ಆಕರ್ಷಿಸಿದ 3500 ಅಡಿ ಬೃಹತ್ ರಾಷ್ಟ್ರಧ್ವಜ ಮೆರವಣಿಗೆ
ಹಾಸನ, ಆ.14: 71ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ನಗರದಲ್ಲಿ ಎನ್‌ಎಸ್‌ಯುಐ ಇವರ ಸಂಯುಕ್ತಾಶ್ರಯದಲ್ಲಿ ಸೋಮವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ 3500 ಅಡಿ ಉದ್ದ ಬೃಹತ್ ರಾಷ್ಟ್ರಧ್ವಜದ ಮೆರವಣಿಗೆಯು ನೋಡುಗರ ಗಮನಸೆಳೆಯಿತು.
ನಗರದ ಎಂ.ಜಿ. ರಸ್ತೆ, ಸರಕಾರಿ ಮಹಿಳಾ ಕಾಲೇಜು ಬಳಿಯಿಂದ ಹೊರಟ ಮೆರವಣಿಗೆಯು ಗಾಂಧಿ ಪ್ರತಿಮೆ ಬಳಿ ಉದ್ಘಾಟನೆಯನ್ನು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರವಿನಾಕಲಗೂಡು, ಕೆಪಿಸಿಸಿ ಸದಸ್ಯ ಹೆಚ್.ಕೆ.ಮಹೇಶ್ ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ರಂಜಿತ್ ಗೊರೂರು ಪಾರಿವಾಳ ಹಾರಿ ಬಿಡುವುದರ ಮೂಲಕ ನೆರವೇರಿಸಿದರು.
ನಂತರ ಮಾತನಾಡಿದ ಉದ್ಘಾಟಕರು, ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯತೆ, ರಾಷ್ಟ್ರಾಭಿಮಾನ ಮೂಡಿಸುವ ಉದ್ದೇಶದಿಂದ ಬೃಹತ್ ಜಾಥಾವನ್ನು ಆಯೋಜಿಸಿದ್ದು, ಸುಮಾರು 3 ರಿಂದ 4 ಸಾವಿರ ವಿದ್ಯಾರ್ಥಿಗಳು 1.5 ಕಿ.ಮೀ. ಉದ್ದದ 3500 ಅಡಿ ಬಾವುಟವನ್ನು ಹಿಡಿದು "ದೇಶಕ್ಕಾಗಿ ವಿದ್ಯಾರ್ಥಿಗಳ ನಡಿಗೆ" ಎಂಬ ಬೃಹತ್ ಜಾಥಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ನಮ್ಮ ದೇಶ, ನಮ್ಮ ಧ್ವಜ ಎಂಬ ಘೋಷಣೆಯ ಮೂಲಕ ಇಂತಹ ಕಾರ್ಯಕ್ರಮ ಉತ್ತಮವಾಗಿದೆ ಎಂದು ಹೇಳಿದರು.
ಇದೆ ವೇಳೆ ಎನ್.ಎಸ್.ಯು.ಐ. ಜಿಲ್ಲಾ ಉಪಾಧ್ಯಕ್ಷರುಗಳಾದ ಉಜ್ವಲ್, ಸಾಗರ್, ಕಾರ್ಯದರ್ಶಿ ಅಂಥೋಣಿರಾಜ್, ನಾನ ನಿರ್ದೇಶಕ ಸದಸ್ಯ ಚಂದ್ರಶೇಖರ್, ಆಕಾಶ್ ಇತರರು ಉಪಸ್ಥಿತರಿದ್ದರು.