರ ಹೊಟ್ಟೆಯ ಹಸಿವನ್ನು ಇಂಗಿಸುವ ಸ್ತುತ್ಯಾರ್ಹ ಕ್ರಮ ಕೈಗೊಂಡಿರುವ ಸಿದ್ದರಾಮಯ್ಯನವರ ಸರಕಾರ, ಗ್ರಂಥಾಲಯಗಳನ್ನೇ ಪುಸ್ತಕ ಸಂಪನ್ಮೂಲವಾಗಿ ನೆಚ್ಚಿಕೊಂಡಿರುವ ಬಡ ಓದುಗರ ಜ್ಞಾನದ ಹಸಿವನ್ನು ಇಂಗಿಸುವುದೂ ತನ್ನ ಕರ್ತವ್ಯವೆಂಬುದನ್ನು ಮರೆಯಬಾರದು.


ಪರಂಪರೆಯನ್ನು ಪೋಷಿಸಿ ತಮ್ಮತನವನ್ನು ಬೆಳೆಸುವ ಸಂಸ್ಕೃತಿ ಶಾಶ್ವತವಾದುದು. ಅದನ್ನು ಪೋಷಿಸಿ ಬೆಳೆಸುವ, ಒಂದು ನೆಲದ ಸಾಂಸ್ಕೃತಿಕ ಅಸ್ಮಿತೆಯನ್ನು ಕಾಪಾಡಿಕೊಳ್ಳುವ ಮತ್ತು ಅದಕ್ಕೆ ಹೊಸ ಹೊಸ ಆಯಾಮಗಳನ್ನು ಜೋಡಿಸುವ ಕೆಲಸವೂ ನಿತ್ಯ ನಿರಂತರವಾಗಿ ನಡೆಯುತ್ತಿರಬೇಕು. ರಾಜಪ್ರಭುತ್ವದಲ್ಲಿ ಸಂಸ್ಕೃತಿಯ ಪೋಷಣೆ ಅರಮನೆಯ ದ್ದಾಗಿತ್ತು. ಹಳೆಯ ಮೈಸೂರು ಸಂಸ್ಥಾನದ ಮಹಾರಾಜರು ಸಂಸ್ಕೃತಿ ಪೋಷಣೆಯ ಕಾರ್ಯದಲ್ಲಿ ಉದಾರವಾಗಿಯೇ ಇದ್ದರು. ಸ್ವಾತಂತ್ರ್ಯೋತ್ತರ ಸಂಸದೀಯ ಪ್ರಜಾಸತ್ತೆಯ ವ್ಯವಸ್ಥೆಯಲ್ಲೂ ನಮ್ಮ ಸರಕಾರಗಳು ಸಂಸ್ಕೃತಿ ಪೋಷಣೆ ವಿಷಯದಲ್ಲಿ ಉದಾರವಾಗಿಯೇ ನಡೆದುಕೊಂಡು ಬಂದಿವೆ. ಆದರೆ, ಸಂಸ್ಕೃತಿ ಪೋಷಣೆಯ ಹೆಸರಿನಲ್ಲಿ ನಡೆಯುವ ಎಲ್ಲ ಕೆಲಸಕಾರ್ಯಗಳೂ ಸಮಾನತೆ-ಸ್ವಾಯತ್ತತೆಗಳ ಆಧಾರದ ಮೇಲೆ ಎಲ್ಲ ಕಾಲದಲ್ಲೂ ನ್ಯಾಯೋಚಿತವಾಗಿ ನಡೆಯುತ್ತವೆ ಎಂದು ಹೇಳಲಾಗದು.

ಅರಸರ ಆಳ್ವಿಕೆಯ ಕಾಲದಲ್ಲೂ ಸ್ವಜನಪಕ್ಷಪಾತ, ಪೂರ್ವಾಗ್ರಹಗಳು ಇದ್ದವು ಎಂಬುದು ಚರಿತ್ರೆಯಿಂದ ವಿದಿತ. ಸ್ವಾತಂತ್ರ್ಯಾನಂತರವೂ ಇಂತಹ ದೂರುಗಳಿಗೆ ಕೊರತೆ ಇಲ್ಲ. ಕರ್ನಾಟಕ ಸರಕಾರದಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿಗಳ ಪೋಷಣೆ ಮತ್ತು ಅಭಿವೃದ್ಧಿಗಾಗಿ ಪ್ರತ್ಯೇಕ ಇಲಾಖೆಯೇ ಇದೆ. ಅದರಡಿ ಹಲವಾರು ಅಕಾಡಮಿಗಳಿವೆ. ಆದರೂ ಕಲೆಸಾಹಿತ್ಯಗಳ ಪೋಷಣೆಯಲ್ಲಿ, ಕಲಾವಿದರಿಗೆ, ಸಾಹಿತಿಗಳಿಗೆ, ಸಂಘ ಸಂಸ್ಥೆಗಳಿಗೆ ಸಹಾಯಧನ ನೀಡಿಕೆಯಲ್ಲಿ, ಪ್ರಶಸ್ತಿ ಪುರಸ್ಕಾರ ನೀಡಿಕೆಯಲ್ಲಿ, ಅಕಾಡಮಿಗಳಿಗೆ ನೇಮಕ ಇತ್ಯಾದಿಗಳಲ್ಲಿ ಸ್ವಜನಪಕ್ಷಪಾತ, ಕಲಾಪೂರ್ವಾಗ್ರಹಗಳು, ಪ್ರಾದೇಶಿಕ ಪೂರ್ವಾಗ್ರಹಗಳು, ಪ್ರಭಾವಗಳು ಕೆಲಸ ಮಾಡುತ್ತಿದ್ದು ಸಮಾನತೆ, ಸ್ವಾತಂತ್ರ್ಯದಂಥ ಮೌಲ್ಯಗಳನ್ನು ಕಡೆಗಣಿಸಲಾಗುತ್ತಿದೆ ಎಂಬ ದೂರುಗಳು ಕೇಳಿಬರುತ್ತಲೇ ಇವೆ.

