ಬಾಕ್ಸಿಂಗ್ ಸ್ಪರ್ಧೆಯಲ್ಲಿ ಸ್ಪೇನ್ ದೇಶ ಮಣಿಸಿದ ಗಡಿ ಜಿಲ್ಲೆಯ ಯೋಧ

Update: 2017-08-13 11:25 GMT

ಚಾಮರಾಜನಗರ, ಆ.13: ಗಡಿ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಭಾರತೀಯ ಗಡಿ ಭದ್ರತಾ ಪಡೆಯಲ್ಲಿ ಸೇವೆ ಸಲ್ಲಿಸುತ್ತಿರುವ ಯೋಧನೊಬ್ಬ ಭಾನುವಾರ ಅಮೇರಿಕಾದ ಲಾಸ್ ಏಂಜಲೀಸ್‌ನಲ್ಲಿ ಸ್ಪೇನ್ ವಿರುದ್ದ ನಡೆದ ಬಾಕ್ಸಿಂಗ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗಳಿಸಿ ದೇಶಕ್ಕೆ ಕೀರ್ತಿತಂದಿದ್ದಾರೆ.

ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಹಂಗಳ ಹೋಬಳಿಯ ಹೊನ್ನೇಗೌಡನಹಳ್ಳಿ ಗ್ರಾಮದ ಎಚ್.ವಿ.ಮಹದೇವಪ್ಪ ಹಾಗೂ ಮಲ್ಲಿಗಮ್ಮನವರ ಮಗ ಎಚ್.ಎಂ.ಶಿವಶಂಕರಪ್ಪ 2003 ರಲ್ಲಿ ಭಾರತೀಯ ಗಡಿಭದ್ರತಾಪಡೆಗೆ ಪೇದೆಯಾಗಿ ಸೇವೆಗೆ ಸೇರಿದ್ದು, ಸದ್ಯ ದೆಹಲಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. 2004 ರಿಂದ 07ರ ವರೆಗೆ ಬಾಕ್ಸಿಂಗ್ ತರಭೇತಿ ಪಡೆದು 2008-09 ರಲ್ಲಿ ಅಖಿಲ ಭಾರತ ಪೊಲೀಸ್ ಅಕಾಡೆಮಿಯ ಸ್ಪರ್ಧೆಗಳಲ್ಲಿ ಸ್ಪರ್ಧಿಸಿ ಬೆಳ್ಳಿ ಪದಕ, ನಂತರ 2010ರಿಂದ 15ರವರೆಗೆ ನಡೆದ ಎಲ್ಲಾ ಸ್ಪರ್ಧೆಗಳಲ್ಲಿಯೂ ಭಾಗವಹಿಸಿ ಚಿನ್ನದ ಪದಕ ಪಡೆದುಕೊಂಡಿದ್ದಾರೆ.

2012ರಲ್ಲಿ ಬ್ರೆಜಿಲ್‌ನಲ್ಲಿ ನಡೆದ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ ಚಿನ್ನದ ಪದಕ, 2016ರಲ್ಲಿ ಯುಎಸ್‌ಎದ ವರ್ಜೀನಿಯಾದ ವಾಷಿಂಗ್‌ಟನ್‌ನಲ್ಲಿ ನಡೆದ ವಿಶ್ವ ಪೊಲೀಸ್ ಕ್ರೀಡಾಕೂಟದಲ್ಲಿ ಅತಿಹೆಚ್ಚು ಭಾರದ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ ಬೆಳ್ಳಿಯ ಪದಕ ಪಡೆದುಕೊಂಡಿದ್ದರು. ಆ 13ರ ಭಾನುವಾರ ಅಮೇರಿಕಾದ ಲಾಸ್ ಏಂಜಲೀಸ್‌ನಲ್ಲಿ ಸ್ಪೇನ್ ವಿರುದ್ದ ನಡೆದ ಬಾಕ್ಸಿಂಗ್ ಕ್ರೀಡಾಕೂಟದಲ್ಲಿ ಚಿನ್ನದ ಪದಕಗಳಿಸಿ ದೇಶಕ್ಕೆ ಕೀರ್ತಿತಂದಿದ್ದಾರೆ. ಇವರಿಗೆ ಪತ್ನಿ ಸಂದ್ಯಾರಾಣಿ ಹಾಗೂ ಮಗಳು ಲೇಖನಾ ಇದ್ದು, ಇವರು ಮೈಸೂರಿನ ಕುವೆಂಪು ನಗರದಲ್ಲಿ ವಾಸವಾಗಿದ್ದಾರೆ. ಇವರ ಹಿರಿಯ ಸಹೋದರ ಭದ್ರಪ್ಪ ಚಾಮರಾಜನಗರದ ಟೌನ್ ಪೊಲೀಸ್ ಠಾಣೆಯಲ್ಲಿ ಪೇದೆಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಯೋಧನೊಬ್ಬ ವಿಶ್ವಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಪದಕ ಪಡೆದಿರುವ ಬಗ್ಗೆ ವಿಷಯ ತಿಳಿದ ಜಿಲ್ಲೆ ಹಾಗೂ ತಾಲೂಕಿನಾದ್ಯಂತ ಹೆಚ್ಚಿನ ಜನರು ಹೆಮ್ಮೆಯ ಪುತ್ರನ ಸಾಧನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News