ದಾವಣಗೆರೆ: ಶ್ರೀಕೃಷ್ಣ ಜಯಂತಿ ಕಾರ್ಯಕ್ರಮ
ದಾವಣಗೆರೆ: ಗೊಲ್ಲರ ಸಮುದಾಯದವರು ಸಲ್ಲಿಸಿರುವ 10 ಬೇಡಿಕೆಗಳನ್ನು ಶೀಘ್ರವೇ ಪರಿಶೀಲಿಸಿ, ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಭರವಸೆ ನೀಡಿದರು.
ನಗರದ ಕುವೆಂಪು ಕನ್ನಡ ಭವನದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಗೊಲ್ಲರ (ಯಾದವ) ಸಂಘದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಶ್ರೀಕೃಷ್ಣ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಸರ್ಕಾರ ಪ್ರತಿ ಸಮುದಾಯದ ಸಮುದಾಯ ಭವನ ನಿರ್ಮಾಣಕ್ಕೆ ಅತ್ಯಂತ ಕಡಿಮೆ ದರದಲ್ಲಿ ನಿವೇಶನ ನೀಡುತ್ತಿದೆ. ನಗರದಲ್ಲಿ ಗೊಲ್ಲರ ಸಮುದಾಯ ಭವನಕ್ಕೆ ಸೂಕ್ತ ಜಾಗ ಗುರುತಿಸಿದರೆ ಅದನ್ನು ಮಂಜೂರು ಮಾಡಿಸಿಕೊಡುತ್ತೇನೆ. ಗೊಲ್ಲರಹಟ್ಟಿಗಳ ಹತ್ತಿರವಿರುವ ಸರ್ಕಾರಿ ಜಾಗ ಅಥವಾ ಖರೀದಿ ಮೂಲಕವಾದರೂ ಸ್ಮಶಾನವನ್ನು ಕೊಡಿಸಲಾಗುವುದು. ನಗರದ ಯಾವ ವೃತ್ತಕ್ಕೆ ಕೃಷ್ಣನ ಹೆಸರಿಡಬೇಕೆಂಬುದನ್ನು ಮನವಿ ಮೂಲಕ ಪಾಲಿಕೆಗೆ ಸಲ್ಲಿಸಿದರೆ ಆ ವೃತ್ತಕ್ಕೆ ಶ್ರೀಕೃಷ್ಣನ ಹೆಸರಿಡಲಾಗುವುದು ಎಂದ ಅವರು, ಯಾವುದೇ ಸಮಾಜದ ವಿದ್ಯಾರ್ಥಿಗಳಿಗೆ ಪ್ರತ್ಯೇಕ ವಸತಿನಿಲಯ ನೀಡಲು ಬರುವುದಿಲ್ಲ. ಆದ್ದರಿಂದ ಯಾವುದೇ ಬಿಸಿಎಂ ಹಾಸ್ಟೇಲ್‌ಗಳಿಗೆ ನಿಮ್ಮ ಮಕ್ಕಳನ್ನು ಸೇರಿಸಬಹುದು. ಒಟ್ಟಿನಲ್ಲಿ ಗೊಲ್ಲರ ಸಮುದಾಯದ ಸಮಗ್ರ ಅಭಿವೃದ್ಧಿಗೆ ನಾನು ಹಾಗೂ ನಮ್ಮ ಸರ್ಕಾರ ಕಟಿಬದ್ಧವಾಗಿದೆ ಎಂದು ಅವರು ತಿಳಿಸಿದರು.
ಶ್ರೀಕೃಷ್ಣ ವಿಷ್ಣುವಿನ ಹತ್ತು ಅವತಾರಗಳಲ್ಲಿ ಒಬ್ಬ. ಆತ ಒಬ್ಬ ಮಹಾನ್ ರಾಜತಾಂತ್ರಿಕ, ನ್ಯಾಯವಾದಿ, ಎಂದಿಗೂ ಸತ್ಯದ ಪರವಾಗಿ ನಿಲ್ಲಬೇಕೆಂಬ ಕಾರಣಕ್ಕೆ ಪಾಂಡವರ ಪರ ನಿಂತು ಸತ್ಯಕ್ಕೆ ಜಯ ತಂದುಕೊಟ್ಟವನು. ಬದುಕಿನ ಪ್ರತಿ ಕ್ಷಣದಲ್ಲೂ ಕೃಷ್ಣನ ಆದರ್ಶ, ತತ್ವ, ಬುದ್ದಿಮತ್ತೆಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂದರು.
ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 167 ಕಂದಾಯ ರಹಿತ ಗ್ರಾಮಗಳೆಂದು ಗುರುತಿಸಿ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದರಲ್ಲಿ 40 ಗ್ರಾಮಗಳಿಗೆ ಮೊದಲ ಹಂತದ ಅಧಿಸೂಚನೆ ಹೊರಡಿಸಲಾಗಿದ್ದು, ಮುಂದಿನ ದಿನಗಳಲ್ಲಿ ಅಂತಹ ಗ್ರಾಮಗಳಿಗೆ ಸಕಲ ಸೌಲಭ್ಯ ಕಲ್ಪಿಸಲಾಗುವುದೆಂದರು.
ಕಾರ್ಯಕ್ರಮದ ಸಾನ್ನಿಧ್ಯವನ್ನು ಚಿತ್ರದುರ್ಗ ಯಾದವ ಪೀಠದ ಕೃಷ್ಣ ಯಾದವಾನಂದ ಶ್ರೀ ವಹಿಸಿದ್ದರು. ಮೇಯರ್ ಅನಿತಾಬಾಯಿ ಮಾಲತೇಶ್, ಜಿಪಂ ಉಪಾಧ್ಯಕ್ಷೆ ಗೀತಾಬಾಯಿ ನಾಯ್ಕ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಗಿರೀಶ್ ಮುದೇಗೌಡ್ರ, ಪಾಲಿಕೆ ಸದಸ್ಯೆ ನಾಗರತ್ನ, ಗೊಲ್ಲರ ಸಂಘದ ಜಿಲ್ಲಾಧ್ಯಕ್ಷ ತಿಪ್ಪೆಸ್ವಾಮಿ, ತಹಸೀಲ್ದಾರ್ ಸಂತೋಷ್‌ಕುಮಾರ್ ಮತ್ತಿತರರಿದ್ದರು.
ಹರಿಹರದ ಸೀತಾ ಎಸ್. ನಾರಾಯಣ ಶ್ರೀಕೃಷ್ಣನ ಕುರಿತು ವಿಶೇಷ ಉಪನ್ಯಾಸ ನೀಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಸ್ವಾಗತಿಸಿದರು. ಸುಮತಿ ಜಯಪ್ಪ ನಿರೂಪಿಸಿದರು. ರಾಜಗೋಪಲ ಭಾಗವತ್ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.