ಸರಕಾರ ಸಂಸ್ಕೃತಿ ಪೋಷಣೆ ವಿಷಯದಲ್ಲಿ ಸ್ಪಷ್ಟ ಧೋರಣೆ ಹೊಂದಿಲ್ಲದಿರುವುದು ಮತ್ತು ಸ್ಪಷ್ಟ ಸಾಂಸ್ಕೃತಿಕ ನೀತಿ ಇಲ್ಲದಿರುವುದು ಇದಕ್ಕೆಲ್ಲ ಕಾರಣವೆಂಬ ಮಾತೂ ಉಂಟು.ಸರಕಾರದ ಸಾಂಸ್ಕೃತಿಕ ನೀತಿ ಏನಿರಬೇಕೆಂದು ಸಲಹೆ-ಸೂಚನೆ ನೀಡಲು ಸಿದ್ದರಾಮಯ್ಯನವರ ಸರಕಾರ ಖ್ಯಾತ ಸಾಹಿತಿ ಬರಗೂರು ರಾಮಚಂದ್ರಪ್ಪನವರ ಆಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಿತು.

ಬರಗೂರರ ಅಧ್ಯಕ್ಷತೆಯಲ್ಲಿ ಈ ಸಮಿತಿಯನ್ನು 2013ರಲ್ಲಿ ರಚಿಸಲಾಯಿತು. ಸಮಿತಿ 2014ರಲ್ಲಿ ಸರಕಾರಕ್ಕೆ ವರದಿ ಸಲ್ಲಿಸಿತು. ಸಮಿತಿಯ ಶಿಫಾರಸುಗಳ ಪರಾಮರ್ಶೆಗೆ ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ. ಪಾಟೀಲ ಅಧ್ಯಕ್ಷತೆಯಲ್ಲಿ ಉಪಸಮಿತಿಯೊಂದನ್ನು ರಚಿಸಲಾಯಿತು. ಸಣ್ಣಪುಟ್ಟ ತಿದ್ದುಪಡಿಗಳ ನಂತರ ಆಖೈರಾಗಿ ಸಿದ್ದರಾಮಯ್ಯನರ ಮಂತ್ರಿ ಮಂಡಲ ಸಮಿತಿಯ ಶಿಫಾರಸುಗಳಿಗೆ ಇದೀಗ ಅಂಗೀಕಾರ ನೀಡಿದೆ. ಈ ಅಂಗೀಕಾರದೊಂದಿಗೆ ರಾಜ್ಯದಲ್ಲಿ ಸಾಂಸ್ಕೃತಿಕ ನೀತಿಯೊಂದು ಜಾರಿಗೆ ಬಂದಂತಾಗಿದೆ. ನಿರೀಕ್ಷೆಯಂತೆ ಇದಕ್ಕೆ ಪರ-ವಿರೋಧ ಪ್ರತಿಕ್ರಿಯೆಗಳೂ ಬಂದಿವೆ.

