ವಿಇಎಸ್‌ಗೆ ಪದಾಧಿಕಾರಿಗಳ ಆಯ್ಕೆ
ಚಿಕ್ಕಮಗಳೂರು, ಆ.14: ವಿಶ್ವಮಾನವ ಎಜುಕೇಷನ್ ಸೊಸೈಟಿಯ ಸರ್ವ ಸದಸ್ಯರ ಸಭೆ ಇತ್ತೀಚೆಗೆ ಅಧ್ಯಕ್ಷೆ ಎ.ಎನ್.ಮಾಲಿನಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಅಧ್ಯಕ್ಷರಾಗಿ ಎ.ಎನ್.ಮಾಲಿನಿ, ಪ್ರಧಾನ ಕಾರ್ಯದರ್ಶಿಯಾಗಿ ಸತೀಶ ಅವಿರೋಧವಾಗಿ ಪುನರಾಯ್ಕೆಯಾದರು. ಉಪಾಧ್ಯಕ್ಷರಾಗಿ ಎಲ್.ಜಯಲಕ್ಷ್ಮಿ, ಸಹ ಕಾರ್ಯದರ್ಶಿಯಾಗಿ ಅರುಣ್‌ಕುಮಾರ್, ಖಜಾಂಚಿಯಾಗಿ ಬಿ.ಎನ್.ಪೃಥ್ವಿ, ನಿರ್ದೇಶಕರಾಗಿ ಎಂ.ಎಂ.ದೇವರಾಜೇಗೌಡ, ಆಶಾಪ್ರಕಾಶ್, ವಿ.ಪಿ.ಉಮೇಶ್, ಕೆ.ಆರ್.ಶ್ರೀಲಕ್ಷ್ಮಿ ಅವಿರೋಧ ಆಯ್ಕೆಯಾದರು.
ವಿಇಎಸ್ ಅಧ್ಯಕ್ಷೆ ಎ.ಎನ್.ಮಾಲಿನಿ ಮಾತನಾಡಿ, ವಿಶ್ವಮಾನವ ಎಜುಕೇಷನ್ ಸೊಸೈಟಿ ಕಡಿಮೆ ಅವಧಿಯಲ್ಲಿ ಹಲವು ಸಮಾಜಮುಖಿ ಚಟುವಟಿಕೆಗಳನ್ನು ಯಶಸ್ವಿಯಾಗಿ ನಡೆಸಿದೆ. ಸೇವಾ ಮನೋಭಾವ ಹೊಂದಿರುವ ಸಂಸ್ಥೆ ಮಕ್ಕಳ ಮನೋವಿಕಾಸಕ್ಕೆ ಪೂರಕವಾದ ಶಿಕ್ಷಣವನ್ನು ಲಿಟ್ಲ್ ಪರ್ಲ್ಸ್ ಪ್ಲೇ ಹೋಂ ಮತ್ತು ಅನಿಕೇತನ ಕಾನ್ವೆಂಟ್ ಮೂಲಕ ನೀಡುತ್ತಿದೆ. ಮುಂದಿನ ದಿನಗಳಲ್ಲಿ ಎಲ್ಲ ಸದಸ್ಯರ ಸಹಕಾರದೊಂದಿಗೆ ಮತ್ತಷ್ಟು ಉತ್ತಮ ಕಾರ್ಯಕ್ರಮಗಳನ್ನು ನಡೆಸುವ ಉದ್ದೇಶ ಹೊಂದಲಾಗಿದೆ ಎಂದರು.
ಪ್ರಧಾನ ಕಾರ್ಯದರ್ಶಿ ಸತೀಶ ಮಾತನಾಡಿ, ಸಮಾನಮನಸ್ಕರಿಂದ ಸಮಾಜಮುಖಿ ಚಿಂತನೆಯೊಂದಿಗೆ 2014ರಲ್ಲಿ ಆರಂಭವಾದ ವಿಇಎಸ್ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ, ಬೇಸಿಗೆ ಶಿಬಿರ, ಚೆಸ್ ತರಬೇತಿ, ಸೃಜನಾತ್ಮಕ ಕೃತಿಗಳ ಬಿಡುಗಡೆ ಸೇರಿದಂತೆ ವಿಶಿಷ್ಟವಾದ ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.