ಜಯಕರ್ನಾಟಕ ಜಿಲ್ಲಾ ಪದಾಧಿಕಾರಿಗಳ ಆಯ್ಕೆ ಸಮಾರಂಭ

Update: 2017-08-13 15:17 GMT

ಚಿಕ್ಕಬಳ್ಳಾಪುರ, ಆ.13: ಖಾಸಗಿ ಶಾಲೆಗಳಲ್ಲಿ ಆರ್‌ಟಿಇ ಕಾಯ್ದೆಯಡಿ ದಾಖಲಾಗುವ ಮಕ್ಕಳನ್ನು ಅಸ್ಪಶ್ಯರಂತೆ ಕಾಣುತ್ತಿದ್ದು, ಇಂತಹ ತಾರತಮ್ಯ ಧೋರಣೆ ಅನುಸರಿಸುವ ಶಾಲೆಗಳ ವಿರುದ್ಧ ಮುಂಬರುವ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಜಯಕರ್ನಾಟಕ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀನಿವಾಸ್ ಎಚ್ಚರಿಸಿದರು.

ನಗರದ ಪಂಚಗಿರಿ ಬೋಧನಾ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಜಯಕರ್ನಾಟಕ ಜಿಲ್ಲಾ ಹಾಗೂ ತಾಲೂಕು ಘಟಕಗಳ ಪದಾಧಿಕಾರಿಗಳ ಆಯ್ಕೆ ಸಮಾರಂಭದಲ್ಲಿ ಮಾತನಾಡಿದ ಅವರು, ಆರ್‌ಟಿಇ ಕಾಯ್ದೆಯಡಿ ದಾಖಲಾಗುವ ಮಕ್ಕಳ ಫೀಜ್ ಸರ್ಕಾರವೇ ಭರಿಸುತ್ತಿದ್ದರೂ, ಖಾಸಗಿ ಶಾಲೆಗಳು ಬೇಧಭಾವ ಮಾಡುತ್ತಿರುವುದು ಸರಿಯಲ್ಲ ಎಂದು ಆಕ್ರೋಷ ವ್ಯಕ್ತಪಡಿಸಿದರು.

ಪ್ರಸ್ತುತ ದಿನಗಳಲ್ಲಿಯೂ ಮಕ್ಕಳು ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗುತ್ತಿದ್ದು, ಸರ್ಕಾರಿ ಶಾಲೆಗಳು ಮೂಲ ಸೌಕರ್ಯಗಳಿಲ್ಲದೆ ಸೊರಗುತ್ತಿದೆ. ಇದನ್ನೇ ಬಂಡವಾಳವನ್ನಾಗಿಸಿಕೊಂಡಿರುವ ಖಾಸಗಿ ಶಾಲೆಗಳ ಶಿಕ್ಷಣವನ್ನು ವ್ಯಾಪಾರಿಕರಣ ಮಾಡಿಕೊಂಡಿವೆ ಎಂದ ಅವರು, ಸರ್ಕಾರಿ ಶಾಲೆಗಳಿಗೆ ಮೂಲ ಸೌಕರ್ಯಗಳನ್ನು ಒದಗಿಸಲು ಹಾಗೂ ಡೊನೇಷನ್ ಹಾವಳಿಯ ವಿರುದ್ಧ ಹೋರಾಡಲು ಸನ್ನದ್ಧರಾಗಬೇಕಿದೆ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