ಸರಕಾರ ಒಪ್ಪಿಕೊಂಡಿರುವ ಸಮಿತಿಯ ಪ್ರಮುಖ ಶಿಫಾರಸುಗಳು ಹೀಗಿವೆ:
1. ಪ್ರಾಚ್ಯ ವಸ್ತುಗಳು ಮತ್ತು ಸ್ಮಾರಕಗಳ ಸಂರಕ್ಷಣೆ.
2. ಸರಕಾರ ನೀಡುವ ಪ್ರಶಸ್ತಿಗಳನ್ನು ಆಯಾ ವರ್ಷವೇ ವಿತರಿಸಬೇಕು.
3. ವಿವಿಧ ಅಕಾಡಮಿಗಳ ಸಬಲೀಕರಣ.
4. ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಧನಸಹಾಯ ನೀಡಲು ಮಾರ್ಗದರ್ಶಿ ಸೂತ್ರ.
5. ಕನ್ನಡ ಶಾಸ್ತ್ರೀಯ ಭಾಷೆಯ ಆಧ್ಯಯನಕ್ಕೆ ಉತ್ತೇಜನ.
6. ಕನ್ನಡ ತಂತ್ರಾಂಶಗಳ ಸದ್ಬಳಕೆಗೆ ಪ್ರೋತ್ಸಾಹ.
7. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವಿಕೇಂದ್ರೀಕರಣ ಹಾಗೂ ರಾಜ್ಯದ ನಾಲ್ಕು ಕಡೆಗಳಲ್ಲಿ ಪ್ರಾದೇಶಿಕ ಕಚೇರಿ ಸ್ಥಾಪನೆ.
8. ತುಳು ಭಾಷೆಗೆ ಸಾಂವಿಧಾನಕ ಮಾನ್ಯತೆ ನೀಡಲು ಕೇಂದ್ರಕ್ಕೆ ಶಿಫಾರಸು.
9. ಪ್ರಾಕೃತ ಮತ್ತು ಪಾಲಿ ಭಾಷೆ ಅಧ್ಯಯನಕ್ಕೆ ಕೇಂದ್ರ ಸ್ಥಾಪನೆ.

10. ಕಲಾಗ್ರಾಮಗಳ ಸ್ಥಾಪನೆ, ಕಲಾಕೃತಿಗಳ ಮಾರಾಟ ಕೇಂದ್ರ ಸ್ಥಾಪನೆ. ಇವುಗಳಲ್ಲಿ ಬಹುತೇಕ ಶಿಫಾರಸುಗಳು ನೀತಿನಿರೂಪಣೆಗೆ ಮಿಗಿಲಾಗಿ ಆಡಳಿತಾತ್ಮಕ ತೊಡಕುಗಳಿಗೆ ಸಂಬಂಧಿಸಿದವು.

ಪ್ರಾಚ್ಯ ವಸ್ತುಗಳು ಮತ್ತು ಪ್ರಾಚೀನ ಸ್ಮಾರಕಗಳನ್ನು ರಕ್ಷಿಸಬೇಕೆನ್ನುವುದು ಈಗಾಗಲೇ ಕೇಂದ್ರ ಸರಕಾರದ ಒಪ್ಪಿತ ನೀತಿಯಾಗಿದೆ. ಇದಕ್ಕೆ ರಾಜ್ಯ ಸರಕಾರದ ತಕರಾರು ಏನೂ ಇದ್ದಂತಿಲ್ಲ. ಈ ಹೊಣೆಗಾರಿಕೆಯ ನಿರ್ವಹಣೆಯಲ್ಲಿ ರಾಜ್ಯ ಸರಕಾರದ ಪಾಲು-ಪಾತ್ರಗಳೇನೋ ತಿಳಿಯದು. ಏನಾದರೂ ಇದ್ದಲ್ಲಿ ಅದನ್ನು ಗಮನಿಸುವುದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕರ್ತವ್ಯವಾಗುತ್ತದೆ.

 ಸಾಹಿತ್ಯ ಕಲೆಗಳನ್ನು ಪೋಷಿಸುವುದು, ಪ್ರೋತ್ಸಾಹಿಸುವುದು ಮೊದಲಿನಿಂದಲೂ ಸರಕಾರದ ನೀತಿಯಾಗಿದ್ದು ಆ ನೀತಿಯ ಅನುಷ್ಠಾನಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಅಕಾಡಮಿಗಳು ಮೊದಲಾದ ವ್ಯವಸ್ಥೆಗಳಿವೆ. ಪ್ರಶಸ್ತಿ ಪುರಸ್ಕಾರಗಳ ವಿತರಣೆಯಲ್ಲಿ ವಿಳಂಬ ಇಲಾಖೆಯಲ್ಲಿನ ಆಡಳಿತಾತ್ಮಕ ಜೋಬದ್ರತನವನ್ನು ತೋರಿಸುತ್ತದೆ. ಇಲಾಖೆಯಲ್ಲಿನ ಅದಕ್ಷತೆ ಹೊರತು ಇದಕ್ಕೆ ಬೇರಾವ ಕಾರಣವೂ ಇರಲಿಕ್ಕಿಲ್ಲ.

