ಚುಂಚನಗಿರಿ ಮಠ ರಾಜಕೀಯದಲ್ಲಿ ಗುರುತಿಸಿಕೊಳ್ಳುವುದಿಲ್ಲ: ನಿರ್ಮಲಾನಂದನಾಥ ಸ್ವಾಮೀಜಿ ಸ್ಪಷ್ಟನೆ

Update: 2017-08-13 17:07 GMT

ಮಂಡ್ಯ, ಆ.13: ಆಚಿಚುಂಚನಗಿರಿ ಮಠವು ಯಾವತ್ತೂ ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿಲ್ಲ, ಮುಂದೆಯೂ ಗುರುತಿಸಿಕೊಳ್ಳುವುದಿಲ್ಲ ಎಂದು ಶ್ರೀಮಠದ ಪೀಠಾಧ್ಯಕ್ಷ ಡಾ.ನಿರ್ಮಲನಾನಂತನಾಥ ಸ್ವಾಮೀಜಿ ಸ್ಪಷ್ಟಪಡಿಸಿದ್ದಾರೆ.

ಶನಿವಾರ ಮಠದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪಾಲ್ಗೊಂಡಿರುವುದರಲ್ಲಿ ರಾಜಕೀಯ ವಾಸನೆ ಇದೆ ಎಂಬ ಗುಸು ಗುಸು ಹರಿದಾಡುತ್ತಿರುವುದನ್ನು ನಿರ್ಮಲಾನಂದನಾಥ ಸ್ವಾಮೀಜಿ ತಳ್ಳಿಹಾಕಿದರು.

ಒಕ್ಕಲಿಗ ಸಮುದಾಯದ ದೊಡ್ಡ ಮಠವಾಗಿ ಗುರುತಿಸಿಕೊಂಡಿರುವ ಆದಿಚುಂಚನಗಿರಿಗೆ ಶಾ ದಿಢೀರ್ ಭೇಟಿ ನೀಡಿರುವುದು ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿತು. ಇದನ್ನು ಅರಿತ ಸ್ವಾಮೀಜಿ ವೇದಿಕೆಯಲ್ಲಿಯೇ ಮಠಕ್ಕೂ ರಾಜಕೀಯಕ್ಕೂ ಸಂಬಂಧವಿಲ್ಲವೆಂದು ಊಹಾಪೋಹಗಳಿಗೆ ತೆರೆ ಎಳೆದರು.
ಆದಿಚುಂಚನಗಿರಿ ಕ್ಷೇತ್ರದಲ್ಲಿ ಗೋರಖನಾಥರು ತಪಸ್ಸು ಮಾಡಿದ್ದರು. ನಂತರ ದೇಶದ ವಿವಿಧೆಡೆ ಸಂಚರಿಸಿ ಉತ್ತರ ಪ್ರದೇಶ ಗೋರಖಪುರದಲ್ಲೂ ಮಠ ಸ್ಥಾಪಿಸಿದ್ದರು. ಗೋರಖ್‌ಪುರ ಮತ್ತು ಚುಂಚನಗಿರಿ ಮಠಗಳೆರಡೂ ನಾಥ ಸಂಪ್ರದಾಯದ ಪ್ರಮುಖ ಕೇಂದ್ರಗಳಾಗಿವೆ ಎಂದವರು ವಿವರಿಸಿದರು.

ಶ್ರೀಮಠಕ್ಕೆ ಅನೇಕ ರಾಜಕೀಯ ನಾಯಕರು, ಮುತ್ಸದ್ದಿಗಳು ಬಂದು ಹೋಗಿದ್ದಾರೆ, ಸ್ವಾಮೀಜಿಗಳ ಆಶೀರ್ವಚನ ಪಡೆದಿದ್ದಾರೆ. ಮುತ್ಸದ್ದಿಗಳನ್ನು ಸೃಷ್ಟಿಸುವಲ್ಲಿ ಮಠ ಪಾತ್ರವಹಿಸುತ್ತದೆಯೇ ಹೊರತು, ರಾಜಕೀಯದಲ್ಲಿ ಎಂದೂ ಪಾಲ್ಗೊಳ್ಳುವುದಿಲ್ಲ ಎಂದು ಅವರು ಮತ್ತೊಮ್ಮೆ ಸ್ಪಷ್ಟಪಡಿಸಿದರು.
ಹಲವಾರು ಸಂದರ್ಭಗಳಲ್ಲಿ ಅಮಿತ್ ಶಾ ತಾನು ಭೇಟಿಯಾಗಿದ್ದು, ಆಧ್ಯಾತ್ಮಿಕ ವಿಚಾರಗಳನ್ನು ಚರ್ಚಿಸಿದ್ದೇವೆ. ಮಠಕ್ಕೆ ಶಾ ಬರುವ ಪ್ರಯತ್ನ ಹಲವು ದಿನದಿಂದ ಇತ್ತು. ಆ ಕಾರ್ಯ ಇವತ್ತು ನೆರವೇರಿದೆ. ಭೈರವನ ದರ್ಶನ ಪಡೆದಿದ್ದಾರೆ ಎಂದು ಸ್ವಾಮೀಜಿ ಹೇಳಿದರು.

ಪುಸ್ತಕದ ಲೇಖಕಿ ಸುಧಾಮಹಿ ರಘುನಾಥನ್, ಸ್ವಾಮಿ ಪರಮಾತ್ಮಾನಂದ ಸರಸ್ವತಿ ಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ರಾಷ್ಟ್ರೀಯ ಕಾರ್ಯದರ್ಶಿ ಮಹೇಶ್‌ಗಿರಿ, ಕೇಂದ್ರ ಸಚಿವರಾದ ಡಿ.ವಿ.ಸದಾನಂದಗೌಡ, ಅನಂತಕುಮಾರ್, ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್, ಶೋಭ ಕರಂದ್ಲಾಜೆ, ಇತರ ಗಣ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News