ದರೋಡೆ ಪ್ರಕರಣ: ಇಬ್ಬರ ಬಂಧನ
ಸಾಗರ, ಆ.13: ಕಳೆದ ಫೆಬ್ರವರಿ ತಿಂಗಳಿನಲ್ಲಿ ಶಿವಮೊಗ್ಗ ತಾಲ್ಲೂಕಿನ ಹಾಡೋನಹಳ್ಳಿಯಲ್ಲಿ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಗರ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಸಾಗರ ನಗರದ ಅಶೋಕ ರಸ್ತೆಯ ಚಿನ್ನಬೆಳ್ಳಿ ವರ್ತಕ ಕಿರಣ್ ಶೇಟ್ ಎಂಬುವವರಿಗೆ ಶಿವಮೊಗ್ಗದಲ್ಲಿ ಪ್ರಭು ಎಂಬುವವರ ಪರಿಚಯವಾಗಿದೆ. ಈ ಸಂದರ್ಭದಲ್ಲಿ ಪ್ರಭು ಅವರು ತಮ್ಮ ಬಳಿ ಹಳೆ ಕಾಲದ ಬಂಗಾರದ ನಾಣ್ಯ ಇದ್ದು, ಕಡಿಮೆ ದರದಲ್ಲಿ ಮಾರಾಟ ಮಾಡುವುದಾಗಿ ತಿಳಿಸಿ, ಒಂದು ಅಸಲಿ ನಾಣ್ಯವನ್ನು ತೋರಿಸಿದ್ದಾರೆ. ಇದನ್ನು ನಂಬಿದ ಕಿರಣ್ ಶೇಟ್ ಬಂಗಾರ ಖರೀದಿಗೆ ಅಸಕ್ತಿ ತೋರಿಸಿದ್ದಾರೆ ಎನ್ನಲಾಗಿದೆ. ಪ್ರಭು ಮತ್ತು ಮೀನಾಕ್ಷಮ್ಮ ಎಂಬುವವರು ಫೆಬ್ರವರಿ ತಿಂಗಳಿನಲ್ಲಿ ಕಿರಣ್ ಶೇಟ್ ಅವರನ್ನು ಹಾಡೋನಹಳ್ಳಿಗೆ 2 ಲಕ್ಷ ರೂಪಾಯಿ ನಗದು ತೆಗೆದುಕೊಂಡು ಬರುವಂತೆ ಮೊಬೈಲ್ ಫೋನ್ ಮೂಲಕ ತಿಳಿಸಿದ್ದಾರೆ. ಇದನ್ನು ನಂಬಿದ ಕಿರಣ್ ಶೇಟ್ ತನ್ನ ಸ್ನೇಹಿತನ ಜೊತೆ ಹಾಡೋನಹಳ್ಳಿಗೆ ಕಾರಿನಲ್ಲಿ ಎರಡು ಲಕ್ಷ ರೂ. ನಗದು ತೆಗೆದುಕೊಂಡು ಹೋಗಿದ್ದಾನೆ. ಹಾಡೋನಹಳ್ಳಿ ಸಮೀಪದ ಒಂದು ತೋಟದ ವಿಳಾಸ ನೀಡಿ ಅಲ್ಲಿಗೆ ಬನ್ನಿ ಎಂದು ತಿಳಿಸಿದ್ದರಿಂದ ಕಿರಣ್ ಶೇಟ್ ತೋಟದ ಒಳಗೆ ಹೋಗುವಾಗ 80ಸಾವಿರ ರೂ. ತನ್ನ ಸ್ನೇಹಿತನ ಹತ್ತಿರ ಕೊಟ್ಟು, ಕಾಯುವಂತೆ ತಿಳಿಸಿ ತೋಟದೊಳಗೆ ಹೋಗಿದ್ದಾನೆ ಎನ್ನಲಾಗಿದೆ.
ಹಣದೊಂದಿಗೆ ಬಂಗಾರ ಖರೀದಿಗಾಗಿ ತೋಟದೊಳಗೆ ಹೋಗಿದ್ದ ಕಿರಣ್ ಶೇಟ್ ಮೇಲೆ ಪ್ರಭು ಮತ್ತು ಮೀನಾಕ್ಷಮ್ಮ ಸೇರಿದಂತೆ ಐದಾರು ಜನರು ಹಲ್ಲೆ ಮಾಡಿ ಅವರ ಬಳಿ ಇದ್ದ 1.20 ಲಕ್ಷ ರೂ. ನಗದು ಹಾಗೂ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ. ಕಿರಣ್ ಶೇಟ್ ಸಾಗರ ನಗರ ಠಾಣೆಗೆ ಬಂದು ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ನಗರ ಠಾಣೆ ಸರ್ಕಲ್ ಇನ್ಸ್‌ಪೆಕ್ಟರ್ ಬಿ.ಎಲ್.ಜನಾರ್ದನ್ ನೇತೃತ್ವದ ತಂಡವು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಅಭಿನವ ಖರೆ ಹಾಗೂ ಅಪರ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮುತ್ತುರಾಜ್, ಡಿವೈಎಸ್‌ಪಿ ಮಂಜುನಾಥ ಕವರಿ ಅವರ ಮಾರ್ಗದರ್ಶನದಲ್ಲಿ ಆನವಟ್ಟಿಯ ಕೊರಚರ ಕೇರಿಯಲ್ಲಿ ಅಡಗಿದ್ದ ಪ್ರಭು ಹಾಗೂ ಹಾಡೋನಹಳ್ಳಿಯಲ್ಲಿ ಅಡಗಿದ್ದ ಮೀನಾಕ್ಷಮ್ಮ ಅವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಉಳಿದ ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.
ಬಂಧಿತರಿಂದ 1.20 ಲಕ್ಷ ರೂ. ನಗದು ಹಾಗೂ 18 ಗ್ರಾಂ ತೂಕದ ಎರಡು ಚಿನ್ನದ ಸರವನ್ನು ವಶಕ್ಕೆ ಪಡೆಯಲಾಗಿದೆ. ಭಾನುವಾರ ಆರೋಪಿಗಳನ್ನು ನ್ಯಾಯಾಧೀಶರ ಎದುರು ಹಾಜರುಪಡಿಸಲಾಗಿದೆ. ಕಾರ್ಯಾಚರಣೆಯಲ್ಲಿ ಅಪರಾಧ ವಿಭಾಗದ ಎಎಸ್‌ಐ ಮಂಜುನಾಥ್, ದಫೇದರ್‌ಗಳಾದ ಸವಿತಾ, ಮೂರ್ತಿ, ಸಿಬ್ಬಂದಿಗಳಾದ ಸಂತೋಷ್, ದಿವಾಕರ್, ಕಾಳ್ಯಾ ನಾಯ್ಕ, ಹಜರತ್ ಅಲಿ ಪಾಲ್ಗೊಂಡಿದ್ದರು.