ಸಮಿತಿ ನೀಡಿರುವ ವರದಿಯಲ್ಲಿ ವಿವಿಧ ಅಕಾಡಮಿಗಳ ಸಶಕ್ತೀಕರಣಕ್ಕೆ ಶಿಫಾರಸು ಮಾಡಲಾಗಿದೆ. ಸಮಿತಿಯ ದೃಷ್ಟಿಯಲ್ಲಿ ಸಶಕ್ತೀಕರಣದ ಪರಿಕಲ್ಪನೆಯೇನೋ ತಿಳಿಯದು. ಆರ್ಥಿಕ ಸಶಕ್ತೀಕರಣವೇ, ಅಧಿಕಾರದ ಸಶಕ್ತೀಕರಣವೇ ಅಥವಾ ಹೆಚ್ಚಿನ ಸ್ವಾಯತ್ತತೆಯೇ? ತಿಳಿಯದು. ಈ ಶಿಫಾರಸಿನ ಸ್ವರೂಪವೇನು ಎಂಬುದೂ ತಿಳಿಯದು ಅಥವಾ ಇದಕ್ಕೆ ಸರಕಾರದ ನಿರ್ಧಾರ/ಪ್ರತಿಕ್ರಿಯೆ ಏನು ಎಂಬುದೂ ಬಹಿರಂಗವಾಗಿಲ್ಲ. ಈಗಿರುವಂತೆ ಅಕಾಡಮಿಗಳು ಸ್ವಾಯತ್ತ ಸಂಸ್ಥೆಗಳು. ನಮಗೆ ತಿಳಿದಂತೆ ಅವುಗಳ ಮುಖ್ಯ ಸಮಸ್ಯೆ ಆರ್ಥಿಕ ಮುಗ್ಗಟ್ಟು. ‘ಅಜ್ಜಿ ನೂತದ್ದೆಲ್ಲ ಮೊಮ್ಮಗನ ಉಡುದಾರಕ್ಕೆ ಸಾಲದು’ ಎಂಬಂತೆ ಸರಕಾರ ಕೊಡುವ ಸಹಾಯಧನ ಪ್ರಶಸ್ತಿ ವಿತರಣೆಗೇ ಸಾಲದು. ಸಂಸ್ಕೃತಿ ಪೋಷಣೆಗೆ ಪೂರಕವಾದ ಬೇರಾವ ಅರ್ಥಪೂರ್ಣ ಕಾರ್ಯಕ್ರಮಗಳನ್ನು ವರ್ಷವಿಡೀ ನಡೆಸುವಂಥ ಆರ್ಥಿಕ ತಾಕತ್ತು ಅಕಾಡಮಿಗಳಿಗಿಲ್ಲ. ಸಾಂಸ್ಕೃತಿಕ ನೀತಿ ಅನುಷ್ಠಾನಕ್ಕಾಗಿ ಸಚಿವ ಜಯಚಂದ್ರ ಅವರು ಘೋಷಿಸಿರುವ 36.68 ಕೋಟಿ ಅನುದಾನದಲ್ಲಿ ಅಕಾಡಮಿಗಳಿಗೆ ಏನಾದರೂ ದಕ್ಕಬಹುದೇ ಎಂಬುದನ್ನು ಕಾದು ನೋಡಬೇಕಾಗಿದೆ.

ಸರಕಾರ ಅಕಾಡಮಿಗಳಿಗೆ ಈಗ ಕೊಡುತ್ತಿರುವ ಅನುದಾನ ಏನೇನೂ ಸಾಲದು ಎಂಬುದರಲ್ಲಿ ಎರಡನೆಯ ಮಾತಿರಲಾರದು. ಕೊಟ್ಟ ಅನುದಾನವನ್ನು ಯಾವ ರೀತಿ ಬಳಸಬೇಕೆಂಬುದು ಅಕಾಡಮಿ ಅಧ್ಯಕ್ಷರ ವಿವೇಚನೆ, ಸದ್ವಿವೇಕ ಮತ್ತು ಸದಸ್ಯರ ಸಹಕಾರವನ್ನು ಅವಲಂಬಿಸಿರುತ್ತದೆ. ಅಧ್ಯಕ್ಷರು ಮತ್ತು ಸದಸ್ಯರ ನೇಮಕಕ್ಕೆ ನಿರ್ದಿಷ್ಟ ಮಾನದಂಡವಿದ್ದಲ್ಲಿ ಅಕಾಡಮಿಗಳ ಕಾರ್ಯದಲ್ಲಿ ವಿವೇಚನೆ-ದಕ್ಷತೆಗಳನ್ನು ನಿರೀಕ್ಷಿಸಲು ಸಾಧ್ಯ. ಈಗಿರುವಂತೆ ಸಾಹಿತ್ಯ/ಕಲೆಗಳಲ್ಲಿ ಮಾಡಿರುವ ಸಾಧನೆಯಷ್ಟೆ ಒಂದು ಸ್ಥೂಲ ಮಾನದಂಡವಾಗಿದೆ. ಇದಕ್ಕೂ ಮಿಗಿಲಾಗಿರುವುದು ರಾಜಕೀಯ ಪ್ರಭಾವ ಮತ್ತು ಪ್ರಾತಿನಿಧ್ಯ. ಪ್ರಾದೇಶಿಕ ಮತ್ತು ಸ್ತ್ರೀಯರು, ಹಿಂದುಳಿದ ವರ್ಗದವರು ಮೊದಲಾದವರಿಗೆ ಪ್ರಾತಿನಿಧ್ಯವನ್ನು ಯಾರೂ ಆಕ್ಷೇಪಿಸಲಾಗದು.

