ಲಿಂಗಾಯಿತ ಧರ್ಮಕ್ಕಾಗಿ ಗಡಿ ಜಿಲ್ಲೆಯಿಂದ ಹೋರಾಟಕ್ಕೆ ಬೆಂಬಲ

Update: 2017-08-13 11:30 GMT

ಚಾಮರಾಜನಗರ, ಆ.13: ಲಿಂಗಾಯತ ಧರ್ಮ ಪ್ರತ್ಯೇಕ ಧರ್ಮವಾಗಿ ಘೋಷಣೆ ಮಾಡಬೇಕು ಎಂಬ ಒಮ್ಮತದ ನಿರ್ಣಯವನ್ನು ಚಾಮರಾಜನಗರದಲ್ಲಿ ನಡೆದ ಲಿಂಗಾಯತ ಮಠಾದೀಶರು ಹಾಗೂ ಮುಖಂಡರ ಸಭೆಯಲ್ಲಿ ಕೈಗೊಳ್ಳಲಾಯಿತು.

ಸಿದ್ದಲಿಂಗೇಶ್ವರರು, ಗುರುಮಲೇಶ್ವರರ ತಪೆ ಭೂಮಿಯಾದ ಚಾಮರಾಜ ನಗರ ಜಿಲ್ಲೆಯಿಂದಲೂ  ಸಹ ಹೆಚ್ಚಿನ ಸಂಖ್ಯೆಯಲ್ಲಿ ಸಂಘಟನೆಯನ್ನು ಬಲಗೊಳಿಸಿ ಹೋರಾಟಕ್ಕೆ ಬೆಂಬಲ ನೀಡುವಂತೆ ಸೂಚನೆ ನೀಡಲಾಯಿತು.

ಚಾಮರಾಜನಗರದ ಸಿದ್ದಮಲ್ಲೇಶ್ವರ ಮಠದ ಅವರಣದಲ್ಲಿ ಇಂದು ನಡೆದ ಲಿಂಗಾಯತ ಮಠಾಧೀಶರು, ಮುಖಂಡರ ಪೂರ್ವಭಾವಿ ಸಭೆಯಲ್ಲಿ ಅನೇಕ ಚರ್ಚೆಗಳು ನಡೆದು, ಅಂತಿಮವಾಗಿ ಕರ್ನಾಟಕದಲ್ಲಿರುವ ಎಲ್ಲಾ ಲಿಂಗಾಯತರು ಪ್ರತ್ಯೇಕ ಧರ್ಮವಾಗಿ ಘೋಷಣೆ ಮಾಡಿಕೊಳ್ಳುವ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸುವ ಬಗ್ಗೆ ಮನವರಿಕೆ ಮಾಡಿಕೊಳ್ಳಲಾಯಿತು.

ಸಭೆಯಲ್ಲಿ ಮಾತನಾಡಿದ ವಿವಿಧ ಮಠಾಧೀಶರು, ಕರ್ನಾಟಕದಲ್ಲಿರುವ ಲಿಂಗಾಯತರು ಬಸವಣ್ಣನವರ ಅನುಯಾಯಿಗಳು. 12ನೇ ಶತಮಾನದಲ್ಲಿ ಜಗಜ್ಯೋತಿ ಬಸವೇಶ್ವರರು ಲಿಂಗಾಯತ ಧರ್ಮವನ್ನು ಸ್ಥಾಪನೆ ಮಾಡಿದರು. ಅಲ್ಲಿಂದ ಲಿಂಗ ಪೂಜೆ ಮಾಡುವ ಮೂಲಕ ಲಿಂಗಾಯತ ಧರ್ಮವನ್ನು ಪ್ರಚುರ ಪಡಿಸಿಕೊಂಡು ಬರಲಾಯಿತು. ನಂತರ ದಿನಗಳಲ್ಲಿ ಲಿಂಗಾಯತ ಧರ್ಮವನ್ನು ಸ್ವತಂತ್ರ್ಯ ಧರ್ಮವಾಗಿ ಘೋಷಣೆ ಮಾಡುವ ಸಮಾಜ ಮುಖಂಡರ ಹೋರಾಟಗಳು, ಮನವಿಗಳಿಗೆ ಅಂದಿನ ಸರ್ಕಾರಗಳು ಸಮರ್ಪಕವಾಗಿ ಸ್ಪಂದನೆ ನೀಡಲಿಲ್ಲ. ಹೀಗಾಗಿ ಲಿಂಗಾಯತ ಸ್ವತಂತ್ರ್ಯ ಧರ್ಮಾವಾಗುವ ಅಶಯ ಈಡೇರಲಿಲ್ಲ ಎಂದರು.

