ಹಿರಿಯರ ಬಗ್ಗೆ ಕಾಳಜಿ ಇದ್ದರೆ ವೃದ್ಧಾಶ್ರಮಗಳ ಅವಶ್ಯಕತೆಯಿಲ್ಲ: ಮುದ್ದಹನುಮೇಗೌಡ

Update: 2017-08-13 12:56 GMT

ತುಮಕೂರು, ಆ.13: ಪ್ರತಿಯೋಬ್ಬ ನಾಗರಿಕರಲ್ಲಿ ಹಿರಿಯರ ಬಗ್ಗೆ ಸಾಮಾಜಿಕ ಕಳಕಳಿ ಇದ್ದರೆ ವೃದ್ಧಾಶ್ರಮಗಳ ಅವಶ್ಯಕತೆ ಇರುವುದಿಲ್ಲ. ವೃದ್ಧರ ಮೇಲಿನ ಪ್ರೀತಿ ಸಮಾಜದ ಅಂಗ ಎಂದೇ ಭಾವಿಸಿ ಹಿರಿಯರನ್ನು ಗೌರವಿಸಿ ಎಂದು ಸಂಸದ ಎಸ್.ಪಿ ಮುದ್ದಹನುಮೇಗೌಡ ತಿಳಿಸಿದ್ದಾರೆ.

ನಗರದ ಅಮಾನಿಕೆರೆ ಮುಖ್ಯ ದ್ವಾರದಲ್ಲಿ ಅಮಾನಿಕೆರೆ ಮುಂಜಾನೆ ಗೆಳೆಯರ ಬಳಗ(ರಿ)ದ ವತಿಯಿಂದ ಭಾನುವಾರ ಏರ್ಪಡಿಸಿದ್ದ ಸಂಘದ ಉದ್ಘಾಟನೆ, ನೇತ್ರಧಾನ, ನೇತ್ರ ತಪಾಸಣೆ, ಶಸ್ತ್ರ ಚಿಕಿತ್ಸಾ ಶಿಭಿರ ಹಾಗೂ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ಇತ್ತೀಚಿನ ದಿನಗಳಲ್ಲಿ ಯುವ ಸಮುದಾಯದಲ್ಲಿ ಹಿರಿಯ ನಾಗರಿಕರ ಮೇಲೆ ಒಲವು ಕಡಿಮೆಯಾಗುತ್ತಿದೆ. ಅವರ ಮೇಲಿನ ಸಾಮಾಜಿಕ ಕಳಕಳಿ ಕಡಿಮೆಯಾಗುತ್ತಿರುವುದರಿಂದ ವೃದ್ಧಾಶ್ರಮಗಳು ಹೆಚ್ಚುತ್ತಿವೆ. ಮಕ್ಕಳು ತಮ್ಮ ತಂದೆ ತಾಯಿಗಳ ಮೇಲೆ ಪ್ರೀತಿ ವಾತ್ಸಲ್ಯ ಇಟ್ಟು ನೋಡಿಕೊಂಡರೆ ವೃದ್ಧಾಶ್ರಮಗಳು ಹುಟ್ಟಿಕೊಳ್ಳುವುದಿಲ್ಲ ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಹೆಚ್.ವಿ.ರಂಗಸ್ವಾಮಿ ಮಾತನಾಡಿ, ಮನುಷ್ಯ ಹೆಚ್ಚು ಕಾಲ ಬದುಕಬೇಕಾದರೆ ಸುತ್ತ ಮುತ್ತಲ ವಾತಾವರಣ ಚೆನ್ನಾಗಿರಬೇಕಾಗುತ್ತದೆ. ವಾತಾವರಣ ಉತ್ತಮವಾಗಿದ್ದರೆ ಯಾವುದೇ ತೊಂದರೆಗಳು ಕಾಣಿಸಿಕೊಳ್ಳುವುದಿಲ್ಲ. ಹಾಗಾಗಿ ಅಮಾನಿಕೆರೆಯ ಸೌಲಭ್ಯವನ್ನು ಪಡೆಯುವ ಎಲ್ಲಾ ನಾಗರಿಕರು ಅಮಾನಿಕೆರೆಯ ಆವರಣ ಕಲುಷಿತ ವಾಗದಂತೆ ನೋಡಿಕೊಳ್ಳಬೇಕು ಎಂದು ಕರೆ ನೀಡಿದರು.
ಮನುಷ್ಯನಿಗೆ ಜೀವ ಇದ್ದಾಗಷ್ಟೇ ಬೆಲೆ.ಸತ್ತ ಮೇಲೆ ಯಾವುದೇ ಬೆಲೆ ಇರುವುದಿಲ್ಲ. ಹಾಗಾಗಿ ಸಾಯುವ ಮುನ್ನ ತಾನು ಸತ್ತ ಮೇಲೆ ಇನ್ನೋಬ್ಬರಿಗೆ ಅನುಕೂಲವಾಗುವಂತೆ ತಮ್ಮ ದೇಹದ ಅಂಗಾಂಗಗಳನ್ನು ದಾನ ಮಾಡಿದರೆ ಸಮಾಜಕ್ಕೆ ಉತ್ತಮ ಕೊಡುಗೆ ನೀಡಿದಂತಾಗುತ್ತದೆ. ಈ ನಿಟ್ಟಿನಲ್ಲಿ ಎಲ್ಲರೂ ಸಮಾಜವನ್ನು ಮುಂದಿಟ್ಟುಕೊಂಡು ಕೆಲವು ಸೇವೆಗಳನ್ನು ಮಾಡಬೇಕಿದೆ ಎಂದು ಹೇಳಿದರು.
 
ಮಹಾನಗರ ಪಾಲಿಕೆ ಅಯುಕ್ತ ಎಲ್.ಮಂಜುನಾಥ್ ಮಾತನಾಡಿ, ಸಮಾಜಮುಖಿ ಕೆಲಸಗಳಿಗೆ, ಪರಿಸರ ಅಭಿವೃದ್ದಿ, ಸ್ವಚ್ಛತೆಗೆ ನಗರ ಪಾಲಿಕೆಯಿಂದ ಅಗತ್ಯ ಪರಿಕರಗಳನ್ನು ಸಂಘಕ್ಕೆ ನೀಡುವುದಾಗಿ ಭರವಸೆ ನೀಡಿದರು. ಇದೇ ದಿನ ಬೆಳಗ್ಗೆ ನಗರದ ಶಾಸಕ ಡಾ.ರಫೀಕ್ ಅಹಮದ್ ನಾಮಫಲಕ ಆನಾವರಣ ಮಾಡಿದರು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ರೋಟರಿ ಸೆಂಟ್ರಲ್ ಅಧ್ಯಕ್ಷೆ ಜ್ಯೋತಿ, ಸಾಯಿ ನೇತ್ರಾಲಯದ ಡಾ.ಸುರೇಶ್, ಟೂಡಾ ಸದಸ್ಯೆ ಮಂಜುಳ, ಎನ್.ಎಸ್.ಶ್ರೀಧರ್, ಬಸವರಾಜು, ಸಂಘದ ಅಧ್ಯಕ್ಷ.ವೆಂಕಟೇಶ್, ಕೆ.ಕೃಷ್ಣಮೂರ್ತಿ, ಕೆ.ಎಸ್.ನಟರಾಜು, ಎಸ್.ಕೆ.ಗಂಗರಾಜು, ಹೆಚ್.ನರಸಿಂಹಯ್ಯ, ಕೆ.ವಿ.ಗೌರಿಶಂಕರ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News