ಈ ಪ್ರಾತಿನಿಧ್ಯವೂ ಅರ್ಹರಿಗೆ, ಯೋಗ್ಯರಿಗೆ, ಸಮರ್ಥರಿಗೆ ದೊರೆತಾಗ ಅಕಾಡಮಿಗಳ ಕಾರ್ಯದಲ್ಲಿ ಹೆಚ್ಚಿನ ವಿವೇಚನೆ, ವಿಚಕ್ಷಣೆ ಮತ್ತು ದಕ್ಷತೆಗಳನ್ನು, ಆದ್ಯತೆಗಳನ್ನು ನಿರೀಕ್ಷಿಸಬಹುದು ಎಂದೇ ಬರಗೂರು ರಾಮಚಂದ್ರಪ್ಪನವರ ಸಮಿತಿ ಅಕಾಡಮಿಗಳ ಅಧ್ಯಕ್ಷರು ಮತ್ತು ಸದಸ್ಯರ ನೇಮಕಕ್ಕೆ ಹೆಸರುಗಳನ್ನು ಸೂಚಿಸಲು ಆಯ್ಕೆ ಸಮಿತಿಯೊಂದನ್ನು ರಚಿಸಬೇಕೆಂದು ಶಿಫಾರಸು ಮಾಡಿರುವುದು ನ್ಯಾಯೋಚಿತವಾಗಿದೆ. ಸರಕಾರ ಈ ಶಿಫಾರಸನ್ನು ತಿರಸ್ಕರಿಸಿರುವುದು ಸರಿಯಾದ ಕ್ರಮವಲ್ಲ. ಈ ಶಿಫಾರಸನ್ನು ಒಪ್ಪಿಕೊಂಡಿದ್ದಲ್ಲಿ, ಈಗಿರುವಂತೆ, ಅಕಾಡಮಿಗಳ ನೇಮಕಗಳೆಲ್ಲ ರಾಜಕೀಯ ನೇಮಕಗಳೆಂಬ ಆಪಾದನೆಗಳಿಗೆ ಅವಕಾಶವಿರುವುದಿಲ್ಲ. ಸರಕಾರಕ್ಕೂ ನೇಮಕಗೊಂಡವರಿಗೂ ಇಂಥದೊಂದು ಮುಜುಗರ ತಪ್ಪುತ್ತಿತ್ತು. ಅಕಾಡಮಿಗಳ ಅಧ್ಯಕ್ಷತೆ ಮತ್ತು ಸದಸ್ಯತ್ವಕ್ಕಾಗಿ ರಾಜಕೀಯ ಪ್ರಭಾವವನ್ನು ಬಳಸಲಾಗುತ್ತಿದೆ ಎಂಬುದು ಸುಳ್ಳಲ್ಲ.

ರಾಜಕೀಯ ಪ್ರಭಾವಕ್ಕನುಗುಣವಾಗಿಯೇ ಅಧ್ಯಕ್ಷರ ಸ್ಥಾನಮಾನಗಳೂ ನಿರ್ಧರಿತವಾಗುತ್ತವೆ. ರಾಜಕೀಯ ಪ್ರಭಾವ ಹೆಚ್ಚಗಿರುವವರಿಗೆ ರಾಜ್ಯಮಟ್ಟದ ಸಚಿವರ ಸ್ಥಾನಮಾನಗಳು, ಗೂಟದ ಕಾರುಗಳು ಮತ್ತಿತರ ಸೌಲಭ್ಯಗಳು ದೊರೆಯುತ್ತವೆ. ಹೆಚ್ಚಿನ ಪ್ರಭಾವ ಇಲ್ಲದವರಿಗೆ ಸೌಲಭ್ಯಗಳ ನೀಡಿಕೆಯಲ್ಲಿ ಬೇರೆಯದೇ ಮಾನದಂಡ. ಸಮಿತಿ ಶಿಫಾರಸಿನಂತೆ ತಜ್ಞರನ್ನೊಳಗೊಂಡ ಆಯ್ಕೆ ಸಮಿತಿಗಳೇ ಅಧ್ಯಕ್ಷರ ನೇಮಕ ಇತ್ಯಾದಿಗಳೆಲ್ಲವನ್ನೂ ಸರಕಾರಕ್ಕೆ ಶಿಫಾರಸು ಮಾಡುವಂಥ ವ್ಯವಸ್ಥೆ ಇದ್ದಲ್ಲಿ ಇವೆಲ್ಲವೂ ಪಾರದರ್ಶಕವೂ ಪ್ರಭಾವಮುಕ್ತವೂ ನ್ಯಾಯಯುತವೂ ಆಗುವ ಸಾಧ್ಯತೆ ಇದೆ. ಆದರೆ ಸರಕಾರಕ್ಕೆ ಇದು ಬೇಕಿಲ್ಲ. ಪ್ರೌಢಶಾಲೆಗಳಲ್ಲಿ ಸಾಂಸ್ಕೃತಿಕ ಶಿಕ್ಷಕರ ನೇಮಕ, ಬುಡಕಟ್ಟು ವಿಶ್ವವಿದ್ಯಾನಿಲಯ ಸ್ಥಾಪನೆ, ಸೂಫಿ ಮತ್ತು ತತ್ವಪದಗಳ ಅಧ್ಯಯನ ಕೇಂದ್ರ ಸ್ಥಾಪನೆ-ತುಳು ಭಾಷೆಗೆ ಸಾಂವಿಧಾನಕ ಮಾನ್ಯತೆ -ಸರಕಾರ ಅಂಗೀಕರಿಸಿರುವ ಸಾಂಸ್ಕೃತಿಕ ನೀತಿಯ ಇತರ ಮುಖ್ಯಾಂಶಗಳು.