ಬ್ರಿಟಿಷರ ಆಳ್ವಿಕೆಯಲ್ಲಿ ಲಿಂಗಾಯತ ಧರ್ಮವಾಗಿ ನಮೂದಾಗಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಲಿಂಗಾಯತ ಧರ್ಮ ಇತ್ತು ಎನ್ನುವುದಕ್ಕೆ ಅನೇಕ ದಾಖಲಾತಿಗಳಿವೆ. ಅನೇಕ ಬಾರಿ ಲಿಂಗಾಯತ ಸ್ವತಂತ್ಯ್ರ ಧರ್ಮವಾಗಬೇಕು ಎಂಬ ಕೂಗು ಏಳುತ್ತಲೇ ಇದೆ. ಆದರೇ ಲಿಂಗಾಯತ ಮತ್ತು ವೀರಶೈವ ಎಂಬ ಗೊಂದಲದ ನಡುವೆ ಲಿಂಗಾಯತ ಧರ್ಮವಾಗುವುದಕ್ಕೆ ತೊಡಕು ಉಂಟಾಗಿದೆ. ಇದನ್ನೇ ಮಾನದಂಡವಾಗಿಟ್ಟು ಇದುವರೆಗೆ ನಮ್ಮನ್ನು ಆಳ್ವಿಕೆ ಮಾಡಿಕೊಂಡು ಬಂದ ಸರ್ಕಾರಗಳು ಲಿಂಗಾಯತ ಧರ್ಮವನ್ನು ಸ್ವತಂತ್ರ್ಯ ಧರ್ಮವನ್ನಾಗಿ ಘೋಷಣೆ ಮಾಡಿಲ್ಲ. ವೀರಶೈವ ಹಿಂದು ಧರ್ಮದ ಭಾಗವಾಗಿದ್ದು, ಈ ಹೆಸರಿನಲ್ಲಿ ಪ್ರತ್ಯೇಕ ಧರ್ಮವನ್ನು ಕೇಳುವುದು ತರವಲ್ಲ. ಈಗಾಗಲೇ ವೀರಶೈವ ಪ್ರತ್ಯೇಕ ಧರ್ಮವನ್ನು ಪಡೆಯುವ ವಿಚಾರವು ತಿರಸ್ಕೃತಗೊಂಡಿದೆ. ಹೀಗಾಗಿ ಲಿಂಗಾಯಿತ ಸ್ವತಂತ್ರ್ಯ ಧರ್ಮವಾಗುವುದಕ್ಕೆ ನಮ್ಮೆಲ್ಲರ ಸಂಪೂರ್ಣ ಒಪ್ಪಿಗೆ ಇದೆ ಎಂದು ಸಭೆಯಲ್ಲಿ ಮಾತನಾಡಿದ ಮರಿಯಾಲದ ಶ್ರೀ ಇಮ್ಮಡಿ ಮುರುಘರಾಜೇಂದ್ರಶ್ರೀಗಳು, ಚಾ.ನಗರದ ಶ್ರೀ ಚೆನ್ನಬಸವಸ್ವಾಮೀಜೀ, ಮುಡಿಗುಂಡದ ಶ್ರೀಕಂಠಸ್ವಾಮೀಜಿ, ಅಗರ ಮಠದ ಶ್ರೀ ಸಿದ್ದಮಲ್ಲಸ್ವಾಮೀಜಿ ತಿಳಿಸಿದರು.

ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಕೊಡಸೋಗೆ ಶಿವಬಸಪ್ಪ ಮಾತನಾಡಿ, ಲಿಂಗಾಯತ ಸ್ವತಂತ್ರ್ಯ ಧರ್ಮವಾಗಿ ಘೋಷಣೆಯಾಗಬೇಕು. ಇದಕ್ಕಾಗಿ ವೀರಶೈವ ಮಹಾಸಭಾ ಸಂಪೂರ್ಣವಾಗಿ ತೊಡಗಿಸಿಕೊಳ್ಳಬೇಕು. ಇನ್ನೂ ಮುಂದೆ ಹೋಗಿ ಲಿಂಗಾಯತ ಮಹಾಸಭೆ ಎಂಬ ಘೋಷಣೆಯನ್ನು ಮಾಡಿಕೊಂಡು ಪ್ರತ್ಯೇಕ ಧರ್ಮ ಘೋಷಣೆಗೆ ಎಲ್ಲರು ಮುಂದಾಗಬೇಕು ಎಂದು ತಿಳಿಸಿದರು.

ಈ ಸಭೆಯಲ್ಲಿ ಕೋಡಗಾಪು ರಶ್ರೀಗಳು, ಮುಖಂಡರಾದ ಮಾಜಿ ಶಾಸಕ ಸಿ. ಗುರುಸ್ವಾಮಿ, ಕಾಳನಹುಂಡಿ ಗುರುಸ್ವಾಮಿ, ಮೂಡ್ಲುಪುರ ನಂದೀಶ್, ದುಗ್ಗಹಟ್ಟಿ ಸ್ವಾಮಿ, ಅಲರೆ ಶಿವಬುದ್ದಿ, ಕೆಲ್ಲಂಬಳ್ಳಿ ಅನಂದ್, ಪ್ರಸಾದ್, ಬಸವಪ್ರಥ್ವಿ, ಕೊಂಗಳಪ್ಪ, ಆರ್. ಪುಟ್ಟಮಲ್ಲಪ್ಪ, ನಾಗರಾಜು, ವಡ್ಡರಹಳ್ಳಿ ಮಹೇಶ್, ಗಿರೀಶ್, ಮೊದಲಾದವರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News