ಬಣಕಲ್, ಕೊಟ್ಟಿಗೆಹಾರದಲ್ಲಿ ಬೀದಿ ನಾಯಿಗಳ ಹಾವಳಿ ತಡೆಗೆ ಒತ್ತಾಯ

Update: 2017-08-13 11:04 GMT

ಬಣಕಲ್, ಆ.13; ಕೊಟ್ಟಿಗೆಹಾರ, ಬಣಕಲ್‌ನಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿ ಕಂಡು ಬರುತ್ತಿದೆ. ಬೀದಿ ನಾಯಿಗಳ ಹಾವಳಿ ಪಟ್ಟಣ ಪ್ರದೇಶದಲ್ಲಿ ಹೆಚ್ಚಾಗುತ್ತಿದ್ದು, ಕೆಲವು ನಾಯಿಗಳಿಗೆ ಹುಚ್ಚು ಹಿಡಿದು ಬಣಕಲ್‌ನ ಎರಡು ಶಾಲಾ ಮಕ್ಕಳಿಗೆ ಕಚ್ಚಿ ಜೀವಕ್ಕೆ ಕುತ್ತು ತರುವ ಅಪಾಯವಿದೆ ಎಂದು ಆರೋಪಿಸಿ ಬಣಕಲ್ ಗ್ರಾಮಸ್ಥರು ಗ್ರಾಪಂ ಅಧ್ಯಕ್ಷ ಬಿ.ವಿ.ಸುರೇಶ್‌ರಿಗೆ ಮನವಿ ಸಲ್ಲಿಸಿದ್ದಾರೆ.

ಬಣಕಲ್‌ನಲ್ಲಿ ಮೊನ್ನೆ ನಾಯಿಯೊಂದು ಬಣಕಲ್‌ನ 2 ಶಾಲಾ ಮಕ್ಕಳಿಗೆ ಕಚ್ಚಿದೆ. ದನಕರುಗಳಿಗೂ ಕಚ್ಚಿ ಸಾಗಿದೆ. ಗ್ರಾಮಸ್ಥರಲ್ಲಿ ಬೀದಿ ನಾಯಿಗಳ ಹಾವಳಿಯಿಂದ ಭೀತಿ ಎದುರಾಗಿದೆ. ಹುಚ್ಚು ನಾಯಿಯು ಉಳಿದ ಬೀದಿ ನಾಯಿಗಳಿಗೆ ಅಟ್ಟಾಯಿಸಿ ಕಚ್ಚಿ ಬೇರೆ ನಾಯಿಗಳಿಗೂ ಹುಚ್ಚು ಹಿಡಿಯುವ ಸಾಧ್ಯತೆ ಇದೆ. ಸಾರ್ವಜನಿಕರು ತಿರುಗಾಡಲು ಭಯದ ವಾತಾವರಣ ನಿರ್ಮಾಣವಾಗಿದೆ. ಬಣಕಲ್ ಗ್ರಾಪಂ ಅಧಿಕಾರಿಗಳು ಹೆಚ್ಚಿದ ಬೀದಿ ನಾಯಿಗಳ ನಿಯಂತ್ರಣದ ಬಗ್ಗೆ ಸೂಕ್ತ ಕ್ರಮಕ್ಕೆ ಮುಂದಾಗಬೇಕೆಂದು ಆರೀಫ್ ಒತ್ತಾಯಿಸಿದ್ದಾರೆ.

ಪ್ರವಾಸಿ ತಾಣದಲ್ಲೂ ಬೀದಿ ನಾಯಿಗಳ ಹಾವಳಿ ತಡೆಗಟ್ಟಲು ಒತ್ತಾಯ: ಕೊಟ್ಟಿಗೆಹಾರದ ಸುತ್ತಮುತ್ತ ಕೂಡ ಬೀದಿನಾಯಿಗಳು ತುಂಬಾ ಹೆಚ್ಚಾಗಿ ಪ್ರವಾಸಿ ತಾಣಗಳಲ್ಲಿ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದೆ. ಇತ್ತೀಚೆಗೆ ಹುಚ್ಚುನಾಯಿಯೊಂದು ಬೇರೆ ನಾಯಿಗಳಿಗೂ ಕಚ್ಚಿದ ಪರಿಣಾಮ ಹಲವು ನಾಯಿಗಳಿಗೆ ಹುಚ್ಚು ಹಿಡಿಯುವ ಸಾದ್ಯತೆ ಹೆಚ್ಚಾಗಿದೆ. ಚಾರ್ಮಾಡಿ ಘಾಟ್ ಭಾಗದಲ್ಲೂ ಹಲವು ನಾಯಿಗಳು ರಸ್ತೆಯಲ್ಲಿ ತಿರುಗುತ್ತಿದ್ದು, ವಾಹನ ಸವಾರರಿಗೂ ತೊಂದರೆಯಾಗುತ್ತಿದೆ. ದೂರದಿಂದ ನಾಯಿಗಳನ್ನು ಚಾರ್ಮಾಡಿ ಘಾಟ್ ಭಾಗಕ್ಕೆ ತಂದು ಬಿಡುತ್ತಾರೆ ಎಂಬ ಶಂಕೆಯಿದೆ.

ಈ ಬಗ್ಗೆ ತರುವೆ ಗ್ರಾಪಂ ಅಧಿಕಾರಿಗಳು ಹೆಚ್ಚುತ್ತಿರುವ ಬೀದಿ ನಾಯಿಗಳ ಹಾವಳಿಯ ನಿಯಂತ್ರಣದತ್ತ ಗಮನ ಹರಿಸಬೇಕು. ಸ್ಥಳೀಯ ಅಧಿಕಾರಿಗಳು ನಾಯಿಗಳನ್ನು ಹಿಡಿಸಿ ದೂರ ಬಿಡುವುದರಿಂದ ಬೇರೆಡೆಯೂ ನಾಯಿಗಳ ಸಂಖ್ಯೆ ಹೆಚ್ಚಾಗುವ ಭೀತಿ ಎದುರಾಗಿದೆ. ಪ್ರಾಣಿ ದಯಾ ಸಂಘದ ವತಿಯಿಂದ ನಾಯಿಗಳ ಹಾವಳಿ ತಡೆಗಟ್ಟುವಿಕೆಗೆ ಸೂಕ್ತ ಮಾರ್ಗಧರ್ಶನದ ಕೊರತೆಯಿದೆ. ಈ ಬಗ್ಗೆ ಪ್ರಾಣಿ ದಯಾ ಸಂಘವು ಸ್ಥಳೀಯ ಗ್ರಾಂ.ಪಂ.ಅಧಿಕಾರಿಗಳ ಜೊತೆ ಚರ್ಚಿಸಿ ಬೀದಿ ನಾಯಿಗಳು ಹೆಚ್ಚಾಗುತ್ತಿರುವುದರಿಂದ ನಿಯಂತ್ರಣಕ್ಕೆ ಮಾರ್ಗೋಪಾಯ ರೂಪಿಸಬೇಕಾಗಿ ಸಾರ್ವಜನಿಕರು ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News