ಸೂಫಿ ಮತ್ತು ತತ್ವಪದಗಳ ಅಧ್ಯಯನದಂಥ ಕೆಲವು ಹಂಪಿ ಕನ್ನಡ ವಿಶ್ವವಿದ್ಯಾನಿಲಯ ಮೊದಲಾದೆಡೆಗಳಲ್ಲಿ ನಡೆಯುತ್ತಿವೆ. ಸರಕಾರ ಇವುಗಳನ್ನು ಅನುಷ್ಠಾನಕ್ಕೆ ತರುವಾಗ ಇದನ್ನು ಗಮನಿಸಿ ಪುನರಾವರ್ತನೆಯಾಗದಂತೆ ನೋಡಿಕೊಳ್ಳಬೇಕಾಗುತ್ತದೆ. ಇಂತಹ ಅಧ್ಯಯನಗಳಲ್ಲಿ ವಿಶ್ವವಿದ್ಯಾನಿಲಯಗಳು, ಸಾಹಿತ್ಯ ಅಕಾಡಮಿ ಮತ್ತು ಸಾಹಿತ್ಯ ಪರಿಷತ್ತುಗಳ ನಡುವೆ ಸಮನ್ವಯ ಅಗತ್ಯ. ಪ್ರೌಢಶಾಲೆಗಳಲ್ಲಿ ಸಾಂಸ್ಕೃತಿಕ ಶಿಕ್ಷಕರ ನೇಮಕ ಸ್ವಾಗತಾರ್ಹ. ಆದರೆ ಧರ್ಮ ಮತ್ತು ಸಂಸ್ಕೃತಿಗಳ ನಡುವಣ ಸೂಕ್ಷ್ಮ ಭೇದ-ವ್ಯತ್ಯಾಸಗಳ ಗೆರೆಯನ್ನು ಅಳಿಸಿಹಾಕುವ ಪ್ರವೃತ್ತಿಯೇ ಹೆಚ್ಚಾಗಿರುವ ಇಂದಿನ ಪರಿಸ್ಥಿತಿಯಲ್ಲಿ ಸರಕಾರ ಈ ನಿಟ್ಟಿನಲ್ಲಿ ಎಚ್ಚರಿಕೆಯಿಂದಲೇ ಹೆಜ್ಜೆ ಇಡಬೇಕಾಗುತ್ತದೆ. ಇದನ್ನು ಅನುಷ್ಠಾನಕ್ಕೆ ತರುವ ಮುಂಚೆ ಸಂಸ್ಕೃತಿ ಬೋಧನೆಯ ಪರಿಕಲ್ಪನೆಯನ್ನು ಸ್ಪಷ್ಟಪಡಿಸಿಕೊಳ್ಳಬೇಕು.

