ಮೋದಿ ಠಿಕಾಣಿ ಹೂಡಿದರೂ ಭಯವಿಲ್ಲ: ಸಿದ್ದರಾಮಯ್ಯ

Update: 2017-08-13 14:03 GMT

ಕಲಬುರಗಿ, ಆ.13: ಬಿಜೆಪಿ ರಾಷ್ಟ್ರೀಯಾಧ್ಯಕ್ಷ ಅಮಿತ್ ಶಾ ಮಾತ್ರವಲ್ಲ, ಪ್ರಧಾನಿ ನರೇಂದ್ರ ಮೋದಿ ಬಂದು ಕರ್ನಾಟಕದಲ್ಲಿ ವಾಸ್ತವ್ಯ ಹೂಡಿದರೂ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ರವಿವಾರ ಜಿಲ್ಲೆಯ ಆಳಂದ ಪಟ್ಟಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಅಮಿತ್ ಶಾ, ನರೇಂದ್ರ ಮೋದಿ ಇಬ್ಬರೂ ಇಲ್ಲೇ ಬಂದು ಠಿಕಾಣಿ ಹೂಡಲಿ ನಮಗೆ ಯಾವ ಭಯವಿಲ್ಲ. ಮುಂದಿನ ಬಾರಿಯೂ ಪೂರ್ಣ ಬಹುಮತದೊಂದಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂದರು.

ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಅವಧಿಗೆ ಮುನ್ನ ಚುನಾವಣೆ ಸಾಧ್ಯವೇ ಇಲ್ಲ. ನಮ್ಮ ಅಧಿಕಾರ ಅವಧಿಯನ್ನು ಪೂರ್ಣಗೊಳಿಸುತ್ತೇವೆ ಎಂದ ಅವರು, ಬಿಜೆಪಿಯವರು ರಾಜ್ಯದ ಜನರನ್ನು ದಿಕ್ಕು ತಪ್ಪಿಸಲು ಇಲ್ಲದ ಗೊಂದಲಗಳನ್ನು ಸೃಷ್ಟಿಸುತ್ತಿರುತ್ತಾರೆ ಎಂದು ವಾಗ್ದಾಳಿ ನಡೆಸಿದರು.

ಇಂಧನ ಸಚಿವ ಡಿ.ಕೆ.ಶಿವಕುಮಾರ್ ಮನೆ ಮೇಲೆ ನಡೆದ ಆದಾಯ ತೆರಿಗೆ ಇಲಾಖೆ ದಾಳಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಷಡ್ಯಂತ್ರ. ಇಂತಹ ಷಡ್ಯಂತ್ರಗಳಿಗೆ ನಾವು ಹೆದರುವುದಿಲ್ಲ, ಬೆದರುವುದಿಲ್ಲ ಎಂದ ಸಿದ್ದರಾಮಯ್ಯ ಇದೇ ವೇಳೆ ಗುಡುಗಿದರು.

ಲಿಂಗಾಯತ ಪ್ರತ್ಯೇಕ ಧರ್ಮ ಬೇಡಿಕೆ ಹಿಂದೆ ನನ್ನ ಪಾತ್ರವಿಲ್ಲ. ಕೆಲ ಪಟ್ಟಭದ್ರ ಹಿತಾಸಕ್ತಿಗಳು ವಿನಾ ಕಾರಣ ನಮ್ಮ ಮೇಲೆ ಆರೋಪ ಮಾಡುತ್ತಿವೆ. ನಾವು ಸಮಾಜವನ್ನು ಜೋಡಿಸುವವರೇ ಹೊರತು ಸಮಾಜ ಒಡೆಯುವವರಲ್ಲ. ಬಿಜೆಪಿ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದೆ. ಅವರು ಕತ್ತರಿ ಇಟ್ಟುಕೊಂಡಿದ್ದರೆ ನಾವು ಸೂಜಿ ಇಟ್ಟುಕೊಂಡಿದ್ದೇವೆ ಎಂದು ಮಾರ್ಮಿಕವಾಗಿ ನುಡಿದರು.

ಲಿಂಗಾಯತರು ಮತ್ತು ವೀರಶೈವರು ಇಬ್ಬರು ಒಗ್ಗಟ್ಟಿನಿಂದ ಮನವಿ ಸಲ್ಲಿಸಿದರೆ ಲಿಂಗಾಯತ ಪ್ರತ್ಯೇಕ ಧರ್ಮ ಸ್ಥಾಪನೆ ಸಂಬಂಧ ಕೇಂದ್ರ ಸರಕಾರಕ್ಕೆ ರಾಜ್ಯ ಸರಕಾರ ಪ್ರಸ್ತಾವನೆ ಸಲ್ಲಿಸುವ ಕೆಲಸ ಮಾಡಲಿದೆ ಎಂದು ಸಿದ್ದರಾಮಯ್ಯ ಇದೇ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿದರು.

ಡಿ.ಕೆ.ಶಿವಕುಮಾರ್ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಎಂಬ ಕಾಂಗ್ರೆಸ್ ಹಿರಿಯ ಮುಖಂಡ ಜನಾರ್ದನ್ ಪೂಜಾರಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಸಿಎಂ ಯಾರು ಆಗಬೇಕೆಂದನ್ನು ನೂತನವಾಗಿ ಆಯ್ಕೆಯಾಗುವ ಶಾಸಕರು ಹಾಗೂ ಪಕ್ಷದ ಹೈಕಮಾಂಡ್ ತೀರ್ಮಾನಿಸಲಿದೆ. ಜನಾರ್ಧನ ಪೂಜಾರಿಯಲ್ಲ ಎಂದು ತೀರುಗೇಟು ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News