ಸಹಕಾರ ಸಂಘಗಳು ತತ್ವ, ನೀತಿ, ನಿಯಮಗಳನ್ನು ಅರ್ಥಮಾಡಿಕೊಳ್ಳಬೇಕು: ಎಸ್.ಎಲ್. ಧಮೇಗೌಡ
ಕಡೂರು, ಆ.14: ಸಹಕಾರ ಸಂಘಗಳು ಸಹಕಾರಿ ತತ್ವ ಮತ್ತು ನೀತಿ ನಿಯಮಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕು ಎಂದು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಅಧ್ಯಕ್ಷ ಎಸ್.ಎಲ್. ಧಮೇಗೌಡ ಹೇಳಿದರು.
ಅವರು ಸೋಮವಾರ ಪಟ್ಟಣದ ಪಿಸಿಎಲ್‌ಡಿ ಬ್ಯಾಂಕ್ ಸಭಾಂಗಣದಲ್ಲಿ ತಾಲೂಕಿನ ಪ್ರಾಥಮಿಕ ಕೃಷಿ ಸಹಕಾರ ಸಂಘಗಳ ವತಿಯಿಂದ ಡಿಸಿಸಿ ಬ್ಯಾಂಕ್ ಅಧ್ಯಕ್ಷರು ಮತ್ತು ತಾಲೂಕಿನ ನಿರ್ದೇಶಕರುಗಳಿಗೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಸಹಕಾರಿ ತತ್ವಗಳು ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಒಂದೇ ಆಗಿದೆ. ಆ ಪ್ರಕಾರವೇ ಸಭೆಗಳನ್ನು ನಡೆಸಬೇಕು. ಅರ್ಹರಿಗೆಮತ್ತು ಅಗತ್ಯವಿರುವ ರೈತರಿಗೆ ಸಾಲ ಮತ್ತಿತರ ಸೌಲಭ್ಯಗಳನ್ನು ನೀಡಬೇಕು. ಸಹಕಾರ ಸಂಘಗಳ ಕಾರ್ಯದರ್ಶಿಗಳ ಹೊಣೆ ಈ ನಿಟ್ಟಿನಲ್ಲಿ ಅತ್ಯಂತ ಹೆಚ್ಚಿನದ್ದಾಗಿದೆ. ಕಾರ್ಯದರ್ಶಿಗಳು ಇದನ್ನು ತಿಳಿದುಕೊಳ್ಳಬೇಕು ಎಂದು ಹೇಳಿದರು.
ಸಹಕಾರಿ ಸಂಘಗಳಲ್ಲಿ ನಿಯಮಗಳಪ್ರಕಾರ ಸಂಘವನ್ನು ಮುನ್ನಡೆಸುವಲ್ಲಿಸ್ವಲ್ಪ ನಿರ್ಲಕ್ಷ್ಯತನ ಕಾಣುತ್ತಿದೆ. ಇದುಸರಿಯಲ್ಲ. ಸಹಕಾರಿ ಕ್ಷೇತ್ರ ಸಂಪೂರ್ಣ ರಾಜಕೀಯೇತರವಾದದ್ದು. ಇಲ್ಲಿ ಕೇವಲ ರೈತರ ಅಭಿವೃದ್ದಿಯನ್ನಷ್ಟೇ ಗುರಿಯನ್ನಾಗಿಟ್ಟುಕೊಂಡು ಕಾರ್ಯನಿರ್ವಹಿಸಬೇಕಾಗುತ್ತದೆಂದರು.
ರೈತರ ಸರ್ವಾಂಗೀಣ ಅಭಿವೃದ್ಧಿಗಾಗಿ ರೈತರಿಗಾಗಿಯೇ ಇರುವ ಬ್ಯಾಂಕ್ ಇದಾಗಿದ್ದು, ಜಿಲ್ಲೆಯಲ್ಲಿ ಡಿಸಿಸಿ ಬ್ಯಾಂಕ್ ಸಧೃಢವಾಗಿದೆ. ರಾಜಕೀಯದ ಲೇಪವಿಲ್ಲದೆ ತಮ್ಮನ್ನು ಬ್ಯಾಂಕ್ ಅಧ್ಯಕ್ಷನನ್ನಾಗಿ ಆಯ್ಕೆಮಾಡಿದ್ದಾರೆ. ತಮ್ಮ ಜೊತೆಗೆ ಬ್ಯಾಂಕಿನ ಎಲ್ಲಾ ನಿರ್ದೇಶಕರು ಸಹಕಾರ ಮತ್ತು ಸಲಹೆ ನೀಡಿದ್ದಾರೆ. ಆದ್ದರಿಂದಲೇ ಪ್ರಾಮಾಣಿಕವಾಗಿ ಬ್ಯಾಂಕಿನ ಅಭಿವೃದ್ಧಿಯಲ್ಲಿ ಶ್ರಮಿಸಲು ಸಾಧ್ಯವಾಗಿದೆ ಎಂದರು.
ಇತೀಚೆಗೆ ಜಿಲ್ಲೆಯಲ್ಲಿ ರೂ. 35.60 ಕೋಟಿ ಸಾಲ ಮನ್ನಾ ಆಗಿದ್ದು, ಇದರ ಹೆಚ್ಚಿನ ಲಾಭ ಕಡೂರು ತಾಲೂಕಿನ ರೈತರಿಗೆ ಉಪಯೋಗವಾಗಿದೆ. ಒಟ್ಟಾರೆಯಾಗಿ ಸಹಕಾರಿ ತತ್ವದಲ್ಲಿ ನಂಬಿಕೆಯಿಟ್ಟು ಪರಸ್ಪರ ಸಹಕಾರದೊಡನೆ ಬ್ಯಾಂಕಿನ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಬ್ಯಾಂಕ್ ನಿರ್ದೇಶಕ ಕೆ.ಎಂ.ಕೆಂಪರಾಜು ಮತ್ತು, ಮತ್ತೋರ್ವ ನಿರ್ದೇಶಕ ಬೆಳ್ಳಿಪ್ರಕಾಶ್ ಮಾತನಾಡಿದರು. ಇದೇ ಸಂದರ್ಭ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಅಧ್ಯಕ್ಷ ಎಸ್.ಎಲ್. ಧರ್ಮೇಗೌಡ, ನಿರ್ದೇಶಕರಾದ ಬೆಳ್ಳಿಪ್ರಕಾಶ್, ಕೆ.ಎಂ. ಕೆಂಪರಾಜು, ಟಿ.ಡಿ. ಸತ್ಯನ್, ಎಸ್.ಜಿ. ರಾಮಪ್ಪ ಅವರನ್ನು ಕೃಷಿ ಪತ್ತಿನ ಸಹಕಾರ ಸಂಘಗಳ ವತಿಯಿಂದ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಕಾಂತರಾಜು ಮತ್ತು ತಾಲೂಕಿನ 30 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಉಪಸ್ಥಿತರಿದ್ದರು.