ಸಂಸ್ಕೃತಿ ಬೋಧನೆಯಲ್ಲಿ ಇರಬೇಕಾದ ಪಠ್ಯ ವಿಷಯಗಳು ಯಾವುದು, ಪಠ್ಯಕ್ರಮಗಳೇನು, ಸಂಸ್ಕೃತಿ ಶಿಕ್ಷಕರಿಗೆ ಇರಬೇಕಾದ ಅರ್ಹತೆಗಳೇನು ಇತ್ಯಾದಿ ವಿಷಯಗಳ ಬಗ್ಗೆ ಶೈಕ್ಷಣಿಕ ವಲಯಗಳಲ್ಲಿ ಮುಕ್ತ ಚರ್ಚೆ ಅಪೇಕ್ಷಣೀಯ.ಇಲ್ಲವಾದಲ್ಲಿ ಪಟ್ಟಭದ್ರಹಿತಾಸಕ್ತಿಗಳಿಂದ ಇದರ ದುರುಪಯೋಗವಾಗುವ ಅಪಾಯವೇ ಹೆಚ್ಚು. ಇಂಥ ಬೋಧನೆ ವಿದ್ಯಾರ್ಥಿಗಳ ಸಂವೇದನಾಶೀಲತೆ- ಚಿಂತನಶಕ್ತಿಗಳನ್ನು ಉದ್ದೀಪನಗೊಳಿಸುವಂತಿರಬೇಕು. ಈಗ ಕೆಲವು ಖಾಸಗಿ ಶಾಲೆಗಳಲ್ಲಿ ನಡೆಯುತ್ತಿರುವಂತೆ, ಎಳೆಯ ಮನಸ್ಸುಗಳಲ್ಲಿ ಅಂಧಾಭಿಮಾನ, ಧರ್ಮಾಂಧತೆ, ಮೂಢನಂಬಿಕೆ ಇತ್ಯಾದಿ ಸವಕಲು ಮೌಲ್ಯಗಳನ್ನು ಬಿತ್ತುವ ರೀತಿಯ ಶಿಕ್ಷಣವಾಗಬಾರದು. ದಕ್ಷಿಣ ಕನ್ನಡದ ಪ್ರಾಂತ ಭಾಷೆಯಾದ ತುಳುವಿಗೆ ಸಾಂವಿಧಾನಕ ಮಾನ್ಯತೆ ನೀಡುವಂತೆ ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡುವ ನಿರ್ಧಾರ ಸ್ವಾಗತಾರ್ಹವಾದುದು.

ಕನ್ನಡ ಶಾಸ್ತ್ರೀಯ ಭಾಷೆ ಅಧ್ಯಯನಕ್ಕೆ ಉತ್ತೇಜನವೂ ಸಾಂಸ್ಕೃತಿಕ ನೀತಿಯಲ್ಲಿ ಮಹತ್ವ ಪಡೆದಿದೆ. ಕೇಂದ್ರ ಸರಕಾರ ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ನೀಡಿ ನಾಲ್ಕೈದು ವರ್ಷಗಳೇ ಕಳೆದಿವೆ. ಇದರನ್ವಯ ಬರುವ ವಿಶೇಷ ಅನುದಾನವನ್ನು ಕನ್ನಡದ ಅಭಿವೃದ್ಧಿಗೆ ಬಳಸಿಕೊಳ್ಳುವ ಬಗ್ಗೆ ಇನ್ನೂ ಗೊಂದಲಗಳಿವೆ. ಈ ಅನುದಾನವನ್ನು ಎಲ್ಲೆಲ್ಲಿ ಯಾವ ಯಾವ ಕಾರ್ಯಗಳಿಗೆ ಬಳಸಿಕೊಳ್ಳಬೇಕೆಂಬುದರ ಬಗ್ಗೆ ಸ್ಪಷ್ಟ ನೀತಿ ನಿಲುವುಗಳಿದ್ದಂತಿಲ್ಲ. ಕನ್ನಡ ಭಾಷೆ ಶಾಸ್ತ್ರೀಯ ಅಧ್ಯಯನ ಕೇಂದ್ರ ಮೈಸೂರು, ಬೆಂಗಳೂರು ಅಥವಾ ಮತ್ತೆಲ್ಲಿರಬೇಕೆಂಬುದರ ಬಗ್ಗೆಯೂ ವಿವಾದವಿದೆ. ಇವೆಲ್ಲದರ ಬಗ್ಗೆಯೂ ವ್ಯಾಪಕ ಚರ್ಚೆ ಸಮಾಲೋಚನೆಗಳ ನಂತರ ಸರಕಾರ ಶಾಸ್ತ್ರೀಯ ಭಾಷೆಗೆ ಕೇಂದ್ರ ಸರಕಾರ ಕೊಡುವ ಅನುದಾನದ ಬಳಕೆ ಕುರಿತು ಸ್ಪಷ್ಟ ನೀತಿ ರೂಪಿಸಬೇಕಾದ ಅಗತ್ಯವಿದೆ.

