ಊರಿಂದ ಊರಿಗೆ ಅಲೆಯುತ್ತಿರುವ ಹಿರಿಯ ಪೋಷಕ ನಟ ಸದಾಶಿವ ಬ್ರಹ್ಮಾವರ

Update: 2017-08-15 08:13 GMT

 ಕುಮಟಾ, ಆ.15: ಕನ್ನಡದ ಜನಪ್ರಿಯ ಪೋಷಕ ನಟ ಸದಾಶಿವ ಬ್ರಹ್ಮಾವರ ಅವರನ್ನು ಕುಟುಂಬ ಸದಸ್ಯರು ಮನೆಯಿಂದ ಹೊರಹಾಕಿದ್ದು, ಊರಿಂದ ಊರಿಗೆ ಅಲೆಮಾರಿಯಂತೆ ಅಲೆಯುತ್ತಿದ್ದಾರೆ.
ಉತ್ತರಕನ್ನಡದ ಕುಮಟಾದ ಬೀದಿಬದಿಯಲ್ಲಿ ಹಿರಿಯ ನಟರೊಬ್ಬರು ಒಂಟಿಯಾಗಿ ನಡೆದುಕೊಂಡು ಹೋಗುತ್ತಿರುವುದನ್ನು ಕಂಡ ಜನರು ಅವರಿಗೆ ಊಟ ಹಾಗೂ ವಸತಿ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ.
ಸದಾಶಿವ 150ಕ್ಕೂ ಅಧಿಕ ಕನ್ನಡ ಚಲನಚಿತ್ರಗಳು ಹಾಗೂ ಧಾರವಾಹಿಗಳಲ್ಲಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.
‘‘ನನ್ನ ಮಕ್ಕಳು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಆದರೆ, ಯಾರೂ ನನ್ನನ್ನು ನೋಡಿಕೊಳ್ಳುತ್ತಿಲ್ಲ. ಓರ್ವ ಮಗ ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಉದ್ಯೋಗದಲ್ಲಿದ್ದಾನೆ’’ ಎಂದು ಹೇಳಿರುವ ಸದಾಶಿವ ಮಗನ ವಿಳಾಸವನ್ನು ತಿಳಿಸಲು ನಿರಾಕರಿಸಿದರು. ಮಕ್ಕಳೊಂದಿಗೆ ಜಗಳವಾಗಿತ್ತೇ ಎಂಬ ಬಗ್ಗೆಯೂ ತಿಳಿಸಲಿಲ್ಲ.
‘‘ಹಲವು ಫೋಟೊಗಳು ಹಾಗೂ ದೇವರ ವಿಗ್ರಹಗಳನ್ನು ಕಸಿದುಕೊಂಡ ಕುಟುಂಬ ಸದಸ್ಯರು ನನ್ನನ್ನು ಮನೆಯಿಂದ ಹೊರಹಾಕಿದ್ದಾರೆ. ನಾಟಕದ ಮೇಲಿನ ಪ್ರೀತಿಯಿಂದ ಎಳೆಯ ಪ್ರಾಯದಲ್ಲೇ ಉಡುಪಿ ಬಿಟ್ಟು ಹೊರಟಿದ್ದೆ. ನನ್ನ ಜೀವನದಲ್ಲಿ ಬಹಳಷ್ಟು ಕಷ್ಟ-ಕಾರ್ಪಣ್ಯ ಎದುರಿಸಿದ್ದೇನೆ. ನನ್ನ ಪತ್ನಿ ಕೂಡ ಕಲಾವಿದೆಯಾಗಿದ್ದಳು. ನಾನು ಸ್ವಾಭಿಮಾನಿ. ಯಾರಿಂದಲೂ ಸಹಾಯವನ್ನು ಕೇಳುವವನಲ್ಲ. ಹಣೆಬರಹ ನನ್ನನ್ನು ಇಲ್ಲಿಗೆ ಎಳೆದುತಂದಿದೆ. ಮುಂದೆ ಎಲ್ಲಿಗೆ ಕೊಂಡೊಯುತ್ತದೋ ನೋಡಬೇಕು. ನನ್ನ ಜೀವನದಲ್ಲಿ ಹಣ ಹೊರತುಪಡಿಸಿ ಎಲ್ಲವನ್ನೂ ಪಡೆದಿದ್ದೇನೆ. ಕಠಿಣ ಪರಿಶ್ರಮದಲ್ಲಿ ಚಿತ್ರರಂಗದಲ್ಲಿ ಖ್ಯಾತಿ ಪಡೆದಿದ್ದೇನೆ. ಕುಮಟಾ ಜನರು ನನ್ನನ್ನು ಗುರುತಿಸಿ ಸಹಾಯಕ್ಕೆ ಮುಂದಾಗಿದ್ದಾರೆ’’ ಎಂದು ಸದಾಶಿವ ಬ್ರಹ್ಮಾವರ ಹೇಳಿದ್ದಾರೆ.
ನೀವು ಬೆಂಗಳೂರಿಗೆ ವಾಪಸಾಗಲು ನಾನು ಸಹಾಯ ಮಾಡುವೆ ಎಂದು ಪೊಲೀಸ್ ಸಿಬ್ಬಂದಿಯೊಬ್ಬರು ಮುಂದೆ ಬಂದಾಗ ಅವರ ಸಹಾಯವನ್ನು ನಿರಾಕರಿಸಿದ ಬ್ರಹ್ಮಾವರ,‘‘ ಕಳೆದ ಕೆಲವು ದಿನಗಳಿಂದ ನಾನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಅಲೆದಾಡುತ್ತಿರುವೆ. ನನ್ನ ಪರಿಚಿತರೊಬ್ಬರ ಭೇಟಿಯಾಗಲು ಹುಬ್ಬಳ್ಳಿಗೆ ತೆರಳುವೆ’’ಎಂದು ಹೇಳಿದ್ದಾರೆ.
ಕೆಲವು ಯುವಕರು ಬ್ರಹ್ಮಾವರ ನೆರವಿಗೆ ಮುಂದಾಗಿದ್ದು, ಅವರನ್ನು ಬಸ್‌ಸ್ಟಾಂಡ್‌ಗೆ ಕರೆದೊಯ್ದು ಹುಬ್ಬಳ್ಳಿಯ ಟಿಕೆಟ್ ನೀಡಿ ಕಳುಹಿಸಿಕೊಟ್ಟಿದ್ದಾರೆ. ಅವರು ರವಿವಾರ ಸಂಜೆ ಹುಬ್ಬಳ್ಳಿಗೆ ತೆರಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News