ದುಷ್ಟ ಸಂಹಾರದ ಸಂಕೇತ ಶ್ರೀಕೃಷ್ಣ: ಅಪ್ಪಚ್ಚು ರಂಜನ್ ಅಭಿಪ್ರಾಯ

Update: 2017-08-14 15:38 GMT

ಮಡಿಕೇರಿ, ಆ.14: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಇಸ್ಕಾನ್ ಸಹಕಾರದಲ್ಲಿ ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ಸೋಮವಾರ ಶ್ರೀಕೃಷ್ಣ ಜನ್ಮಾಷ್ಠಮಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಮಾತನಾಡಿ, ಮನಸ್ಸಿಗೆ ನೆಮ್ಮದಿ, ಶಾಂತಿ ನೆಲೆಸಲು ಕೃಷ್ಣನನ್ನು ಪ್ರಾರ್ಥಿಸುವುದು ವಾಡಿಕೆಯಾಗಿದ್ದು, ದುಷ್ಟ ಸಂಹಾರದ ಸಂಕೇತ ಶ್ರೀಕೃಷ್ಣ ಎಂದು ಬಣ್ಣಿಸಿದರು.

ದುಷ್ಟರನ್ನು ಸಂಹಾರ ಮಾಡುವುದು ಕೃಷ್ಣನ ಗುರಿಯಾಗಿತ್ತು. ಕೃಷ್ಣನ ತುಂಟಾಟ ಹಾಗೂ ಸೌಜನ್ಯ ಸ್ವಭಾವವನ್ನು ಮಕ್ಕಳಿಂದ ಕುಟುಂಬದವರು ಬಯಸುತ್ತಾರೆ ಎಂದು ಶಾಸಕರು ಹೇಳಿದರು.

ರೇಷ್ಮೆ ಮಾರಾಟ ಮಂಡಳಿ ರಾಜ್ಯ ಅಧ್ಯಕ್ಷರಾದ ಟಿ.ಪಿ.ರಮೇಶ್ ಅವರು ಮಾತನಾಡಿ, ಶ್ರೀಕೃಷ್ಣ ಮಹಾಭಾರತದಲ್ಲಿ ತನ್ನದೇ ಆದ ಪಾತ್ರವನ್ನು ನಿರ್ವಹಿಸಿದ್ದು, ಜನಮೆಚ್ಚುಗೆಗೆ ಪಾತ್ರರಾಗಿದ್ದರು ಎಂದು ತಿಳಿಸಿದರು.  ಕೃಷ್ಣನನ್ನು ಪ್ರೀತಿ ಮಾಡದ ಜಗತ್ತು ಇಲ್ಲ. ಕೃಷ್ಣನ ಜಾಣ್ಮೆ, ಶಕ್ತಿಯನ್ನು ಪ್ರತಿಯೊಬ್ಬರು ಮೆಚ್ಚಿಕೊಂಡು ಆರಾಧಿಸುತ್ತಾರೆ. ಭಗವದ್ ಗೀತೆಯಲ್ಲಿ ಕೃಷ್ಣನ ಪಾತ್ರ ಅಚ್ಚುಮೆಚ್ಚು. ಸಂತೋಷ, ಪ್ರೀತಿ, ವಿಶ್ವಾಸಕ್ಕೆ ಮತ್ತೊಂದು ಹೆಸರೇ ಕೃಷ್ಣ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಸತೀಶ್ ಕುಮಾರ್ ಅವರು ಮಾತನಾಡಿ, ಶ್ರೀಕೃಷ್ಣನ ಜೀವನ ಚರಿತ್ರೆಯನ್ನು ಪ್ರತಿಯೊಬ್ಬರೂ ಅಧ್ಯಯನ ಮಾಡುವಂತಾಗಬೇಕು. ಶ್ರೀಕೃಷ್ಣನ ಜೀವನ ಚರಿತ್ರೆ ಮಾನವ ಜೀವನದಲ್ಲಿ ಪಾಠವಿದ್ದಂತೆ ಎಂದು ಹೇಳಿದರು.  ಬೆಂಗಳೂರು ಇಸ್ಕಾನ್ ದೇವಾಲಯದ ಧೀನಾನಾಥ್ ಚೈತನ್ಯದಾಸ್ ಅವರು ಶ್ರೀಕೃಷ್ಣನ ಪ್ರವಚನ ಹಾಗೂ ಗಾಯನದ ಮೂಲಕ ಶ್ರೀಕೃಷ್ಣನ ಜೀವನ ಚರಿತ್ರೆ, ಮಹಾಭಾರತದಲ್ಲಿ ನಿರ್ವಹಿಸಿದ ಪಾತ್ರದ ಬಗ್ಗೆ ವರ್ಣಿಸಿದರು.

ಜಿಲ್ಲಾ ಪಂಚಾಯತ್ ಮುಖ್ಯ ಲೆಕ್ಕಾಧಿಕಾರಿ ನಂದ, ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಕೆ.ರಾಮಪ್ಪ, ಜಿಲ್ಲಾ ಖಜಾನಾಧಿಕಾರಿ ಸತೀಶ್, ಕಾರ್ಮಿಕ ಇಲಾಖೆ ಅಧಿಕಾರಿ ಎಂ.ಎಚ್.ರಾಮಕೃಷ್ಣ, ಜಿಲ್ಲಾ ಉದ್ಯೋಗ ವಿನಿಮಯಾಧಿಕಾರಿ ಸಿ.ಜಗನ್ನಾಥ್, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರಾದ ಬಿ.ಆರ್.ಗಿರೀಶ್, ನಾನಾ ಇಲಾಖೆ ಅಧಿಕಾರಿಗಳು, ಶಾಲಾ ವಿದ್ಯಾರ್ಥಿಗಳು ಮತ್ತಿತರರು ಇದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಣಜೂರು ಮಂಜುನಾಥ್ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News