ಕಲಾಗ್ರಾಮ, ಕಲಾಕೃತಿಗಳ ಮಾರಾಟ ಕೇಂದ್ರ, ಜಿಲ್ಲಾ ರಂಗಮಂದಿರಗಳ ನಿರ್ವಹಣೆ ಇವೆಲ್ಲ ಅಗತ್ಯ ಆಗಬೇಕಾದ ಕಾರ್ಯಗಳು. ಜಿಲ್ಲಾ ರಂಗಮಂದಿರಗಳು ಸಾಂಸ್ಕೃತಿಕ ಕೇಂದ್ರಗಳಾಗಿ ಕಾರ್ಯನಿರ್ವಹಿಸುವುದರಿಂದ ಜನರಲ್ಲಿ ಭಾಷಾಭಿಮಾನ, ಕಲೆಸಾಹಿತ್ಯಗಳಲ್ಲಿ ಅಭಿರುಚಿ ಮೂಡಿಸುವುದು ಇತ್ಯಾದಿ ಕನ್ನಡ ಸಂಸ್ಕೃತಿಯ ಪೋಷಣೆ, ಪ್ರೋತ್ಸಾಹಕ್ಕೆ ಪೂರಕವಾದ ಕಾರ್ಯಗಳಿಗೆ ಅನುಕೂಲವಾಗುತ್ತದೆ. ಇವೆಲ್ಲ ಬಹುಮಟ್ಟಿಗೆ ಆಡಳಿತಾತ್ಮಕ ಕೆಲಸಗಳು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವಿಕೇಂದ್ರೀಕರಣ ಹಾಗೂ ನಾಲ್ಕು ಕಡೆಗಳಲ್ಲಿ ಪ್ರಾದೇಶಿಕ ಕಚೇರಿಗಳ ಸ್ಥಾಪನೆಯಿಂದ ಈ ಕೆಲಸಕಾರ್ಯಗಳು ಸುಗಮವಾಗಿ ನಡೆಯಲು ಸಾಧ್ಯವಾದೀತು. ಸಾಂಸ್ಕೃತಿಕ ವಿಷಯಕ್ಕೆ ಬಂದಾಗ ಪುಸ್ತಕ ಸಂಸ್ಕೃತಿಯನ್ನು ಮರೆಯಲಾಗದು. ಪುಸ್ತಕ ಸಂಸ್ಕೃತಿಯ ಬಗ್ಗೆ ಬರಗೂರು ಸಮಿತಿಯ ಶಿಫಾರಸುಗಳು ಏನೋ ತಿಳಿಯದು.

ಸರಕಾರಿ ಗ್ರಂಥಾಲಯಗಳಿಗೆ ಪುಸ್ತಕಗಳ ಸಗಟು ಖರೀದಿ ಬಗ್ಗೆ ದೂರುಗಳು ನಿರಂತರವಾಗಿ ಕೇಳಿ ಬರುತ್ತಿವೆ. ಅದರೆ ಸರಕಾರದ ಕಿವಿ ಈ ದೂರುಗಳಿಗೆ ಕಲ್ಲಾಗಿರುವಂತಿದೆ. ಸರಕಾರ ನಗರ ಮತ್ತು ಪಟ್ಟಣಗಳಲ್ಲಿ ಸಾರ್ವಜನಿಕರಿಂದ ಮನೆಕಂದಾಯದೊಂದಿಗೆ ಗ್ರಂಥಾಲಯ ಶುಲ್ಕವನ್ನು ತಪ್ಪದೆ ವಸೂಲಿಮಾಡುತ್ತಿದೆ. ಆದರೆ ಕಾರ್ಪೊರೇಷನ್‌ಗಳು ಮತ್ತು ಪುರಸಭೆಗಳು ಹೀಗೆ ವಸೂಲಿ ಮಾಡಿದ ಶುಲ್ಕವನ್ನು ಗ್ರಂಥಾಲಯ ಇಲಾಖೆಗೆ ನೀಡುತ್ತಿಲ್ಲ. ಕೋಟ್ಯಂತರ ರೂಪಾಯಿ ಬಾಕಿ ಉಳಿಸಿಕೊಂಡಿವೆ. ಸರಕಾರ ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಸಾರ್ವಜನಿಕರಿಂದ ವಸೂಲಿಮಾಡಿದ ಶುಲ್ಕವನ್ನು ಗ್ರಂಥಾಲಯ ಇಲಾಖೆಗೆ ಸಕಾಲದಲ್ಲಿ ಪಾವತಿ ಮಾಡಿದಲ್ಲಿ ಪುಸ್ತಕ ಖರೀದಿಗಿರುವ ಹಣದ ಮುಗ್ಗಟ್ಟು ಸ್ವಲ್ಪಮಟ್ಟಿಗಾದರೂ ನೀಗಬಹುದು. ಇಂದಿರಾ ಕ್ಯಾಂಟೀನುಗಳನ್ನು ಸ್ಥಾಪಿಸಿ ಬಡಜನರ ಹೊಟ್ಟೆಯ ಹಸಿವನ್ನು ಇಂಗಿಸುವ ಸ್ತುತ್ಯಾರ್ಹ ಕ್ರಮ ಕೈಗೊಂಡಿರುವ ಸಿದ್ದರಾಮಯ್ಯನವರ ಸರಕಾರ, ಗ್ರಂಥಾಲಯಗಳನ್ನೇ ಪುಸ್ತಕ ಸಂಪನ್ಮೂಲವಾಗಿ ನೆಚ್ಚಿಕೊಂಡಿರುವ ಬಡ ಓದುಗರ ಜ್ಞಾನದ ಹಸಿವನ್ನು ಇಂಗಿಸುವುದೂ ತನ್ನ ಕರ್ತವ್ಯವೆಂಬುದನ್ನು ಮರೆಯಬಾರದು 

Writer - ಜಿ.ಎನ್.ರಂಗನಾಥ್ ರಾವ್

contributor

Editor - ಜಿ.ಎನ್.ರಂಗನಾಥ್ ರಾವ್

contributor

Similar News