ಶಾಶ್ವತ ನೀರಾವರಿ ಯೋಜನೆಗಳಿಗೆ ಮುಖ್ಯಮಂತ್ರಿಗಳು ಮನಸ್ಸು ಮಾಡಬೇಕು: ಹೆಚ್.ಎಸ್. ದೊರೆಸ್ವಾಮಿ

Update: 2017-08-13 11:00 GMT

ಕಡೂರು, ಆ. 13: ಶಾಶ್ವತ ನೀರಾವರಿ ಯೋಜನೆಗಳಿಗೆ ಮುಖ್ಯಮಂತ್ರಿಗಳು ಮನಸ್ಸು ಮಾಡಬೇಕು ಎಂದು ಸಾತಂತ್ರ್ಯ ಹೋರಾಟಗಾರ ಹೆಚ್.ಎಸ್. ದೊರೆಸ್ವಾಮಿ ಹೇಳಿದರು.

ಅವರು ಶನಿವಾರ ಕಡೂರು ಶಾಸಕ ವೈ.ಎಸ್.ವಿ. ದತ್ತ ಅವರು 1 ಸಾವಿರ ಕಿ.ಮೀ. ಪಾದಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಕೆಲವೇ ವರ್ಷಗಳಲ್ಲಿ ನೀರಿಗಾಗಿ ಯುದ್ದಗಳೇ ನಡೆಯಲಿವೆ. ಶಾಶ್ವತ ನೀರಾವರಿಯ ಬಗ್ಗೆ ರಚನ್ಮಾತ ಕ್ರಿಯೆಗಳು ನಡೆಯಬೇಕು. ಜಲ ಕ್ಷಾಮ ಪರಿಹಾರವಾಗಬೇಕು ಎಂದರು.

ಕಳೆದ 70 ವರ್ಷಗಳಿಂದ ಬಡವರ ಬಗ್ಗೆ ಚಿಂತನೆಗಳು ನಡೆದಿಲ್ಲ. ಕಟ್ಟ ಕಡೆಯ ವ್ಯಕ್ತಿಗಳನ್ನು ಕಡೆಗಣಿಸಲಾಗಿದೆ. ಸಾತಂತ್ರ್ಯ ಬಂದಾಗಿನಿಂದಲೂ ಕೊನೆಯ ಭಾಗದಲ್ಲಿರುವ ವ್ಯಕ್ತಿಗೆ ನ್ಯಾಯ ಸಿಕ್ಕಿಲ್ಲ. ಇತರರಂತೆ ಬದುಕುವ ಹಕ್ಕು ಬಡವರಿಗಿಲ್ಲವೇ ಎಂದು ಪ್ರಶ್ನಿಸಿದ ಅವರು, ಬಡತನ ಮುಕ್ತ ದೇಶವಾಗಬೇಕು ಎಂದು ಅಭಿಪ್ರಾಯಪಟ್ಟರು.

ರಾಜ್ಯದ ಎಲ್ಲ ಕಡೆ ಕೆರೆಗಳ ಒತ್ತುವರಿ ನಡೆದಿದೆ. ಕೆರೆಗಳ ಮಧ್ಯೆ ಭಾಗದಲ್ಲಿ ರಸ್ತೆ, ಮನೆಗಳ ನಿರ್ಮಾಣವಾಗಿದೆ. ಇದರಿಂದ ಅಧಿಕಾರಿಗಳಿಗೆ ಲಾಭವೋ? ರಾಜಕಾರಣಿಗಳಿಗೆ ಲಾಭವೋ? ಎಂಬಂತೆ ಆಗಿದೆ. ಯಾವುದೇ ಸರ್ಕಾರಗಳು ಕೆರೆ ಒತ್ತುವರಿಯನ್ನು ತೆರವುಗೊಳಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿಲ್ಲ ಎಂದರು.

ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ ಹೆಗಡೆ ಮಾತನಾಡಿ, ನಕಲಿ ಪಡಿತರ ಚೀಟಿಯಿಂದ ಪ್ರತಿ ವರ್ಷ ರಾಜ್ಯ ಸರ್ಕಾರಕ್ಕೆ ರೂ. 6 ಸಾವಿರ ಕೋಟಿ ನಷ್ಟವಾಗುತ್ತಿದೆ. 1 ಕೋಟಿ 20 ಲಕ್ಷ ಇರಬೇಕಾದ ಪಡಿತರದಾರರು ಈಗ 40 ಲಕ್ಷ ಹೆಚ್ಚಳವಾಗಿದ್ದಾರೆ. ಇದರ ಬಗ್ಗೆ ಯಾವೊಬ್ಬ ಶಾಸಕರು ಸದನದಲ್ಲಿ ಚಕಾರ ಎತ್ತುತ್ತಿಲ್ಲ. ಇದರಿಂದ ರಾಜ್ಯಕ್ಕೆ ಬಹಳಷ್ಟು ನಷ್ಟವಾಗುತ್ತಿದೆ. ಇದಕ್ಕೆ ಅಧಿಕಾರಿಗಳು ಜವಾಬ್ದಾರರೋ? ಜನಪ್ರತಿನಿಧಿಗಳು ಜವಾಬ್ದಾರರೋ? ಎಂದು ತಿಳಿಯುತ್ತಿಲ್ಲ ಎಂದು ವಿಷಾಧಿಸಿದರು.

ಮತದಾರರು ಗೆದ್ದ ಜನಪ್ರತಿನಿಧಿಗಳ ಬಳಿ ತೆರಳಿದರೆ ನೀವು ಯಾರು ಎಂಬಂತೆ ವರ್ತಿಸುತ್ತಾರೆ. ಆಡಳಿತರೂಢ ಸರ್ಕಾರದಲ್ಲಿ ಸಚಿವರು ಬಡಜನರ ಪರವಾದ ಕೆಲಸ ಮಾಡುತ್ತಿಲ್ಲ. ಜನಪ್ರತಿನಿಧಿಗಳಿಗೆ ಜವಾಬ್ದಾರಿ ಇಲ್ಲ. ಬಹುತೇಕ ಜನಪ್ರತಿನಿಧಿಗಳು ಗೆದ್ದ ನಂತರ ಬೆಂಗಳೂರಿನಲ್ಲಿ ಠಿಕಾಣಿ ಹೂಡಿ ಕ್ಷೇತ್ರಗಳನ್ನು ಮರೆತಿದ್ದಾರೆ ಎಂದು ಆರೋಪಿಸಿದರು.

ಲೋಕಸಭೆ ಅಧಿವೇಶಕ್ಕೆ ದಿನವೊಂದಕ್ಕೆ ರೂ. 10 ಕೋಟಿ ಖರ್ಚ ತಗುಲುತ್ತದೆ. ಇದರ ಬಗ್ಗೆ ಯಾವೊಬ್ಬ ಸಂಸದರಿಗೂ ಜವಾಬ್ದಾರಿ ಇಲ್ಲ. ಸಂಸತ್ತಿಗೆ ಹೋಗದೇ ಇರುವ ಜನಪ್ರತಿನಿಧಿಗಳನ್ನು ಜನರು ಪ್ರಶ್ನಿಸಬೇಕು ಎಂದು ಮನವಿ ಮಾಡಿದರು.
  
ಸಂಸದ ಮತ್ತು ಶಾಸಕರಾಗಿ ಆಯ್ಕೆಯಾಗುವ ಜನಪ್ರತಿನಿಧಿಗಳಿಗೆ ವಿದ್ಯಾರ್ಹತೆ ನಿಗಧಿಯಾಗುವ ಕಾಯ್ದೆ ರೂಪಿತವಾಗಬೇಕು ಎಂದು ಹೇಳಿದರು.  ಈ ಸಂದರ್ಭ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ಶಾಸಕ ವೈ.ಎಸ್.ವಿ. ದತ್ತ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News