ಉತ್ತಮ ಸಮಾಜ ನಿರ್ಮಾಣಕ್ಕೆ ಮಠ ಮಂದಿರಗಳು ಕೊಡುಗೆ ನೀಡಿವೆ: ಅಮಿತ್ ಶಾ

Update: 2017-08-13 17:08 GMT

ಮಂಡ್ಯ, ಆ.13: ಮಠ ಮಂದಿರಗಳು ಹಾಗೂ ಸ್ವಾಮೀಜಿಗಳು ಉತ್ತಮ ಸಮಾಜ ಕಟ್ಟುವಲ್ಲಿ ತಮ್ಮದೆ ಆದ ಕೊಡುಗೆ ನೀಡಿವೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅಭಿಪ್ರಾಯಪಟ್ಟಿದ್ದಾರೆ.

ನಾಗಮಂಗಲ ತಾಲೂಕಿನ ರವಿವಾರ ಆದಿಚುಂಚನಗಿರಿ ಕ್ಷೇತ್ರಕ್ಕೆ ಭೇಟಿ ನೀಡಿ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥಸ್ವಾಮೀಜಿ ಅವರ ಆಶೀರ್ವಚನ ಪಡೆದು, ಲಿಂಗೈಕ್ಯ ಡಾ.ಬಾಲಗಂಗಾಧರನಾಥ ಸ್ವಾಮೀಜಿ ಕುರಿತಾದ "ಸ್ಟೋರಿ ಆಫ್ ಗುರು" ಎಂಬ ಪುಸ್ತಕ  ಬಿಡುಗಡೆ ಮಾಡಿ ಅವರು ಮಾತನಾಡಿದರು.

ರಾಜ ಮಹಾರಾಜರು, ಅನೇಕ ಸರಕಾರಗಳು ದೇಶವನ್ನು ಮುನ್ನಡೆಸಿದ್ದಾರೆ. ಹಲವು ಕಲ್ಯಾಣ ಕಾರ್ಯಗಳನ್ನು ಕೈಗೊಂಡಿದ್ದಾರೆ. ಅಂತೆಯೇ ಇದಕ್ಕೆ ಪೂರಕವಾಗಿ ಮಠಮಾನ್ಯಗಳೂ ಸಮಾಜಮುಖಿ ಕೆಲಸ ಮಾಡಿವೆ ಎಂದು ಅವರು ಹೇಳಿದರು. ಶೈಕ್ಷಣಿಕ, ಧಾರ್ಮಿಕ, ಸಾಂಸ್ಕೃತಿಕ, ಆರೋಗ್ಯ, ಪರಿಸರ ಕ್ಷೇತ್ರಗಳಿಗೆ ಆದಿಚುಂಚನಗಿರಿ ಮಠ ಗಮನಾರ್ಹ ಕೊಡುಗೆ ನೀಡಿದ್ದು, ಶ್ರೀಮಠದ ಅಭಿವೃದ್ಧಿ ಮತ್ತು ಸಮಾಜ ಸೇವೆಯಲ್ಲ ಲಿಂಗೈಕ್ಯ ಬಾಲಗಂಗಾಧರನಾಥ ಸ್ವಾಮೀಜಿ ಅವರು ಕೊಡುಗೆ ಅವಿಸ್ಮರಣೀಯ ಎಂದು ಅವರು ಸ್ಮರಿಸಿದರು.

ಮಠವು 475ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಯಲ್ಲಿ 1.48 ಲಕ್ಷ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು, 18 ಸಾವಿರಕ್ಕೂ ಹೆಚ್ಚು ಸಿಬ್ಬಂದಿ ವರ್ಗ ಹೊಂದಿದೆ ಎನ್ನುವುದಾದರೆ ಇದೊಂದು ಪವಾಡವೆಂದು ಹೇಳಬಹುದು ಎಂದವರು ಶ್ಲಾಘಿಸಿದರು.

ಜನರ ಕಷ್ಟ, ದುಃಖಗಳನ್ನು ನಿವಾರಣೆ ಮಾಡುವ ನಿಟ್ಟಿನಲ್ಲಿ ದೇಶದಲ್ಲಿ ಅನೇಕ ಮಠ ಮಂದಿರಗಳು, ಸಾಧು ಸಂತರು ಕೆಲಸ ಮಾಡುತ್ತಿರುವಂತೆಯೇ, ಪ್ರಧಾನಮಂತ್ರಿ ನರೇಂದ್ರಮೋದಿ ಅವರೂ ಭಾರತೀಯ ಸಂಸ್ಕೃತಿಯನ್ನು ವಿಶ್ವಕ್ಕೆ ಪಸರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಶಾ ಹೇಳಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News