ಸಾಗರ: ಸನ್ಮಾನ ಕಾರ್ಯಕ್ರಮ
ಸಾಗರ, ಆ.13: ಜನಪದ ಕ್ಷೇತ್ರದಲ್ಲಿ ಅವಿರತವಾಗಿ ತೊಡಗಿಸಿಕೊಂಡಿದ್ದ ಬಿ.ಟಾಕಪ್ಪ ಅವರನ್ನು ಜಾನಪದ ಅಕಾಡೆಮಿ ಅಧ್ಯಕ್ಷರನ್ನಾಗಿ ನೇಮಿಸುವ ಮೂಲಕ ಸರ್ಕಾರ ಸಾರ್ಥಕ ಕೆಲಸ ಮಾಡಿದೆ ಎಂದು ಸಾಹಿತಿ ಡಾ. ನಾ.ಡಿಸೋಜ ಹೇಳಿದರು.
ಇಲ್ಲಿನ ಸರ್ಕಾರಿ ನೌಕರರ ಭವನದಲ್ಲಿ ಶನಿವಾರ ಕರ್ನಾಟಕ ಜಾನಪದ ಪರಿಷತ್ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಆಶ್ರಯದಲ್ಲಿ ಜನಪದ ಅಕಾಡೆಮಿ ಅಧ್ಯಕ್ಷ ಬಿ. ಟಾಕಪ್ಪ ಹಾಗೂ ತನಿಖಾ ವರದಿಗಾಗಿ ಜಿಲ್ಲಾ ಪ್ರಶಸ್ತಿ ಪಡೆದ ಪತ್ರಕರ್ತ ಜಿ. ನಾಗೇಶ್ ಅವರನ್ನು ಸನ್ಮಾನಿಸಿ ಅವರು ಮಾತನಾಡುತ್ತಿದ್ದರು.
ಅಕಾಡೆಮಿ ಅಧ್ಯಕ್ಷ ಸ್ಥಾನಗಳು ನಗರಕೇಂದ್ರಿತ ವ್ಯಕ್ತಿಗಳಿಗೆ ಸಿಗುತ್ತಿರುವ ಹೊತ್ತಿನಲ್ಲಿ ನಿಜವಾಗಿಯೂ ಜನಪದ ಕ್ಷೇತ್ರದಲ್ಲಿ ನಾಲ್ಕು ದಶಕಗಳಿಂದ ಕೆಲಸ ಮಾಡಿರುವ ಟಾಕಪ್ಪ ಅವರಿಗೆ ಸರ್ಕಾರ ನೀಡಿದೆ. ದೇಶವಿದೇಶಗಳಲ್ಲಿ ಡೊಳ್ಳು ಕುಣಿತವನ್ನು ಪ್ರಖ್ಯಾತಗೊಳಿಸಿ, ಸಾವಿರಾರು ಜನರಿಗೆ ಅದನ್ನು ಕಲಿಸುವಲ್ಲಿ ಅರ್ಹನಿಶಿ ದುಡಿದ ಬಿ.ಟಾಕಪ್ಪ ಅವರ ಅವಧಿಯಲ್ಲಿ ಅಕಾಡೆಮಿ ಮೂಲಕ ಇನ್ನಷ್ಟು ಜನಪದ ಕ್ಷೇತ್ರ ವಿಸ್ತಾರವಾಗಲಿ ಎಂದರು. ಸಾಗರದ ಪತ್ರಿಕಾ ರಂಗದಲ್ಲಿ ಅನೇಕ ಜನರು ವರದಿಗಾರಿಕೆ ಜೊತೆಯಲ್ಲಿ ವಿವಿಧ ಸಾಮಾಜಿಕ, ಸಾಂಸ್ಕೃತಿಕ, ಜನಪರ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಪತ್ರಕರ್ತ ಜಿ. ನಾಗೇಶ್ ಸಹ ಪತ್ರಿಕಾ ಬರವಣಿಗೆ ಜೊತೆಗೆ ಅಂತಹ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ಅವರಿಗೆ ಜಿಲ್ಲಾ ಪ್ರಶಸ್ತಿ ಬಂದಿರುವುದರಿಂದ ಅವರು ಇನ್ನು ಹೆಚ್ಚು ಕ್ರಿಯಾಶೀಲವಾಗಿ ಪತ್ರಿಕಾ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಜನಪದ ಅಕಾಡೆಮಿ ಅಧ್ಯಕ್ಷ ಬಿ. ಟಾಕಪ್ಪ, ಕರ್ನಾಟಕದ ಜನಪದ ಕಲೆಗಳಲ್ಲಿ ಚರ್ಮವಾದ್ಯಕ್ಕೆ ಅದರದ್ದೆ ಆದ ಇತಿಹಾಸವಿದೆ. ಚರ್ಮವಾದ್ಯಗಳಲ್ಲಿ ಒಂದಾಗಿರುವ ಡೊಳ್ಳು ಕಲೆ ಅವಸಾನದ ಅಂಚಿಗೆ ತಲುಪಿದ್ದಾಗ ಅದನ್ನು ಸರ್ಕಾರದ ವತಿಯಿಂದ ರಾಷ್ಟ್ರ ಹಾಗೂ ಅಂತರಾಷ್ಟ್ರ ಮಟ್ಟಕ್ಕೆ ತೆಗೆದುಕೊಂಡು ಹೋಗುವ ಅವಕಾಶ ನನಗೆ ಸಿಕ್ಕಿತ್ತು. ಒಂದು ಕಲೆಯನ್ನು ನಿರಂತವಾಗಿ ಕಲಿತು ಶ್ರದ್ಧೆಯಿಂದ ಅದಕ್ಕೊಂದು ಹೊಸ ಆಯಾಮ ನೀಡಿದರೆ ಪುರಸ್ಕಾರಗಳು, ಸ್ಥಾನಮಾನಗಳು ತಾನಾಗಿಯೆ ಒಲಿದು ಬರುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಪತ್ರಕರ್ತರ ಸಂಘದ ಪ್ರಶಸ್ತಿಗೆ ಪುರಸ್ಕೃತರಾದ ಪತ್ರಕರ್ತ ಜಿ. ನಾಗೇಶ್ ದಂಪತಿಯನ್ನು ಅಭಿನಂದಿಸಲಾಯಿತು.
ನಿವೃತ್ತ ನೌಕರರ ಸಂಘದ ತಾಲ್ಲೂಕು ಶಾಖೆ ಗೌರವಾಧ್ಯಕ್ಷ ಎಸ್.ಬಸವರಾಜ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಪರಮೇಶ್ವರ್, ಶಿಕ್ಷಕರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಡಿ.ಗಣಪತಪ್ಪ, ಜಿಲ್ಲಾ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಕ ವೇದಿಕೆ ಸ್ಥಳೀಯ ಶಾಖೆ ಅಧ್ಯಕ್ಷ ಉಮೇಶ್ ಹಿರೇನೆಲ್ಲೂರು, ವಿ.ಶಂಕರ್ ಇನ್ನಿತರರು ಹಾಜರಿದ್ದರು.