ಸಚಿವ ರೋಶನ್ ಬೇಗ್ ಬಾಬಾಬುಡಾನ್ ಗಿರಿ ಭೇಟಿ: ಪರಿಶೀಲನೆ

Update: 2017-08-14 15:45 GMT

ಚಿಕ್ಕಮಗಳೂರು, ಆ.14: ರಾಜ್ಯ ಸಚಿವ ಸಂಪುಟವು ಅತೀ ಶೀಘ್ರದಲ್ಲಿ ಬಾಬಾಬುಡಾನ್ ಗಿರಿ ವಿವಾದದ ಕುರಿತು ಸಮಿತಿಯ ವರದಿಯನ್ನು ಪಡೆಯಲಿದೆ ಎಂದು ನಗರಾಭಿವೃದ್ದಿ ಸಚಿವ ಆರ್.ರೋಷನ್ ಬೇಗ್ ಹೇಳಿದರು.

ಅವರು ಸೋಮವಾರ ವಿವಾದಿತ ಶ್ರೀ ದತ್ತಾತ್ರೇಯ ಬಾಬಾಬುಡಾನ್ ಸ್ವಾಮಿ ದರ್ಗಾಕ್ಕೆ ಭೇಟಿ ನೀಡಿ ಮಾತನಾಡಿದರು.

ಸುಪ್ರಿಂಕೋರ್ಟ್ ನಿರ್ಧೇಶನದಂತೆ ರಾಜ್ಯ ಸರಕಾರ ಸಚಿವ ಸಂಪುಟವು ಈ ವಿವಾದ ಇತಯರ್ಥಕ್ಕೆ ಗಮನ ಹರಿಸಿದೆ. ಹೈಕೊರ್ಟ್ ನಿವೃತ್ತ ನ್ಯಾಯಮೂರ್ತಿಗಳ ಸಮಿತಿ ರಚಿಸಿದ್ದು, ಅವರು ಶೀಘ್ರದಲ್ಲಿಯೇ ಗಿರಿಗೆ ತೆರಳಿ ವರದಿ ಸಿದ್ದಪಡಿಸಲಿದ್ದಾರೆ. ಅನಂತರ ವರದಿಯನ್ನು ಸರಕಾರ ಪಡೆದು ಅದರ ಸಾಧಕ-ಬಾಧಕಗಳನ್ನು ಗಮನಿಸಿ ವಿವಾದ ಇತ್ಯರ್ಥಕ್ಕೆ ಪ್ರಯತ್ನಿಸಲಿದೆ ಎಂದು ಭರವಸೆ ನೀಡಿದರು.

ಚುನಾವಣೆ ಸಮಯದಲ್ಲಿ ವಿವಾದದ ಕುರಿತು ಇತ್ಯರ್ತಕ್ಕೆ ಪ್ರಯತ್ನ ನಡೆಸುವಿರಾ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಚುನಾವಣೆಗೂ ವಿವಾದ ಇತ್ಯರ್ಥಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.

ಗಿರಿಗೆ ತೆರಳಿದ ಸಮಯದಲ್ಲಿ ಭಾರೀ ಮಳೆ ಸುರಿಯಿತು. ಈ ವೇಳೆ ಸಚಿವರು ಮತ್ತು ಅಧಿಕಾರಿಗಳು ಪಕ್ಕದ ಕಟ್ಟಡವೊಂದರಲ್ಲಿ ಆಶ್ರಯ ಪಡೆದರು. ಭೇಟಿ ವೇಳೆ ಜಿಲ್ಲಾಧಿಕಾರಿಯವರಿಂದ ಸಚಿವರು ಮಾಹಿತಿ ಪಡೆದರು. ಸಚಿವರು ವಿವಾದಿತ ನಿಷೇಧಿತ ಪ್ರದೇಶದ ಹೊರಗೆ ಗೋರಿಗಳಿಗೆ ಹಸಿರು ಬಟ್ಟೆ ಹೊದಿಸಿದರು.

ಈ ಸಮಯದಲ್ಲಿ ಜಿಲ್ಲಾಧಿಕಾರಿ ಜಿ.ಸತ್ಯವತಿ, ಎಸ್ಪಿ ಕೆ.ಅಣ್ಣಾಮಲೈ, ಅರಣ್ಯ ವಸತಿ ವಿಹಾರಧಾಮದ ಅಧ್ಯಕ್ಷ ಎ.ಎನ್.ಮಹೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜೇಗೌಡ ಮತ್ತಿತರರಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News