ಶೌಚಾಲಯ ಬಳಸುವ ಪರಿಪಾಠ ಬೆಳೆಸಿಕೊಳ್ಳಿ: ಡಾ.ಎಂ.ಲೋಕೇಶ್

Update: 2017-08-13 11:12 GMT

ಶಿವಮೊಗ್ಗ,ಆ.13: ಪ್ರತಿಯೊಬ್ಬರೂ ತಮ್ಮ ಕುಟುಂಬದ ಅನುಕೂಲಕ್ಕಾಗಿ ಕಟ್ಟಿಸಿಕೊಂಡಿರುವ ಶೌಚಾಲಯಗಳನ್ನು ಬಳಸುವ ಮೂಲಕ ಸ್ವಚ್ಚ ಹಾಗೂ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಸಂಕಲ್ಪ ಮಾಡುವಂತೆ ಜಿಲ್ಲಾಧಿಕಾರಿ ಡಾ.ಎಂ.ಲೋಕೇಶ್ ಅವರು ಕರೆ ನೀಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ನಗರದ ಬಿ.ಆರ್.ಅಂಬೇಡ್ಕರ್ ಭವನದಲ್ಲಿ 71ನೇ ಸ್ವಾತಂತ್ರ್ಯ ದಿನೋತ್ಸವದ ಅಂಗವಾಗಿ ಏರ್ಪಡಿಸಲಾಗಿದ್ದ ಬಯಲು ಬಹಿರ್ದೆಸೆ ಮುಕ್ತ-ಸ್ವಾತಂತ್ರ್ಯ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಕೆಲವೇ ವರ್ಷಗಳಿಂದೀಚೆಗೆ ಪರಿಚಿತವಾದ ಮೊಬೈಲ್ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಪ್ರತಿಯೊಬ್ಬರ ಕೈಯಲ್ಲೂ ಇದೆ. ಅವರಲ್ಲಿ ಕೆಲವರು ಎರೆಡೆರೆಡು ಮೊಬೈಲ್‌ಗಳನ್ನು ಹೊಂದಿದ್ದಾರೆ. ಆದರೆ, ತಮ್ಮ ಆರೋಗ್ಯದ ಬಗ್ಗೆ ಕಾಳಜಿವಹಿಸಬೇಕಾದ ಬಹುತೇಕ ಜನ ತಮ್ಮ ಕುಟುಂಬದ ಹಿತಕ್ಕಾಗಿ ಶೌಚಾಲಯ ಕಟ್ಟಿಸಿಕೊಂಡು ಬಳಸುವುದನ್ನು ಮರೆತಿರುವುದು ಸೋಜಿಗದ ಸಂಗತಿ ಎಂದರು.

ತಮ್ಮ ವೈಯಕ್ತಿಕ ಹಾಗೂ ಸಮಾಜದ ಒಳಿತನ್ನು ಬಯಸುವ ಪ್ರತಿಯೊಬ್ಬರೂ ತಮ್ಮ ಮನೆಯ ಸುತ್ತಮುತ್ತಲ ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳುವುದರ ಕಡೆಗೆ ಗಮನಹರಿಸಬೇಕು. ಪರಿಸರ ಮಾಲಿನ್ಯದಿಂದ ಮುಕ್ತವಾಗಿರುವಂತೆ ನೋಡಿಕೊಳ್ಳಬೇಕಾದುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದ ಅವರು, ಪ್ರತಿಯೊಬ್ಬರ ಮನೆಗಳಲ್ಲಿ ಶೌಚಾಲಯ ನಿರ್ಮಾಣಗೊಂಡು ಬಳಸುವಂತಾಗಬೇಕು ಎಂದರು.

ಶೌಚಾಲಯ ನಿರ್ಮಿಸಿಕೊಂಡ ಬಹುತೇಕರು ಅದನ್ನು ಸಮರ್ಪಕವಾಗಿ ಬಳಸುತ್ತಿಲ್ಲ. ಬದಲಾಗಿ ಬಯಲು ಶೌಚಪದ್ದತಿಯನ್ನೇ ಮುಂದುವರೆಸಿದ್ದಾರೆ. ಅಂತಹವರು ಶೌಚಾಲಯ ಬಳಸಲು ಮುಂದಾಗಬೇಕು ಹಾಗೂ ಗ್ರಾಮೀಣ ಸ್ವಯಂ ಸೇವಕರು ಅವರಿಗೆ ಶೌಚಾಲಯ ಬಳಸಲು ಪ್ರೇರೇಪಿಸಬೇಕೆಂದವರು ನುಡಿದರು.ಗ್ರಾಮೀಣ ಭಾಗದಲ್ಲಿ ನಿರೀಕ್ಷೆಯಂತೆ ಶೌಚಾಲಯ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಆದರೆ ಪಟ್ಟಣ ಪ್ರದೇಶಗಳಲ್ಲಿ ಪ್ರತಿ ಮನೆಗೆ ವೈಯಕ್ತಿಕ ಶೌಚಾಲಯ ನಿರ್ಮಿಸುವುದು ಕಷ್ಟಸಾಧ್ಯ. ಆದ್ದರಿಂದ ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕೆ ಯತ್ನಿಸಲಾಗುತ್ತಿದೆ ಎಂದರು.

ಇದೇ ಸಂದರ್ಭದಲ್ಲಿ ಮೇರಿ ಇಮ್ಯಾಕ್ಯುಲೇಟ್ ಶಾಲೆಯ ವಿದ್ಯಾರ್ಥಿನಿ ಕು.ಶಾಲಿನಿ ಹಾಗೂ ಆದಿಚುಂಚನಗಿರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಕು.ವಾಸ್ತವಿ ಅವರು ಶೌಚಾಲಯ ಬಳಕೆಯ ಮಹತ್ವ ಎಂಬ ವಿಷಯ ಕುರಿತು ಲಘು ಭಾಷಣ ಮಾಡಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಜ್ಯೊತಿ ಎಸ್.ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಶ್ರೀಮತಿ ವೇದಾವಿಜಯಕುಮಾರ್, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ರಂಗನಾಥ್ ಅವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಶೌಚಾಲಯ ಬಳಸಲು ಪ್ರತಿಜ್ಞಾವಿಧಿ ಬೋಧಿಸಲಾಯಿತು. ಕಾರ್ಯಕ್ರಮದ ನಂತರ ಸಮನ್ವಯ ಕಲಾತಂಡದವರಿಂದ ಸ್ವಚ್ಚ ಸಂಕಲ್ಪ ಅಭಿಯಾನ ಗೀತನಾಟಕ ಪ್ರದರ್ಶನ ಏರ್ಪಡಿಸಲಾಗಿತ್ತು. ಶಿವಮೊಗ್ಗ ತಾಲೂಕಿನ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾಯಿತ ಪ್ರತಿನಿಧಿಗಳು, ಎನ್.ಎಸ್.ಎಸ್., ಎನ್.ಸಿ.ಸಿ. ವಿದ್ಯಾರ್ಥಿಗಳು, ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News