ಶಾಹುಲ್ ಹಮೀದ್ ಹತ್ಯೆ ಪ್ರಕರಣ: ಮೂವರು ಆರೋಪಿಗಳು ಖುಲಾಸೆ

Update: 2017-08-14 14:55 GMT

ಮಡಿಕೇರಿ, ಆ.14: 2015ರ ನವೆಂಬರ್ 10ರಂದು ಮಡಿಕೇರಿಯಲ್ಲಿ ಟಿಪ್ಪು ಜಯಂತಿಯ ಸಂದರ್ಭ ನಡೆದ ಗಲಭೆೆಯಲ್ಲಿ ಗುಂಡೇಟಿನಿಂದ ಸಾವನ್ನಪ್ಪಿದ  ಪ್ರಕರಣದ ಮೂವರು ಆರೋಪಿಗಳನ್ನು ಸೂಕ್ತ ಸಾಕ್ಷ್ಯಾಧಾರಗಳ ಕೊರತೆಯ ಹಿನ್ನೆಲೆಯಲ್ಲಿ ನಗರದ ಒಂದನೇ ಅಪರ ಸತ್ರ ಜಿಲ್ಲಾ ನ್ಯಾಯಾಲಯ ಖುಲಾಸೆಗೊಳಿಸಿದೆ.

ಪ್ರಕರಣದ ಪ್ರಮುಖ ಆರೋಪಿಗಳಾಗಿರುವ ಕವನ್, ಭೀಷ್ಮ ಹಾಗೂ ರಮೇಶ್ ಎಂಬುವವರೆ ಖುಲಾಸೆಗೊಂಡ ವ್ಯಕ್ತಿಗಳಾಗಿದ್ದಾರೆ.

2015ರ ನವೆಂಬರ್ 10ರಂದು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಪರ, ವಿರೋಧಗಳ ನಡುವೆ ಜಿಲ್ಲಾಡಳಿತದಿಂದ ಟಿಪ್ಪು ಜಯಂತಿ ಆಯೋಜಿಸಲ್ಪಟ್ಟಿತ್ತು. ಸಾಕಷ್ಟು ವಿರೋಧ ಮತ್ತು ಆತಂಕದ ವಾತಾವರಣದ ನಡುವೆಯೂ ಜಿಲ್ಲೆಯ ವಿವಿಧೆಡೆಗಳಿಂದ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಆಯೋಜಿತ ಕಾರ್ಯಕ್ರಮಕ್ಕೆ ನೂರಾರು ಮಂದಿ ಆಗಮಿಸಿದ್ದರು, ಅದೇ ರೀತಿ ಸಿದ್ದಾಪುರ ಬಳಿಯ ನೆಲ್ಯಹುದಿಕೇರಿಯ ಶಾಹುಲ್ ಹಮೀದ್ ಕೂಡ ವಾಹನವೊಂದರಲ್ಲಿ ಬಂದಿದ್ದರು.

ಟಿಪ್ಪು ಜಯಂತಿಗೆ ವಿರೋಧ, ಪ್ರತಿಭಟನೆ, ಪೊಲೀಸರ ಲಾಠಿ ಪ್ರಹಾರದಂತಹ ಘಟನೆಗಳ ನಡುವೆ ನಗರದ ಜಿಲ್ಲಾ ಆಸ್ಪತ್ರೆಯ ಮಹಿಳಾ ಮತ್ತು ಮಕ್ಕಳ ವಿಭಾಗದ ಬಳಿಯಲ್ಲಿ ವಿಹಿಂಪ ಕುಟ್ಟಪ್ಪ ಅವರು ಸಾವನ್ನಪ್ಪಿದ ಘಟನೆಯೂ ನಡೆದಿತ್ತು. ಕಾರ್ಯಕ್ರಮಕ್ಕೆಂದು ಬಂದವರು ವಾಹನಗಳಲ್ಲಿ ತಮ್ಮ ತಮ್ಮ ಊರಿಗೆ ತೆರಳುತ್ತಿದ್ದರು.

ಇದೇ ರೀತಿ ಶಾಹುಲ್ ಹಮೀದ್ ಮತ್ತು ಆತನ ಊರಿನ ಹಲವು ಮಂದಿ ವಾಹನವೊಂದರಲ್ಲಿ ನೆಲ್ಯಹುದಿಕೇರಿಗೆ ತೆರಳುವ ಸಂದರ್ಭ, ನಗರದ ಸಮೀಪದ ನೀರುಕೊಲ್ಲಿ ಎಂಬಲ್ಲಿ ಅಪರಿಚಿತ ವ್ಯಕ್ತಿಗಳು ಸಿಡಿಸಿದ ಗುಂಡು ಬಡಿದು ಗಂಭೀರ ಸ್ವರೂಪದಲ್ಲಿ ಗಾಯಗೊಂಡ ವಾಹನದಲ್ಲಿದ್ದ ಶಾಹುಲ್ ಹಮೀದ್ ಕೆಲವುದಿನಗಳ ಬಳಿಕ ಸಾವನ್ನಪ್ಪಿದ್ದರು.

ಪ್ರಕರಣದ ಬಗ್ಗೆ ಜಿಲ್ಲಾ ಪೊಲೀಸರು ತನಿಖೆೆ ನಡೆಸಿ ಕವನ್, ಭೀಷ್ಮ  ಹಾಗೂ ರಮೇಶ್ ವಿರುದ್ಧ ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ಒಂದನೇ ಅಪರ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಪವನೇಶ್ ಅವರು ಸೂಕ್ತ ಸಾಕ್ಷ್ಯಾಧಾರಗಳ ಕೊರತೆಯ ಹಿನ್ನೆಲೆಯಲ್ಲಿ ಆರೋಪಿಗಳನ್ನು ಖುಲಾಸೆ ಗೊಳಿಸಿ ಇಂದು ತೀರ್ಪು ನೀಡಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News