ಇದ್ದು ಇಲ್ಲದಂತಿರುವ ಜಿಲ್ಲಾಸ್ಪತ್ರೆ
ಇನ್ನೂ ಜಿಲ್ಲಾಕೇಂದ್ರದಲ್ಲಿನ ನೂತನ ಜಿಲ್ಲಾಸ್ಪತ್ರೆಯು ಅವ್ಯವಸ್ಥೆಗಳ ಆಗರವಾಗಿದ್ದು, ಆರೋಗ್ಯ ಸಚಿವರ ಮಾತಿಗೂ ಕಿಮ್ಮತ್ತು ನೀಡದೇ ಔಷಧಗಳನ್ನು ಹೊರಗಡೆ ಪಡೆಯುವಂತೆ ಚೀಟಿ ಬರೆದು ಕೊಡಲಾಗುತ್ತಿದೆ. ಅಲ್ಲದೆ ರೋಗಿಗಳನ್ನು ಬೆಂಗಳೂರು ಸೇರಿದಂತೆ ಖಾಸಗಿ ಆಸ್ಪತ್ರೆಗಳನ್ನು ಕರೆದೊಯ್ಯುವಂತೆ ಸೂಚಿಸುತ್ತಿರುವುದರಿಂದ ಗ್ರಾಮೀಣ ಭಾಗದ ಬಡ ರೋಗಿಗಳು ಪರದಾಡುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಹೋರಾಟದಲ್ಲಿ ಸಮಾಜ ಸೇವೆಯಿರಲಿ
ಕಾರ್ಯಕರ್ತರು ಕೇವಲ ಹೋರಾಟಗಳ ಜೊತೆಗೆ ಸಮಾಜ ಸೇವೆಯನ್ನು ಅಳವಡಿಸಿಕೊಳ್ಳಬೇಕಿದ್ದು, ಅಶಕ್ತರ ಬಾಳಿಗೆ ಆಶಾಕಿರಣವಾಗಲು ಉದ್ಬವಿಸಿರುವ ಜಯಕರ್ನಾಟಕ ಸಂಘಟನೆಯ ಮೂಲ ಉದ್ದೇಶವನ್ನು ಸಾಕಾರಗೊಳಿಸಲು ಮುಂದಾಗಬೇಕಿದೆ. ಈ ನಿಟ್ಟಿನಲ್ಲಿ ಸಮಸ್ಯೆಗಳ ಧ್ವನಿ ಎತ್ತುವ ಜೊತೆಗೆ, ಸ್ವಚ್ಛತಾ ಕಾರ್ಯಗಳಲ್ಲಿ ತೊಡಹಿಸಿಕೊಳ್ಳುವುದು, ಶಿಕ್ಷಣ, ಆರೋಗ್ಯ ಸೇರಿದಂತೆ ಮೂಲ ಸೌಕರ್ಯಗಳನ್ನು ಪ್ರತಿಯೊಬ್ಬರಿಗೂ ಒದಗಿಸಲು ಕಾರ್ಯಪ್ರವೃತ್ತರಾಗಬೇಕಿದೆ ಎಂದರು.

ಈ ಸಂದರ್ಭದಲ್ಲಿ ಸಂಘಟನೆಯ ವೆಂಕಟರಾಮರೆಡ್ಡಿ, ಮುರಳಿ, ಅಕ್ರಂಪಾಷ, ಚೇತನ್ ಸೇರಿದಂತೆ ಮತ್ತಿತರರು ಇದ್ದರು.

ಪದಾಧಿಕಾರಿಗಳ ಆಯ್ಕೆ
ಕಾರ್ಯಕ್ರಮದಲ್ಲಿ ಜಯಕರ್ನಾಟಕ ಜಿಲ್ಲಾ ಘಟಕದ ಉಪಾಧ್ಯಕ್ಷರಾಗಿ ನಾರಾಯಣಸ್ವಾಮಿ, ನವಚೇತನ್, ನಗರ ಘಟಕದ ಅಧ್ಯಕ್ಷರಾಗಿ ಬಿ. ಚೇತನ್, ಕಾಯಾಧ್ಯಕ್ಷರಾಗಿ ಸಿ. ಮುನಿರಾಜು, ವಿದ್ಯಾರ್ಥಿ ಘಟಕದ ಅಧ್ಯಕ್ಷರಾಗಿ ಕೆ.ಆರ್. ನವೀನ್, ಅಶೋಕ್ ಕುಮಾರ್, ಜಗದೀಶ್‌ಕುಮಾರ್, ಕೆ.ಎಲ್. ಹರೀಶ್, ದಿಲೀಪ್, ಹರೀಶ್, ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ನಾಗರಾಜ್, ಕಾರ್ಯದರ್ಶಿಯಾಗಿ ಶ್ರೀನಿವಾಸ್, ಸಂಚಾಲಕರಾಗಿ ಆರ್. ಮನೋಹರ್, ಎಂ. ರಘು, ಜಂಟಿ ಕಾರ್ಯದರ್ಶಿಯಾಗಿ ಬಿ.ವಿ.ಮನು, ಮಂಜು, ನಂದಿ ಹೋಬಳಿ ಘಟಕ್ಕೆ ನರಸಿಂಹಮೂರ್ತಿ, ಕೆ.ಎನ್. ರಂಜಿತ್ ಅವರುಗಳನ್ನು ನೇಮಕ ಮಾಡಿ ಪ್ರಮಾಣ ಪತ್ರ ವಿತರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News